Advertisement

ಮಲ್ಯ ಗಡೀ ಪಾರಿಗೆ ಮೋದಿ ಒತ್ತಾಯ

02:55 AM Jul 09, 2017 | Team Udayavani |

ಹ್ಯಾಂಬರ್ಗ್‌: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಅವರನ್ನು ಗಡೀಪಾರು ಮಾಡುವ ವಿಚಾರದಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಆಸ್ಥೆ ವಹಿಸಿದ್ದಾರೆ. ಯುಕೆ ಪ್ರಧಾನಿ ಥೆರೇಸಾ ಮೇ ಅವರೊಂದಿಗೆ ಮೋದಿ ಅವರು ಈ ವಿಚಾರ ಪ್ರಸ್ತಾವಿಸಿರುವುದೇ ಇದಕ್ಕೆ ಸಾಕ್ಷಿ.

Advertisement

ಜರ್ಮನಿಯಲ್ಲಿ ನಡೆದ ಜಿ20 ರಾಷ್ಟ್ರಗಳ ಶೃಂಗದಲ್ಲಿ ಶನಿವಾರ ಥೆರೇಸಾರನ್ನು ಭೇಟಿಯಾದ ಪ್ರಧಾನಿ ಮೋದಿ ಅವರು, ಮಲ್ಯ, ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಸೇರಿದಂತೆ ಭಾರತದಲ್ಲಿ ಸುಸ್ತಿದಾರರಾಗಿದ್ದರೂ ಪರಾರಿಯಾಗಿ ವಿದೇಶದಲ್ಲಿ ನೆಲೆಸಿರುವವರ ಗಡೀಪಾರಿಗೆ ಅಗತ್ಯ ನೆರವು ನೀಡುವಂತೆ ಕೋರಿಕೊಂಡಿದ್ದಾರೆ. ಈ ವಿಚಾರವನ್ನು ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್‌ ಬಾಗ್ಲೆ ಅವರು ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ.

ಸುಮಾರು 9 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡದೇ ಪರಾರಿಯಾಗಿರುವ ಮಲ್ಯ ಅವರು ಸದ್ಯ ಲಂಡನ್‌ನಲ್ಲಿ ನೆಲೆಸಿದ್ದಾರೆ. ಅವರ ಹಸ್ತಾಂತರಕ್ಕೆ ಭಾರತ ಮನವಿ ಸಲ್ಲಿಸಿದ್ದು, ಗಡೀಪಾರು ಕುರಿತ ವಿಚಾರಣೆ ವೆಸ್ಟ್‌ಮಿನ್‌ಸ್ಟರ್‌ ಕೋರ್ಟ್‌ನಲ್ಲಿ ನಡೆಯುತ್ತಿದೆ.

ಹವಾಮಾನ ಒಪ್ಪಂದ: ಅಮೆರಿಕ ಏಕಾಂಗಿ
ಜಿ20 ಶೃಂಗಸಭೆಯಲ್ಲಿ ಭಾರತ ಸೇರಿದಂತೆ 19 ರಾಷ್ಟ್ರಗಳು ಜಾಗತಿಕ ಹವಾಮಾನ ಒಪ್ಪಂದವನ್ನು ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ ಎಂಬ ಸರ್ವಸಮ್ಮತದ ನಿರ್ಧಾರವನ್ನು ಕೈಗೊಂಡವು. ಒಪ್ಪಂದದಿಂದ ಹಿಂದೆ ಸರಿಯುವುದಾಗಿ ಘೋಷಿಸಿರುವ ಅಮೆರಿಕ ಮಾತ್ರ ಈ ವಿಚಾರದಲ್ಲಿ ಏಕಾಂಗಿಯಾಯಿತು. ಇದು ವಿಶ್ವದ ದೊಡ್ಡಣ್ಣನಿಗೆ ದೊಡ್ಡ ಮುಜುಗರವನ್ನು ತಂದೊಡ್ಡಿತು. ಈ ಕುರಿತು ಮಾತನಾಡಿದ ಜರ್ಮನಿ ಪ್ರಧಾನಿ ಏಂಜೆಲಾ ಮರ್ಕೆಲ್‌, “ಅಮೆರಿಕ ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳೂ ಪ್ಯಾರಿಸ್‌ ಒಪ್ಪಂದಕ್ಕೆ ಬೆಂಬಲ ಘೋಷಿಸಿದವು’ ಎಂದು ಹೇಳಿದರು.

ಉಗ್ರ ನಿಗ್ರಹ ಚರ್ಚೆಯಲ್ಲಿ ಭಾರತದ ಪŠಭಾವ
ಜಿ20 ಶೃಂಗದಲ್ಲಿ ಉಗ್ರ ನಿಗ್ರಹ ವಿಚಾರದ ಚರ್ಚೆ ವೇಳೆ ಭಾರತ ಪ್ರಮುಖ ಪಾತ್ರ ವಹಿಸಿತು ಮಾತ್ರವಲ್ಲ, ವ್ಯಾಪಾರ, ಹೂಡಿಕೆ, ವಲಸೆ ಮತ್ತು ಹವಾಮಾನ ಬದಲಾವಣೆ ಕೂಡ ಚರ್ಚೆಯ ಪ್ರಮುಖ ವಿಷಯವಾಗಿತ್ತು ಎಂದು ಶೃಂಗದಲ್ಲಿ ಭಾರತದ ಶೆರ್ಪಾ ಆಗಿದ್ದ ಅರವಿಂದ ಪನಗಾರಿಯಾ ತಿಳಿಸಿದ್ದಾರೆ. ಐರೋಪ್ಯ ನಾಯಕರೊಂದಿಗೆ ಮೋದಿ ನಡೆಸಿದ ಮಾತುಕತೆಯಲ್ಲಿ ಹೆಚ್ಚಾಗಿ ಚರ್ಚೆಯಾಗಿದ್ದೇ ಉಗ್ರ ನಿಗ್ರಹದ ವಿಚಾರ. ಜರ್ಮನಿ, ಫ್ರಾನ್ಸ್‌, ಯುಕೆ, ಸ್ವೀಡನ್‌ನಲ್ಲಿ ಇತ್ತೀಚೆಗೆ ಉಗ್ರರ ದಾಳಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಮಹತ್ವ ಪಡೆಯಿತು ಎಂದಿದ್ದಾರೆ ಪನಗಾರಿಯಾ. 
ವಿವಿಧ ನಾಯಕರ ಜತೆ ಚರ್ಚೆ: ಶೃಂಗದ ಬಳಿಕ ಪ್ರಧಾನಿ ಮೋದಿ ಇಟಲಿ, ನಾರ್ವೆ, ಆರ್ಜೆಂಟೀನಾ, ದಕ್ಷಿಣ ಕೊರಿಯಾ ಸೇರಿ ಹಲವು ದೇಶಗಳ ನಾಯಕರೊಂದಿಗೆ ಮಾತು ಕತೆ ನಡೆಸಿದರು. ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರೇ ಮೋದಿ ಅವರ ಬಳಿ ಧಾವಿಸಿ ಕೆಲ ಹೊತ್ತು ಚರ್ಚಿಸಿದ್ದು ಕಂಡುಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next