Advertisement

ಬಡವರಿಗೆ ಮೋದಿಕೇರ್‌

08:50 AM Feb 02, 2018 | Karthik A |

ಅಮೆರಿಕದ ಒಬಾಮಾ ಕೇರ್‌ ಅನ್ನು ಮೀರಿಸುವ ಮೋದಿಕೇರ್‌ ಭಾರತದಲ್ಲಿ ಆರಂಭಗೊಳ್ಳಲಿದೆ. ವಿಶ್ವದ ಅತಿದೊಡ್ಡ ಸರಕಾರಿ ಪ್ರಾಯೋಜಿತ ಆರೋಗ್ಯ ವಿಮೆ ಯೋಜನೆಯನ್ನು ಮೋದಿ ಸರಕಾರ ಪ್ರಕಟಿಸಿದೆ. ಇದರಡಿ ದೇಶದ 10 ಕೋಟಿ ಬಡ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ವಾರ್ಷಿಕ ವಿಮೆ ಲಭಿಸಲಿದೆ. ಆಯುಷ್ಮಾನ್‌ ಭಾರತ ಕಾರ್ಯಕ್ರಮದಡಿ ಆರೋಗ್ಯ ಕ್ಷೇತ್ರದ 2  ಪ್ರಮುಖ ಯೋಜನೆಗಳನ್ನು ಕೇಂದ್ರ ಜಾರಿಗೆ ತರಲಿದೆ. ಒಂದು ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಎರಡು ರಾಷ್ಟ್ರೀಯ ಆರೋಗ್ಯ ರಕ್ಷಾ ಯೋಜನೆ. ಪ್ರಾಥಮಿಕ, ದ್ವಿತೀಯ ಹಾಗೂ ತೃತೀಯ ಆರೈಕೆ ವ್ಯವಸ್ಥೆಗಳತ್ತ ಗಮನ ಹರಿಸಿ ರೋಗ ತಡೆ ಹಾಗೂ ಆರೋಗ್ಯ ಉತ್ತೇಜನ ಹೀಗೆ ಎರಡೂ ಕಾರ್ಯಕ್ರಮ ಮೂಲಕ ಸಮಗ್ರ ಆರೋಗ್ಯ ಸೇವೆ  ಗುರಿ ಇದೆ.  

Advertisement

ಕಳೆದ ಬಜೆಟ್‌ನ ಪರಿಷ್ಕರಣೆ
ರಾಷ್ಟ್ರೀಯ ಆರೋಗ್ಯ ರಕ್ಷಾ ಯೋಜನೆಯನ್ನು ಕಳೆದ ಬಜೆಟ್‌ನಲ್ಲೇ ಸರಕಾರ ಘೋಷಿಸಿತ್ತು. ಕಳೆದ ಬಾರಿ ಪ್ರತಿ ಕುಟುಂಬಕ್ಕೆ 1 ಲಕ್ಷ ರೂ. ಆರೋಗ್ಯ ವಿಮೆ ಒದಗಿಸುವ ಪ್ರಸ್ತಾವವಿತ್ತು. ಆದರೆ ಯೋಜನೆ ಆರಂಭಗೊಂಡಿರಲಿಲ್ಲ. 2 ತಿಂಗಳ ಹಿಂದಷ್ಟೇ ಸಂಸತ್ತಿನಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದ ಸರಕಾರ, ಯೋಜನೆಯ ವ್ಯಾಪ್ತಿಯು ಇನ್ನೂ ಅಂತಿಮಗೊಂಡಿಲ್ಲ ಎಂದಿತ್ತು. ಇದೀಗ ವಿಮಾ ಕವರೇಜ್‌ ಅನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ. 

1.5 ಲಕ್ಷ ಆರೋಗ್ಯ ಕೇಂದ್ರಗಳು
ದೇಶದ ಮೂಲೆ ಮೂಲೆಗಳಿಗೂ ಆರೋಗ್ಯ ಕೇಂದ್ರಗಳನ್ನು ತಲುಪಿಸುವ ಯೋಜನೆಯನ್ನು ಕೇಂದ್ರ ಸರಕಾರ ಹಮ್ಮಿಕೊಂಡಿದೆ. ರಾಷ್ಟ್ರೀಯ ಆರೋಗ್ಯ ನೀತಿ, 2017 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳೇ ಭಾರತದ ಆರೋಗ್ಯ ವ್ಯವಸ್ಥೆಯ ಬುನಾದಿ ಎಂದು ಹೇಳಿದೆ.  ಈ ನಿಟ್ಟಿನಲ್ಲಿ ಜನರ ಮನೆಗಳ ಸಮೀಪಕ್ಕೇ ಆರೋಗ್ಯ ಸೇವೆಯನ್ನು ಕೊಂಡೊಯ್ಯುವ ಸಲುವಾಗಿ ದೇಶಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ತೆರೆಯಲಾಗುತ್ತದೆ. ಈ ಕೇಂದ್ರಗಳು ಸಾಂಕ್ರಾಮಿಕವಲ್ಲದ ಕಾಯಿಲೆಗಳು, ಪ್ರಸೂತಿ ಮತ್ತು ಮಕ್ಕಳ ಆರೋಗ್ಯ ಸೇವೆಗಳ ಸಹಿತ ಸಮಗ್ರ ಆರೋಗ್ಯ ಸೇವೆಯನ್ನು ಒದಗಿಸಲಿವೆ. ಈ ಕೇಂದ್ರಗಳು ಉಚಿತ ಅಗತ್ಯ ಔಷಧಿಗಳು ಹಾಗೂ ಡಯಗ್ನೊàಸ್ಟಿಕ್‌ ಸೇವೆಗಳನ್ನೂ ನೀಡಲಿವೆ. ಈ ಮಹತ್ವಾಕಾಂಕ್ಷಿ ಯೋಜನೆಗಾಗಿ 1,200 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಖಾಸಗಿ ಕ್ಷೇತ್ರ ಸಿಎಸ್‌ಆರ್‌ ಮೂಲಕ ಮತ್ತು ಫಿಲಿಯಾಂತ್ರೋಫಿಕ್‌ ಸಂಸ್ಥೆಗಳು ಈ ಕೇಂದ್ರಗಳನ್ನು ದತ್ತು ಪಡೆಯುವ ಅವಕಾಶವನ್ನೂ ಒದಗಿಸಲಾಗಿದೆ.

