Advertisement

ಪ್ರತಿ ಮನೆಯಿಂದ ಮೋದಿ ಅಲೆ

04:17 AM May 14, 2019 | Team Udayavani |

ರತ್ಲಾಂ/ಸೋಲನ್‌/ಭಟಿಂಡಾ: ದೇಶದ ಪ್ರತಿಯೊಂದು ಮನೆಯಿಂದಲೂ ಮೋದಿ ಅಲೆ ಹೊರ ಹೊಮ್ಮಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಕೆಲವು ಮಂದಿ ಪಂಡಿತರು ಹೊಸದಿಲ್ಲಿಯಲ್ಲಿ ಕುಳಿತುಕೊಂಡು 2014ರಂತೆ ದೇಶದಲ್ಲಿ ಮೋದಿ ಅಲೆ ಇಲ್ಲ ಎಂದು ಪ್ರತಿಪಾದಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 19ರಂದು ನಡೆಯಲಿರುವ ಕೊನೆಯ ಹಂತದ ಮತದಾನಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ರತ್ಲಾಂ, ಹಿಮಾಚಲ ಪ್ರದೇಶದ ಸೋಲನ್‌, ಪಂಜಾಬ್‌ನ ಭಟಿಂಡಾಗಳಲ್ಲಿ ಪ್ರಚಾರ ನಡೆಸಿದರು. ರತ್ಲಾಂನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಕೆಲ ರಾಜಕೀಯ ಪಂಡಿತರಿಗೆ 2 ರೀತಿಯ ಜನರು ಇದ್ದಾರೆ ಎನ್ನುವ ವಿಚಾರ ಗೊತ್ತಿಲ್ಲ. ಮೊದಲು ಮತ ಹಾಕುವ ಯುವಕರು, ತಾಯಂದಿರು ಮತ್ತು ಸಹೋದರಿಯರು ಸಹೋದರನನ್ನು ಚುನಾಯಿಸಲು ಮನಸ್ಸು ಮಾಡಿದ್ದಾರೆ. ಏಕೆಂದರೆ ಅತ್ಯಾಚಾರ ಎಸಗುವವರಿಗೆ ಗಲ್ಲು ಶಿಕ್ಷೆ ಎಂದು ಕಾನೂನು ತಂದು ಅವರನ್ನು ರಕ್ಷಿಸುತ್ತಿದ್ದಾನೆ’ ಎಂದಿದ್ದಾರೆ. ಇದೇ ವೇಳೆ ಐಎನ್‌ಎಸ್‌ ವಿರಾಟ್ ಅನ್ನು ರಾಜೀವ್‌ ಗಾಂಧಿ ವೈಯಕ್ತಿಕ ಟ್ಯಾಕ್ಸಿಯಂತೆ ಬಳಕೆ ಮಾಡಿದ್ದರು ಎಂದು ಹೇಳಲು ಪ್ರಧಾನಿ ಮರೆಯಲಿಲ್ಲ.

Advertisement

ಪಾಪ ಮಾಡಿದ್ದಾರೆ: ಆರನೇ ಹಂತದ ಮತದಾನದ ವೇಳೆ ಹಕ್ಕು ಚಲಾಯಿಸದೆ ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌ ಮಹಾಪಾಪ ಎಸಗಿದ್ದಾರೆ ಎಂದು ಟೀಕಿಸಿದ್ದಾರೆ. ‘ದಿಗ್ವಿಜಯ ಸಿಂಗ್‌ ಅವರೇ, ಪ್ರಜಾಪ್ರಭುತ್ವದ ಹಬ್ಬದಲ್ಲಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ ಮಾಡಿದರು. ಆದರೆ ನೀವು ಮತ ಚಲಾಯಿಸಲಿಲ್ಲ’ ಎಂದು ಟೀಕಿಸಿದ್ದಾರೆ. ಅವರು ಮತದಾನ ಮಾಡಿ ಎಂದು ಹೇಳುವಲ್ಲಿ ಬ್ಯುಸಿಯಾಗಿದ್ದರು ಎಂದು ಲೇವಡಿ ಮಾಡಿದ್ದಾರೆ ಪ್ರಧಾನಿ.

