Advertisement

ವಿಶ್ವವೇ ಮೆಚ್ಚಿದೆ ಪ್ರಧಾನಿ ಮೋದಿ ಆಡಳಿತ

01:56 PM May 19, 2022 | Team Udayavani |

ಕೊಪ್ಪಳ: ಕಾಂಗ್ರೆಸ್‌ ಸರ್ಕಾರದ ಆಡಳಿತಕ್ಕೆ ಬೇಸತ್ತು ದೇಶದ ಜನತೆ 2014ರಲ್ಲಿ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವ ಬೆಂಬಲ ನೀಡಿದ್ದು, ಮೋದಿ ಅವರು ಜನಪರ ಆಡಳಿತ ನೀಡಿ ಇಡೀ ವಿಶ್ವವೇ ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

Advertisement

ನಗರ ಶಿವಶಾಂತ ಮಂಗಲ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ನಡೆದ ಜಿಲ್ಲಾ ಪ್ರಕೋಷ್ಟಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಭಾರತವನ್ನು ವಿಶ್ವ ನೋಡುವ ದೃಷ್ಟಿಕೋನವೇ ಬೇರೆ, ಮೋದಿ ಆಡಳಿತ ಬಂದ ಮೇಲೆ ನೋಡುವ ದೃಷ್ಟಿಕೋನವೇ ಬೇರೆಯಾಗಿದೆ. ಮೋದಿ ಅವರ ಜನಪರ ಆಡಳಿತದಿಂದಾಗಿ ಇಡೀ ದೇಶವೇ 2019 ರಲ್ಲಿ ಮತ್ತೆ ಬೆಂಬಲ ನೀಡಿತು. ಇದರಿಂದ ಜಗತ್ತಿನಲ್ಲಿ ಭಾರತದ ಗೌರವ ಹೆಚ್ಚಾಗಿದೆ ಎಂದರು.

ಕೋವಿಡ್‌ ಸಂಕಷ್ಟದಲ್ಲಿ ಮೋದಿ ಅವರು ದೇಶದ ಜನರ ಆರೋಗ್ಯ ಕಾಪಾಡಲು ಶಕ್ತಿ ಮೀರಿ ಶ್ರಮಿಸಿದ್ದಾರೆ. ಇದಲ್ಲದೇ ಲಸಿಕೆ ವಿತರಣೆಗೆ ವೇಗ ನೀಡಿದ್ದಲ್ಲದೇ, ವಿವಿಧ ದೇಶಗಳಿಗೂ ಪೂರೈಕೆ ಮಾಡಿದ್ದರು. ಮೋದಿ ಅವರು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಯೋಜನೆಗಳು ರೈತರ ಖಾತೆಗೆ ನೇರವಾಗಿ ತಲುಪಲಿ ಎನ್ನುವ ಉದ್ದೇಶದಿಂದ ಕಿಸಾನ್‌ ಸಮ್ಮಾನ್‌ ಮೂಲಕ ರೈತರ ಖಾತೆಗೆ ನೇರ ಹಣ ಹಾಕುವ ಯೋಜನೆ ಜಾರಿ ಮಾಡಿದ್ದಾರೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಿಸಲು ಜೆಜೆಎಂ ಯೋಜನೆ ಜಾರಿ ತಂದಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿಶೇಷ ಅನುದಾನ ಕೊಟ್ಟಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಿಯ ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿ ಮಾಡುತ್ತಿದ್ದಾರೆ. ಈಗಾಗಲೇ ಚುನಾವಣೆಗೆ ಸಮಯ ಹತ್ತಿರವಿದ್ದು, ಎಲ್ಲರೂ ಸನ್ನದ್ಧರಾಗಿರುವಂತೆ ಕರೆ ನೀಡಿದರು.

ಪ್ರಕೋಷ್ಟಗಳ ಸಂಚಾಲಕ ಬಾನುಪ್ರಕಾಶ ಮಾತನಾಡಿ, ಬಿಜೆಪಿ ಪರಿವರ್ತನೆಗಾಗಿ ಅಸ್ತಿತ್ವಕ್ಕೆ ಬಂದಿರುವ ಸಿದ್ಧಾಂತದ ಪಕ್ಷವಾಗಿದೆ. ನಾವು ಯಾವತ್ತೂ ಚುನಾವಣಾ ರಾಜಕೀಯ ಮಾಡಲ್ಲ. ಬಿಜೆಪಿ ಅಧಿಕಾರಕ್ಕೆ ಬಡಿದಾಡುವ ಪಕ್ಷ‌ ಅಲ್ಲ. ದೇಶದ ಹಿತ ಕಾಪಾಡುವ ಪಕ್ಷ‌ವಾಗಿದೆ. ಕಾಂಗ್ರೆಸ್‌ ಬೇವಿನ ಮರವಿದ್ದಂತೆ, ಎಲ್ಲರಲ್ಲೂ ಸ್ವಜನ ಪಕ್ಷ‌ಪಾತ, ದ್ವೇಷ ಬಿತ್ತಿದೆ. ಈಗ ಚಿಂತನ ಶಿಬಿರ ನಡೆಸಿದೆ ಎಂದರು.

