Advertisement

150 ದಿನದಲ್ಲಿ 14 ಲಕ್ಷ ಫಲಾನುಭವಿಗಳು

12:30 AM Mar 07, 2019 | Team Udayavani |

ಕಲಬುರಗಿ: ಬಡವರು ಹಾಗೂ ಶ್ರಮಿಕ ವರ್ಗದವರು ಗಂಭೀರ ಕಾಯಿಲೆಗೆ ತುತ್ತಾದಾಗ ಹಣವಿಲ್ಲದೆ ಸೂಕ್ತ ಚಿಕಿತ್ಸೆ ಪಡೆಯಲು ಪರದಾಡುವುದನ್ನು ತಪ್ಪಿಸಲು ಮತ್ತು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸುವ, ಸ್ವಾಭಿಮಾನದ ಬದುಕು ಸಾಗಿಸಲು ಆಯುಷ್ಮಾನ್‌ ಭಾರತ ