ಬೆಂಗಳೂರು: ಫೆ.6ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತೆ ಆಗಮಿಸಲಿದ್ದು, ಬೆಂಗಳೂರಿನಲ್ಲಿ ರೋಡ್ ಶೋ ನಡೆಸುವಂತೆ ಬಿಜೆಪಿ ಮನವಿ ಮಾಡಿದೆ.
ಈ ಸಂಬಂಧ ಪ್ರಧಾನಿ ಕಚೇರಿ ಹಾಗೂ ಕೇಂದ್ರ ಬಿಜೆಪಿ ಕಾರ್ಯಾಲಯಕ್ಕೆ ರಾಜ್ಯ ಬಿಜೆಪಿ ನಾಯಕರು ಸಂಪರ್ಕ ಮಾಡಿದ್ದು, ರೋಡ್ ಶೋ ನಡೆಸುವುದರಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಯಾವುದೇ ಸಂವಹನ ದೆಹಲಿಯಿಂದ ಆಗಿಲ್ಲ. ಇನ್ನೆರಡು ದಿನದಲ್ಲಿ ರೋಡ್ ಶೋಗೆ ಸಂಬಂಧಪಟ್ಟಂತೆ ಸ್ಪಷ್ಟ ಚಿತ್ರಣ ದೊರಕಬಹುದು ಎಂದು ತಿಳಿದು ಬಂದಿದೆ.
ಇನ್ನೊಂದೆಡೆ ಜ.27 ಹಾಗೂ 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಆಗಮಿಸಲಿದ್ದಾರೆ. 26ರಂದು ರಾತ್ರಿಯೇ ಅವರು ಹುಬ್ಬಳ್ಳಿಗೆ ಆಗಮಿಸಲಿದ್ದು, 27ರಂದು ಕುಂದಗೋಳದಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸುವರು. 28ರಂದು ಕೆಎಲ್‌ಇ ಸಂಸ್ಥೆ ಹಾಗೂ ಸರ್ಕಾರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಎಂ.ಕೆ.ಹೋಬಳಿಯಲ್ಲಿ ಆಯೋಜಿಸಿರುವ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.