Advertisement

ಸಂಸದ ಸಂಗಣ್ಣ ಕರಡಿ ಮಾತನಾಡಿ, ಬಿಜೆಪಿಗೆ ಕಾರ್ಯಕರ್ತರೇ ಜೀವಾಳ. ಇಲ್ಲಿ ಬಿಜೆಪಿಯ ಗುಲಾಬಿ ಹೂವುಗಳಿವೆ. ಪ್ರಕೋಷ್ಠಗಳ ಮೂಲಕ ಪಕ್ಷ‌ ಕಟ್ಟುವ ಕೆಲಸ ನಡೆದಿದೆ. ಪಕ್ಷದ ಹಲವು ನಾಯಕರ ತ್ಯಾಗದ ಪ್ರತೀಕವಾಗಿ ಪಕÒ‌ ಇಂದು ಬೆಳೆದು ನಿಂತಿದೆ. ಮೋದಿ ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದಾರೆ. ಭ್ರಷ್ಟಾಚಾರ ನಿಲ್ಲಬೇಕು ಎನ್ನುವ ವಿಚಾರ ಬಂದಾಗ ಮೋದಿ ಎಲ್ಲ ಸೋರಿಕೆ ತಡೆಯುವ ಕೆಲಸ ಮಾಡಿ ನೇರವಾಗಿಯೇ ಫಲಾನುಭವಿಗಳಿಗೆ ಸಹಾಯ ಧನ ತಲುಪುವಂತೆ ಮಾಡಿದ್ದಾರೆ. ಅಧಿಕಾರದಲ್ಲಿ 9 ದೇಶಗಳಿಗೆ ಲಸಿಕೆ ಪೂರೈಸುವ ಕೆಲಸ ಮಾಡಿದ್ದಾರೆ ಎಂದರು.

ಇಂದು ಭಾರತದ ಕೀರ್ತಿ ವಿಶ್ವಕ್ಕೆ ಹಬ್ಬಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಹೊಸ ವಿವಿ, ಸಿಂಗಟಾಲೂರು ಏತ ನೀರಾವರಿ, ಅಂಜನಾದ್ರಿ, ನವಲಿ ಡ್ಯಾಂ ಸೇರಿ ಹಲವು ಅಭಿವೃದ್ಧಿ ಯೋಜನೆಗೆ ಸಹಕಾರ ನೀಡಿದ್ದಾರೆ. ಕೇವಲ ಭಾವನಾತ್ಮಕವಾಗಿ ದೇಶ ಕಟ್ಟಲು ಆಗಲ್ಲ. ಬದಲಿಗೆ ಅಭಿವೃದ್ಧಿ ಮೂಲಕ ಕಟ್ಟುವ ಕೆಲಸ ಮಾಡಬೇಕು ಎಂದು ಅಭಿವೃದ್ಧಿ ಮಾಡುತ್ತಿದ್ದಾರೆ ಎಂದರು. ಶಾಸಕ ಪರಣ್ಣ ಮನುವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌, ಬಿಜೆಪಿ ರಾಷ್ಟ್ರೀಯ ಪರಿಷತ್‌ ಸದಸ್ಯ ಸಿ.ವಿ. ಚಂದ್ರಶೇಖರ, ಪಕ್ಷದ ಚನ್ನಮಲ್ಲಿಕಾರ್ಜುನ, ಹೇಮಲತಾ ನಾಯಕ, ಸಿದ್ದೇಶ ಯಾದವ, ಚಂದ್ರಶೇಖರ ಪಾಟೀಲ್‌ ಹಲಗೇರಿ, ರವಿಂದ್ರ ಪೈ, ಮಾಯಾ ಪ್ರದೀಪ, ತಿಪ್ಪೇರುದ್ರಸ್ವಾಮಿ, ಈಶಪ್ಪ ಹಿರೇಮನಿ, ಪ್ರಭು ಕಪಗಲ್‌, ಜಿ. ವೀರಪ್ಪ ಉಪಸ್ಥಿತರಿದ್ದರು.