ರಕ್ಷಣಾ ಡೀಲ್ ಎಟಿಎಂ: ಹಿಂದಿನ ಸಂದರ್ಭಗಳಲ್ಲಿ ಅಧಿಕಾರದಲ್ಲಿದ್ದ ವೇಳೆ ಕಾಂಗ್ರೆಸ್‌ ರಕ್ಷಣಾ ವ್ಯವಹಾರಗಳು ಎಟಿಎಂನಂತೆ ಇರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ರಕ್ಷಣಾ ಅಗತ್ಯಕ್ಕಾಗಿ ಶೇ.70ರಷ್ಟು ವಿದೇಶಗಳನ್ನೇ ಅವಲಂಬಿಸಬೇಕಾಗುತ್ತಿತ್ತು. ರಕ್ಷಣಾ ಖರೀದಿಯನ್ನು ಎಟಿಎಂ ಆಗಿಸುವ ನಿಟ್ಟಿನಲ್ಲಿಯೇ ಈ ಕ್ರಮ ಕೈಗೊಳ್ಳಲಾಗುತ್ತಿತ್ತು ಎಂದಿದ್ದಾರೆ ನರೇಂದ್ರ ಮೋದಿ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ಅವಧಿಯಲ್ಲಿ 150 ವರ್ಷಗಳಷ್ಟು ರಕ್ಷಣಾ ಉತ್ಪಾದನೆಯ ಅನುಭವ ಹೊಂದಿತ್ತು. ಅದೇ ಸಮಯದಲ್ಲಿ ಚೀನಾಕ್ಕೆ ಅಂಥ ಯಾವುದೇ ಅನುಭವ ಇರಲಿಲ್ಲ. ಆದರೆ ಈಗ ನಮ್ಮ ನೆರೆಯ ರಾಷ್ಟ್ರ ದೊಡ್ಡ ಪ್ರಮಾಣದಲ್ಲಿ ರಕ್ಷಣಾ ವಸ್ತುಗಳನ್ನು ಉತ್ಪಾದಿಸಿ ರಫ್ತು ಮಾಡುತ್ತದೆ ಎಂದು ಹೇಳಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಸೈನಿಕರಿಗೆ ಬುಲೆಟ್ಪ್ರೂಫ್ ಜಾಕೆಟ್ ನೀಡಲು ಕ್ರಮ ಕೈಗೊಳ್ಳಲಾಗಿರಲಿಲ್ಲ ಎಂದು ಟೀಕಿಸಿದ್ದಾರೆ.

ನಾಮ್‌ಧಾರ್‌ ನಿಮಗೇ ನಾಚಿಕೆಯಾಗಬೇಕು
1984ರಲ್ಲಿ ನಡೆದ ಸಿಕ್ಖ್ ದಂಗೆ ಸಮರ್ಥಿಸಿ ಮಾತನಾಡಿದ ಕಾಂಗ್ರೆಸ್‌ ಸ್ಯಾಮ್‌ ಪಿತ್ರೋಡಾರನ್ನು ನಾಚಿಕೆಯಾಗಬೇಕು ಎಂದ ನಾಮ್‌ಧಾರ್‌ (ರಾಹುಲ್ ಗಾಂಧಿ)ಗೇ ನಾಚಿಕೆಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಟಿಂಡಾದಲ್ಲಿ ಮಾತನಾಡಿದ ಪ್ರಧಾನಿ ಸ್ಯಾಮ್‌ ಪಿತ್ರೋಡಾ ತಮ್ಮ ಮನಸ್ಸಿನಿಂದ ಅಂಥ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಅವರನ್ನೇಕೆ ನೀವು ಬೈಯ್ಯಬೇಕು ಎಂದು ಪ್ರಶ್ನಿಸಿದ್ದಾರೆ. 50 ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್‌ ಪರದಾಡುತ್ತಿದೆ. ಏಕೆಂದರೆ ಆ ಪಕ್ಷದ ನಾಯಕನಿಗೇ ಹಲವು ರೀತಿಯ ಗೊಂದಲಗಳು ಇವೆ ಎಂದು ಲೇವಡಿ ಮಾಡಿದ್ದಾರೆ ಪ್ರಧಾನಿ. ‘ಕಾಂಗ್ರೆಸ್‌ನ ನೀತಿ ನಿರೂಪಕರಾಗಿದ್ದ ದಿ| ರಾಜೀವ್‌ ಗಾಂಧಿಯವರ ಪ್ರಮುಖ ಸಲಹೆಗಾರ ಮತ್ತು ನಾಮ್‌ದಾರ್‌ ಅವರ ಗುರು 1984ರ ಘಟನೆ ಬಗ್ಗೆ ಆದದ್ದು ಆಯಿತು ಎಂದಿದ್ದಾರೆ. ಅವರು ಅಮೆರಿಕದಿಂದ ಬಂದಿದ್ದಾರೆ. ಈ ನಿಲುವು ಕಾಂಗ್ರೆಸ್‌ನ ಅಹಂಕಾರ ಮತ್ತು ನಿಲುವನ್ನು ತೋರಿಸುತ್ತದೆ’ ಎಂದು ಹೇಳಿದ್ದಾರೆ.

ನಾಚಿಕೆಯಾಗಬೇಕು; ಕ್ಷಮೆ ಕೇಳಬೇಕು
‘ನಿಮಗೆ ನಾಚಿಕೆಯಾಗಬೇಕು. ಇದು ಸಂಪೂರ್ಣ ತಪ್ಪು’ ಹೀಗೆಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ನಾಯಕ ಸ್ಯಾಮ್‌ ಪಿತ್ರೋಡಾ ವಿರುದ್ಧ ಟೀಕೆ ಮಾಡಿದ್ದಾರೆ. ಪಂಜಾಬ್‌ನ ಖನ್ನಾದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘1984ರ ಸಿಕ್ಖ್ ವಿರೋಧಿ ದಂಗೆ ಬಗ್ಗೆ ಸ್ಯಾಮ್‌ ಪಿತ್ರೋಡಾ ವ್ಯಕ್ತಪಡಿಸಿದ ಅಭಿಪ್ರಾಯ ಸರಿಯಾದು ದಲ್ಲ. ಅವರು ಸಾರ್ವಜನಿಕವಾಗಿ ದೇಶದ ಕ್ಷಮೆ ಯಾಚಿಸಬೇಕು. ಈ ಅಂಶವನ್ನು ಬಹಿರಂಗವಾಗಿಯೇ ಹೇಳುತ್ತಿದ್ದೇನೆ. ಇಷ್ಟು ಮಾತ್ರವಲ್ಲ ಪಿತ್ರೋಡಾ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದೇನೆ’ ಎಂದು ಹೇಳಿದ್ದಾರೆ. ಸ್ಯಾಮ್‌ ಪಿತ್ರೋಡಾ ದಂಗೆ ಆದದ್ದು ಆಯಿತು ಏನೀಗ ಎಂದು ಹೇಳಿಕೆ ನೀಡಿ ಉಂಟಾಗಿರುವ ವಿವಾದದ ಬಿಸಿಯನ್ನು ತಗ್ಗಿಸಲು ಕಾಂಗ್ರೆಸ್‌ ಅಧ್ಯಕ್ಷ ಈ ಮೂಲಕ ಪ್ರಯತ್ನ ನಡೆಸಿದ್ದಾರೆ. ಬಿಜೆಪಿ ನಾಯಕ ರಂತೂ ರಾಹುಲ್ ಗಾಂಧಿ ವಿರುದ್ಧ ಪ್ರಬಲ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಲಘುವಾಗಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಫೆಡರಲ್ ಫ್ರಂಟ್‌ಗೆ ಸ್ಟಾಲಿನ್‌ ನಿರಾಸಕ್ತಿ