ಹಳೆ ಯೋಜನೆಗಳಿಗಿಂತ ಹೇಗೆ ಭಿನ್ನ?
ಈ ಹೊಸ ಯೋಜನೆ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯ (ಆರ್‌ಎಸ್‌ಬಿವೈ) ನಾಲ್ಕನೇ ಮರುರೂಪವಾಗಿದೆ. 2016-17ರಲ್ಲಿ ಆರ್‌ಎಸ್‌ಬಿವೈ ಅನ್ನು ರಾಷ್ಟ್ರೀಯ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಆರ್‌ಎಸ್‌ಎಸ್‌ವೈ) ಎಂಬುದಾಗಿ ಹಾಗೂ 2017-18ರಲ್ಲಿ ಎನ್‌ಎಚ್‌ಪಿಎಸ್‌ ಎಂಬುದಾಗಿ ಮರು ನಾಮಕರಣಗೊಳಿಸಲಾಗಿದೆ. ಯೋಜನೆಗಳ ನಿರ್ವಾಹಕರೂ ಬದಲಾಗಿದ್ದಾರೆ. ಆರ್‌ಎಸ್‌ವೈಬಿಯನ್ನು ಕಾರ್ಮಿಕ ಸಚಿವಾಲಯ ನಿರ್ವಹಿಸುತ್ತಿತ್ತು. ಬಳಿಕ ಆರ್‌ಎಸ್‌ಎಸ್‌ವೈ ಆಗುತ್ತಿದ್ದಂತೆ ಅದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕೈಸೇರಿತು. ಆದರೆ ಹೊಸ ಯೋಜನೆ  ವ್ಯಾಪ್ತಿಯನ್ನೂ ಹೆಚ್ಚಿಸಿರುವುದು ಗಮನಾರ್ಹ. ಆರ್‌ಎಸ್‌ಬಿವೈ ಬಡ ಕುಟುಂಬಗಳಿಗೆ 30,000 ರೂ. ನೀಡುತ್ತಿತ್ತು. ಎನ್‌ಎಚ್‌ಪಿಎಸ್‌ ಕಳೆದ ಬಾರಿ 1 ಲಕ್ಷ ರೂ. ಒದಗಿಸುವ ಯೋಜನೆಯಾಗಿತ್ತು. ಇದೀಗ 5 ಲಕ್ಷ ರೂ.ಗೇರಿದೆ. ಅಂದರೆ ಮೊತ್ತವು ಆರ್‌ಎಸ್‌ಬಿವೈ ಯೋಜನೆಗಿಂತ 17 ಪಟ್ಟು ಹೆಚ್ಚಿದೆ.   ಹೊಸ ಯೋಜನೆ 10 ಕೋಟಿ ಕುಟುಂಬಗಳನ್ನು ತಲಪುವ ವಿಸ್ತೃತ ಗುರಿ ಹೊಂದಿದೆ. 

ಸರಕಾರದ ಆರೋಗ್ಯ ಕಲ್ಪನೆ
– ಸ್ವಸ್ಥ ಭಾರತದಿಂದಷ್ಟೇ ಸಮೃದ್ಧ ಭಾರತ ನಿರ್ಮಾಣ ಸಾಧ್ಯ

Advertisement

– ನಾಗರಿಕರು ಆರೋಗ್ಯಯುತವಾಗಿ ಇರದ ಹೊರತು ಜನಶಕ್ತಿಯ ಲಾಭದ ಅರಿವು ಅಸಾಧ್ಯ

– 1200 ಕೋಟಿ ರೂ. : 1.5 ಲಕ್ಷ ಆರೋಗ್ಯ ಕೇಂದ್ರ ಸ್ಥಾಪನೆಗಾಗಿ ಮೀಸಲು

– ದೇಶಾದ್ಯಂತ ಜನರ ಮನೆಯ ಸಮೀಪದಲ್ಲೇ ಸಿಗಲಿದೆ ಆರೋಗ್ಯ ಸೇವೆ

– ಈ ಕೇಂದ್ರಗಳು ನೀಡಲಿವೆ ಉಚಿತ ಔಷಧ, ಡಯಾಗ್ನಾಸ್ಟಿಕ್‌ ಸೇವೆಗಳು

– ಖಾಸಗಿ ಕಂಪೆ‌ನಿಗಳಿಗೆ ಸಿಎಸ್‌ಆರ್‌ ಮೂಲಕ ಆರೋಗ್ಯ ಕೇಂದ್ರಗಳನ್ನು ದತ್ತು ಪಡೆಯುವ ಅವಕಾಶ

– ಎಲ್ಲರಿಗೂ ಆರೋಗ್ಯ ವಿಮೆ ಒದಗಿಸುವತ್ತ ಸರಕಾರದ‌ ದೃಢ ಹೆಜ್ಜೆ 

Advertisement

Udayavani is now on Telegram. Click here to join our channel and stay updated with the latest news.

Next