ನವದೆಹಲಿ: ಮೋದಿ ಅಲೆಯಲ್ಲಿ ಬಿಜೆಪಿ ಸಂಸದರ ಜತೆಗೆ, ಸಂಪುಟದ ಸಚಿವರೂ ಜಯದ ಪತಾಕೆ ಹಾರಿಸಿದ್ದಾರೆ. ಮೋದಿ ಅವರ 48 ಸದಸ್ಯರ ಸಂಪುಟದಲ್ಲಿ 43 ಮಂದಿ ಗೆದ್ದಿದ್ದು, ಐವರು ಮಾತ್ರ ಸೋತಿದ್ದಾರೆ.
ಆಡಳಿತ ವಿರೋಧಿ ಅಲೆಯಲ್ಲಿ ಸಂಪುಟದ ಸದಸ್ಯರೇ ಸೋಲಿನ ರುಚಿ ಕಾಣುವುದು ಸಾಮಾನ್ಯ. ಆದರೆ, ಮೋದಿ ಸಂಪುಟದಲ್ಲಿ ಹಾಗೆ ಆಗಿಲ್ಲ. ಹೆಚ್ಚು ಕಡಿಮೆ ಎಲ್ಲರೂ ಭಾರೀ ಅಂತರದಿಂದಲೇ ಗೆದ್ದಿದ್ದಾರೆ. ಇವರೆಲ್ಲರಲ್ಲಿ ಅದ್ಭುತ ಗೆಲುವು ಎಂಬುದು ಸ್ಮತಿ ಇರಾನಿ ಅವರ ಕಡೆಯಿಂದ ಬಂದಿದೆ. ಉತ್ತರ ಪ್ರದೇಶದ ಅಮೇಠಿ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೇ ಗೆಲ್ಲುವ ಮೂಲಕ ಸ್ಮತಿ ಎಲ್ಲರ ಹುಬ್ಬೇರಿಸಿದ್ದಾರೆ.
ಪ್ರಧಾನಿಗೆ ಪ್ರಚಂಡ ಗೆಲುವು: ವಾರಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ 4,79,505 ಮತಗಳ ಅಂತರದಿಂದ ಗೆದ್ದಿದ್ದಾರೆ. ವಿಶೇಷವೆಂದರೆ, ಕಳೆದ ಬಾರಿಗಿಂದ ಈ ಬಾರಿ ಗೆಲುವಿನ ಅಂತರವನ್ನೂ ಮೋದಿ ಹೆಚ್ಚಿಸಿಕೊಂಡಿದ್ದಾರೆ. ಇನ್ನು ಭಾರೀ ಗೆಲುವು ಸಿಕ್ಕಿರುವುದು ಮತ್ತೂಬ್ಬ ಸಚಿವ ಗಿರಿರಾಜ್ ಸಿಂಗ್ ಅವರಿಗೆ. ಇವರು ಬಿಹಾರ್‌ನ ಬೆಗುಸೆರಾಯ್ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿ ಕನ್ನಯ್ಯಕುಮಾರ್ ವಿರುದ್ಧ 4.22.217 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇತ್ತ ಕರ್ನಾಟಕದ ಉತ್ತರ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಂತಕುಮಾರ್ ಹೆಗಡೆ ಅವರು, 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ. ಕರ್ನಾಟಕದ ಪಾಲಿಗೆ ಇವರದ್ದೇ ಅತ್ಯಂತ ದೊಡ್ಡ ಗೆಲುವು. ಇನ್ನು ಕರ್ನಾಟಕದಿಂದ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಡಿ.ವಿ.ಸದಾನಂದ ಗೌಡ, ರಮೇಶ್ ಜಿಗಜಿಣಗಿ ಅವರೂ ಭಾರೀ ಅಂತರದಿಂದಲೇ ಗೆದ್ದಿದ್ದಾರೆ.
ಉಳಿದಂತೆ, ಗಜೇಂದ್ರ ಸಿಂಗ್ ಶೇಖಾವತ್, ಸತ್ಯಪಾಲ್ ಸಿಂಗ್, ಸಂಜೀವ್ ಬಲ್ಯಾನ್, ಮನೇಕಾ ಗಾಂಧಿ, ಎಸ್.ಎಸ್.ಅಹ್ಲುವಾಲಿಯಾ, ಸುದರ್ಶನ್ ಭಗತ್, ವಿ.ಕೆ.ಸಿಂಗ್, ಕಿರಣ್ ರಿಜಿಜು, ರಾಜ್ಯವರ್ಧನ್ ರಾಥೋರ್, ಅರ್ಜುನ್ ರಾಮ್ ಮೆಘಾವಲ್, ಮಹೇಶ್ ಶರ್ಮಾ, ಸಂತೋಷ್ ಗಂಗ್ವಾರ್, ರಾಮ್ ಕೃಪಾಲ್ ಯಾದವ್, ಹರ್ಸೀಮೃತ್ ಕೌರ್ ಬಾದಲ್, ಬಾಬುಲ್ ಸುಪ್ರೀಯೋ, ಹರ್ಷವರ್ಧನ್, ಓ್ರಮ್, ಶ್ರೀಪಾದ್ ನಾಯಕ್, ಜಿತೇಂದ್ರ ಸಿಂಗ್, ಇಂದ್ರಜಿತ್ ಸಿಂಗ್, ನರೇಂದ್ರ ಸಿಂಗ್ ತೋಮರ್, ಅಜಯ್ ತಮಾ ಅವರೂ ಗೆದ್ದಿದ್ದಾರೆ.
ಗೆದ್ದ ಪ್ರಮುಖ ಸಚಿವರು
•ರಾಜನಾಥ್ ಸಿಂಗ್-ಲಕ್ನೋ •ನಿತಿನ್ ಗಡ್ಕರಿ-ನಾಗ್ಪುರ •ರಾಧಾಮೋಹನ್ ಸಿಂಗ್- ಪೂರ್ವಿ ಚಂಪಾರಣ್ • ರವಿಶಂಕರ್ ಪ್ರಸಾದ್-ಪಾಟ್ನಾಸಾಹೀಬ್ •ಅಶ್ವಿನ್‌ಕುಮಾರ್ ಚೌಬೆ – ಫರೀದಾಬಾದ್
ಸೋತ ಸಚಿವರು
•ಕೆ.ಜೆ.ಅಲ್ಫೋನ್ಸ್ – ಎರ್ನಾಕುಲಂ •ಹರ್ದೀಪ್ ಪುರಿ – ಅಮೃತಸರ •ಮನೋದ್ ಸಿನ್ಹಾ – ಘಾಜೀಪುರ •ಅನಂತ್ ಗೀತೆ – ರಾಯ್‌ಘಡ •ಹನ್ಸ್‌ರಾಜ್ ಗಂಗಾರಾಮ್ – ಚಂದ್ರಾಪುರ