ಕಾಂಗ್ರೆಸ್‌ ಹಾಗೂ ಬಿಜೆಪಿಯೇತರ ಫೆಡರಲ್ ಫ್ರಂಟ್ ರಚಿಸುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್‌ ಕನಸಿಗೆ ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌ ತಣ್ಣೀರೆರಚಿದ್ದಾರೆ. ಚೆನ್ನೈಯಲ್ಲಿ ಸೋಮವಾರ ಇಬ್ಬರೂ ಮುಖಂಡರು ಭೇಟಿಯಾಗಿದ್ದರು. ಈ ವೇಳೆ ಫೆಡರಲ್ ಫ್ರಂಟ್‌ಗೆ ಬೆಂಬಲ ನೀಡುವಂತೆ ಕೆಸಿಆರ್‌ ಕೇಳಿಕೊಂಡರಾದರೂ, ಕಾಂಗ್ರೆಸ್‌ಗೆ ಬೆಂಬಲ ನೀಡುವುದಾಗಿ ಸ್ಟಾಲಿನ್‌ ಹೇಳಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯೇ ಪ್ರಧಾನಿಯಾಗಲಿ ಎಂದಿರುವ ಸ್ಟಾಲಿನ್‌, ತನ್ನ ಹೇಳಿಕೆಗೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್‌ಗೆ ನೀವು ಬೆಂಬಲಿಸಿ ಎಂದು ಕೆಸಿಆರ್‌ರನ್ನೇ ಸ್ಟಾಲಿನ್‌ ಕೇಳಿದ್ದಾರೆ ಎಂದು ಡಿಎಂಕೆ ವಕ್ತಾರ ಸರವಣನ್‌ ಅಣ್ಣಾದುರೈ ಹೇಳಿದ್ದಾರೆ.

ಬೆಳಗ್ಗೆ 5.30ಕ್ಕೆ ಮತ: ಅರ್ಜಿ ತಿರಸ್ಕಾರ

ರಮ್ಜಾನ್‌ ಮತ್ತು ಬಿಸಿ ಗಾಳಿ ಬೀಸುವ ಹಿನ್ನೆಲೆಯಲ್ಲಿ 19ರಂದು ನಡೆಯಲಿರುವ ಕೊನೇಯ ಹಂತದ ಮತದಾನ ದಿನ ಸಮಯವನ್ನು ಬೆಳಗ್ಗೆ 5.30ಕ್ಕೆ ಆರಂಭಿಸಬೇಕು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ತಿರಸ್ಕರಿಸಿದೆ. ನ್ಯಾ.ಇಂದಿರಾ ಬ್ಯಾನರ್ಜಿ ಮತ್ತು ನ್ಯಾ| ಸಂಜೀವ ಖನ್ನಾ ನೇತೃತ್ವದ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿ, ‘ಚುನಾವಣೆಯ ಹೆಚ್ಚಿನ ಹಂತಗಳು ಮುಕ್ತಾಯವಾಗಿವೆ. ಸಮಯ ನಿಗದಿ ಮಾಡುವುದು ಆಯೋಗದ ನಿರ್ಧಾರ. ಈ ಬಗ್ಗೆ ನಾವು ಏನನ್ನೂ ಸೂಚಿಸುವುದಿಲ್ಲ’ ಎಂದು ಅಭಿಪ್ರಾಯಪಟ್ಟಿತು. ಮೇ 2ರಂದು ಆಯೋಗ ಈ ಬಗ್ಗೆ ಪರಿಶೀಲಿಸುವಂತೆ ಸೂಚಿಸಿತ್ತು. 5ರಂದು ಈ ಸಲಹೆಯನ್ನು ತಿರಸ್ಕರಿಸಿತ್ತು.