ಸಿಎಂ ಆಗುವ ಆಸೆ ನನಗಿಲ್ಲ: ನಾನು ಸಿಎಂ ಆಗಬೇಕೆಂಬ ಆಸೆಯಿಲ್ಲ. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಮಾತಿನ ಭರಾಟೆಯಲ್ಲಿ ನಾನು ಮುಖ್ಯಮಂತ್ರಿಯಾಗಿ ಎನ್ನುವ ಪದ ಬಳಿಸಿದ್ದೇನೆ. ಆದರೆ ಅಂತಹ ಆಸೆ ನನಗಿಲ್ಲ. ಸಚಿವನಾಗಬೇಕೆನ್ನುವ ಆಸೆಯೂ ನನಗಿಲ್ಲ. ಆದರೂ ನನಗೆ ಪಕ್ಷ ಜವಾಬ್ದಾರಿ ನೀಡಿದೆ ಎಂದು ಸಚಿವ ಹಾಲಪ್ಪ ಆಚಾರ್‌ ಹೇಳಿದರು. ಮಾತಿನ ಭರಾಟೆಯಲ್ಲಿ ಹಾಗೆ ಹೇಳಿದ್ದೇನೆಯೇ ಹೊರತು ಮತ್ತೇನೂ ಇಲ್ಲ. ನಾನು ಸಿಎಂ ಆಗಬೇಕೆನ್ನುವ ಕನಸು ಕಂಡವನಲ್ಲ. ಪಕ್ಷವು ಕೊಟ್ಟಿರುವ ಜವಾಬ್ದಾರಿಯನ್ನು ನಿಭಾಯಿಸುವೆ ಎಂದರು.

ವಿದ್ಯಾರ್ಥಿಗಳ ರಕ್ಷಣೆಗಾಗಿ ಯುದ್ಧ ನಿಲ್ಲಿಸಿದ್ದರು ಮೋದಿ: ಕೊಪ್ಪಳ: ಭಾರತದ ವಿದ್ಯಾರ್ಥಿಗಳ ರಕ್ಷಣೆಗಾಗಿ ರಷ್ಯಾ ಹಾಗೂ ಉಕ್ರೇನ್‌ ಅಧ್ಯಕ್ಷರೊಂದಿಗೆ ಮಾತನಾಡಿ ಕೆಲವು ಗಂಟೆ ಯುದ್ಧ ನಿಲ್ಲಿಸಿದ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್‌ ಹೇಳಿದರು.

ನಗರದ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ನಾನು ಈ ಹಿಂದೆಯೇ ಈ ವಿಷಯ ಹೇಳಿದಾಗ ಕೆಲವರು ಅಪಹಾಸ್ಯ ಮಾಡಿದ್ದರು. ಆದರೆ, ನಾನು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅದು ನೂರಕ್ಕೆ ನೂರು ಸತ್ಯ ಎಂದು ಸಮರ್ಥಿಸಿಕೊಂಡರು. ಉಕ್ರೇನ್‌ ಅಧ್ಯಕ್ಷ ಝಲನಸ್ಕಿ ಮತ್ತು ರಷ್ಯಾ ಅಧ್ಯಕ್ಷ ವಾದ್ಲಿಮೀರ್‌ ಪುಟೀನ್‌ ಅವರೊಂದಿಗೆ ಚರ್ಚೆ ಮಾಡಿ, ನಾಗರಿಕರ ಹಿತರಕ್ಷಣೆಯ ದೃಷ್ಟಿಯಿಂದ 8 ಗಂಟೆಗಳ ಕಾಲ ಯುದ್ಧ ನಿಲ್ಲಿಸಿದ್ದಾರೆ. ಯುದ್ಧ ನಡೆಯುತ್ತಿರುವ ಎರಡು ದೇಶಗಳ ಅಧ್ಯಕ್ಷರೊಂದಿಗೆ ಮಾತನಾಡಿದ ಜಗತ್ತಿನ ಏಕೈಕ ನಾಯಕ ನರೇಂದ್ರ ಮೋದಿ ಎಂದರು.

ಉಕ್ರೇನ್‌ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳ ರಕ್ಷಣೆ ಮಾಡಿದ್ದಾರೆ. ಕೇವಲ ಭಾರತೀಯ ವಿದ್ಯಾರ್ಥಿಗಳು ಮಾತ್ರವಲ್ಲದೇ ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳ ವಿದ್ಯಾರ್ಥಿಗಳು ಭಾರತದ ಬಾವುಟ ಹಿಡಿದು ತಮ್ಮ ದೇಶಗಳಿಗೆ ವಾಪಸ್ಸಾಗಿದ್ದಾರೆ. ಈ ಹಿಂದೇ ಭಾರತದ ಪ್ರಧಾನಿ ಮಂತ್ರಿಗಳು ಬೇರೆ ದೇಶಕ್ಕೆ ಹೋದರೇ ಸಾಲ ಕೇಳಲು ಬಂದಿದ್ದಾರೆ ಎನ್ನುತ್ತಿದ್ದರು. ಆದರೆ, ಈಗ ರೆಡ್‌ಕಾಪೆìಟ್‌ ಹಾಕಿ ಸ್ವಾಗತಿಸುತ್ತಾರೆ. ಮೋದಿ ಅವರು ಇಂತಹ ಹಿರಿಮೆಯನ್ನು ತಂದುಕೊಟ್ಟಿದ್ದಾರೆ ಎಂದರು.