ಸೋನಾ ಬಂಗಾಲ್ ಈಗ ಕಂಗಾಲ್

ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ಬಿರುಸಾಗಿದೆ. ನಾನು ಜೈಶ್ರೀರಾಂ ಎಂದು ಘೋಷಣೆ ಹಾಕುತ್ತೇನೆ. ಸಾಧ್ಯವಿದ್ದರೆ ಬಂಧಿಸಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸವಾಲು ಹಾಕಿದ್ದಾರೆ. ಪಶ್ಚಿಮ ಬಂಗಾಲದ ಕನ್ನಿಂಗ್‌ ಮತ್ತು ಬರಸಾತ್‌ಗಳಲ್ಲಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಅವರಿಗೆ ಜೈಶ್ರೀರಾಂ ಎಂದರೆ ಕೋಪ ಬರುತ್ತದೆ. ಹಾಗಿದ್ದರೆ ನಾನು ಜೈಶ್ರೀರಾಂ ಎಂದು ಹೇಳುತ್ತೇನೆ. ನಿಮಗೆ ಸಾಧ್ಯವಿದ್ದರೆ ಮಂಗಳವಾರ ಕೋಲ್ಕತಾಕ್ಕೆ ಆಗಮಿಸುವ ವೇಳೆ ಬಂಧಿಸಿ’ ಎಂದು ಸವಾಲು ಹಾಕಿದ್ದಾರೆ. ತೃಣಮೂಲ ಕಾಂಗ್ರೆಸ್‌ ನೇತೃತ್ವದ ಆಡಳಿತದ ಅವಧಿಯಲ್ಲಿ ಬಂಗಾರದಂಥ (ಸೋನರ್‌) ಬಂಗಾಲವನ್ನು ದಿವಾಳಿ (ಕಂಗಾಲ್) ಮಾಡಿದ್ದಾರೆ. ಅವರು ನುಸುಳುಕೋರರಿಗೆ ರಕ್ಷಣೆ ನೀಡಲು ಮಾತ್ರ ಉತ್ಸುಕರಾಗಿದ್ದಾರೆ ಎಂದು ಕಟಕಿಯಾಡಿದ್ದಾರೆ. ಮಮತಾ ನನ್ನ ರ್ಯಾಲಿಗಳನ್ನು ತಡೆಯಬಹುದು. ಆದರೆ ಬಿಜೆಪಿ ಜಯಗಳಿಸುವುದನ್ನು ನಿಲ್ಲಿಸಲು ಅವರಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಟೀಕೆಯಿಂದ ಕೋಪೋದ್ರಿಕ್ತರಾಗಿರುವ ಮಮತಾ ಬ್ಯಾನರ್ಜಿ ಗುಜರಾತ್‌ ರ್ಯಾಲಿ ವಿಚಾರ ಪ್ರಸ್ತಾವಿಸಿದ್ದಾರೆ. ‘ಅವರ ತಲೆ ದಪ್ಪವಾಗಿದೆ. ಅವರು ಹೆಚ್ಚು ಕಲಿತಿಲ್ಲ. ದಂಗೆಯನ್ನು ಹೇಗೆ ಆರಂಭಿಸಬೇಕು ಎನ್ನುವುದು ಮಾತ್ರ ಅಮಿತ್‌ ಶಾಗೆ ಗೊತ್ತು. ಜೀವ ತ್ಯಾಗಕ್ಕೆ ಸಿದ್ಧಳಿದ್ದೇನೆ. ನನ್ನ ಅವಧಿಯಲ್ಲಿ ದಂಗೆಗೆ ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ.

ಲಾಟೀನು -ಬಾಣದ ಹೋರಾಟ!

ಲೋಕಸಭೆ ಚುನಾವಣೆಯ ಕೊನೆಯ ಹಂತ ಇನ್ನೇನು ಬಾಕಿ ಇರುವಾಗ ಆರ್‌ಜೆಡಿ ‌ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌, ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ಗೆ ಪತ್ರ ಬರೆದಿದ್ದಾರೆ. ನಿಮ್ಮ ಪಕ್ಷದ ಬಾಣದ ಗುರುತು ಹಿಂಸೆಯನ್ನು ಪ್ರತಿನಿಧಿಸುತ್ತದೆ. ಆದರೆ ಆರ್‌ಜೆಡಿಯ ಲಾಟೀನು ಕತ್ತಲನ್ನು ಹೋಗಲಾಡಿಸುತ್ತದೆ ಎಂದಿದ್ದಾರೆ. ನಿಮಗೆ ಇತ್ತೀಚೆಗೆ ಬೆಳಕನ್ನು ಕಂಡರೆ ದ್ವೇಷ ಹುಟ್ಟಿಕೊಂಡಿದೆ. ಲಾಟೀನು ಪ್ರೀತಿ ಮತ್ತು ಸೋದರತ್ವದ ದ್ಯೋತಕ ಎಂದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಜೆಡಿಯು, ಬಿಹಾರದ ಜನರು ಇನ್ನೂ ಲಾಟೀನಿನಲ್ಲೇ ಬದುಕಬೇಕೆಂದು ನೀವು ಬಯಸಿದ್ದೀರಿ. ಬಾಣವು ಭ್ರಷ್ಟಾಚಾರದ ವಿರುದ್ಧದ ಅಸ್ತ್ರವಾಗಿದೆ. ಲಾಟೀನನ್ನು ಜನರು ಭ್ರಷ್ಟ, ಅಕ್ರಮ ಭೂಮಿ ಗಳಿಕೆ ಹಾಗೂ ಜಂಗಲ್ರಾಜ್‌ನ ದ್ಯೋತಕವೆಂದು ಭಾವಿಸಿದ್ದಾರೆ ಎಂದು ಉತ್ತರಿಸಿದೆ.

ಮೋದಿ ವಿರುದ್ಧ 25!

ವಾರಾಣಸಿಯಿಂದ 2ನೇ ಬಾರಿಗೆ ಲೋಕಸಭೆಗೆ ಆಯ್ಕೆ ಬಯಸಿರುವ ಪ್ರಧಾನಿ ನರೇಂದ್ರ ಮೋದಿಗೆ ಈ ಬಾರಿ ಪ್ರತಿಸ್ಪರ್ಧಿಯೇ ಇಲ್ಲದಂತಾಗಿದೆ. ಕಾಂಗ್ರೆಸ್‌ ಶಾಸಕ ಅಜಯ್‌ ರಾಯ್‌ರನ್ನು ನಿಲ್ಲಿಸಿದೆ. ಆದರೆ , ಮೋದಿ ಜನಪ್ರಿಯತೆ ಎದುರು ಮಂಕಾಗಿಯೇ ಕಾಣಿಸುತ್ತಾರೆ. ಮೋದಿ ಹಾಗೂ ರಾಯ್‌ ಹೊರತುಪಡಿಸಿ ಈ ಬಾರಿ ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆಂಧ್ರ, ಮಹಾರಾಷ್ಟ್ರ, ಛತ್ತೀಸ್‌ಗಢ, ಬಿಹಾರ, ಕೇರಳ ಹಾಗೂ ಉತ್ತರಾಖಂಡದವರಿದ್ದಾರೆ. ರೈತರ ಸಮಸ್ಯೆಯನ್ನು ಮೋದಿಗೆ ತಿಳಿಸಬೇಕು ಎಂಬ ಕಾರಣಕ್ಕೆ ಮಹಾರಾಷ್ಟ್ರ ಮನೋಹರ ಆನಂದ ರಾವ್‌ ಪಾಟೀಲ್ ಸ್ಪರ್ಧಿಸಿದ್ದಾರೆ.

ದಿಯೋರಾಗೆ ಎಚ್ಚರಿಕೆ

ಜೈನ ಸಮುದಾಯವು ವಿಪಕ್ಷಕ್ಕೆ ಮತ ನೀಡಬಾರದು ಎಂದು ಕಾಂಗ್ರೆಸ್‌ ನಾಯಕ ಮಿಲಿಂದ್‌ ದಿಯೋರಾ ನೀಡಿದ ಹೇಳಿಕೆಗೆ ಚುನಾವಣಾ ಆಯೋಗ ಆಕ್ಷೇಪ ವ್ಯಕ್ತಪಡಿಸಿದೆ. ಅವರು ಮಾದರಿ ನೀತಿ ಸಂಹಿತೆಯನ್ನು ಈ ಹೇಳಿಕೆ ಉಲ್ಲಂಘಿಸುತ್ತಿದ್ದು, ಇನ್ನು ಮುಂದೆ ಎಚ್ಚರ ದಿಂದಿರುವಂತೆ ಸೂಚಿಸಿದೆ. ಎಪ್ರಿಲ್ 2ರಂದು ಮುಂಬಯಿನ ಜವೇರಿ ಬಜಾರ್‌ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದರು. ಮಿಲಿಂದ್‌ ಮುಂಬಯಿ ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ದೇವಸ್ಥಾನದ ಬಳಿ ಮಾಂಸವನ್ನು ಬೇಯಿಸುವ ಮೂಲಕ ವಿರೋಧಿ ಪಕ್ಷಕ್ಕೆ ಜೈನರು ಪಾಠ ಕಲಿಸಬೇಕು ಎಂದು ಮಿಲಿಂದ್‌ ಕರೆ ನೀಡಿದ್ದರು.
Advertisement
Advertisement

Udayavani is now on Telegram. Click here to join our channel and stay updated with the latest news.

Next