ದೇಶದ ಮುಸ್ಲಿಮರು ಬದಲಾಗಬೇಕಿದೆ ಕೊಪ್ಪಳ: ದೇಶಸ ಮುಸ್ಲಿಮರು ಅವರೇನು ಬೇರೆಯವರಲ್ಲ. ಅವರೆಲ್ಲರೂ ನಮ್ಮವರೇ ಆದರೆ ಅವರು ಭಾರತದ ಸಂವಿಧಾನ ಪಾಲಿಸಬೇಕು. ನಿಮ್ಮ ಆಚರಣೆ ಏನೇ ಇರಲಿ. ಅದಕ್ಕೆ ನಮ್ಮ ವಿರೋಧವಿಲ್ಲ. ಕಾನೂನು ಪಾಲಿಸಲಿ. ಅವರೂ ಬದಲಾಗಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಭಾನುಪ್ರಕಾಶ ಹೇಳಿದರು. ಮುಸ್ಲಿಮರು ತಮ್ಮ ಆಚಾರ, ವಿಚಾರಗಳನ್ನು ಆಚರಣೆ ಮಾಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅವರು ಪರಿಷತ್‌ ಕಾಯ್ದೆಯೇ ಅಂತಿಮ ಎನ್ನುವಂತೆ ಇಲ್ಲ. ನಾವು ಸಹ ಮನುಸ್ಮೃತಿಯಂತೆ ಬದುಕುತ್ತೇವೆ ಎನ್ನುವಂತಿಲ್ಲ. ದೇಶದಲ್ಲಿ ಡಾ| ಅಂಬೇಡ್ಕರ್‌ ಅವರು ಕೊಟ್ಟ ಸಂವಿಧಾನವೇ ಎಲ್ಲರಿಗೂ ಶ್ರೇಷ್ಠ. ಅವರು ಬುರ್ಕಾ ಆದರೂ ಹಾಕಿಕೊಳ್ಳಲಿ, ಮತ್ತೂಂದಾದರು ಹಾಕಿಕೊಳ್ಳಲಿ, ಅದು ಅವರ ಇಷ್ಟ. ಆದರೆ ಅದೇ ಧರ್ಮದಲ್ಲಿ ಇರುವವರು ಬುರ್ಕಾ ಹಾಕಿಕೊಳ್ಳಲು ಇಷ್ಟವಿಲ್ಲದಿದ್ದರೇ ಅವರಿಗೂ ಸ್ವಾತಂತ್ರ್ಯ ಇರಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸಂವಿಧಾನ ಇದೆ. ಅದನ್ನು ಎಲ್ಲರೂ ಪಾಲಿಸಬೇಕು. ದೇಶ ಮೊದಲು ಎನ್ನುವುದನ್ನು ಎಲ್ಲರೂ ಒಪ್ಪಬೇಕು. ಬರಿ ಪ್ರಧಾನಿ ನರೇಂದ್ರ ಮೋದಿ ಒಬ್ಬರೇ ದೇಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ನಾವು ಬದಲಾವಣೆ ತರಲು ಶ್ರಮಿಸಬೇಕು. ಹಾಗಾಗಿ ಪ್ರಕೋಷ್ಟಗಳು ಸ್ಥಾಪನೆಯಾಗಿ ದೇಶ ಸೇವೆಗೆ ಸನ್ನದ್ಧವಾಗಿದೆ. ಪ್ರಧಾನಿ ಅವರು ನಮಗೆ ದೇಶ ಮೊದಲು ಎನ್ನುವ ಮೇಲ್ಪಂಕ್ತಿ ಹಾಕಿ ಕೊಟ್ಟಿದ್ದಾರೆ. ನಾವು ನಮ್ಮ ಮುಖವನ್ನಿಟ್ಟುಕೊಂಡು ಮತ ಕೇಳಲು ಹೋಗಬೇಕಾ ಅಥವಾ ಮೋದಿ ಅವರ ಮುಖವನ್ನಿಟ್ಟು ಮತ ಕೇಳಬೇಕಾ ಎನ್ನುವುದನ್ನು ನೀವು ಚಿಂತಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next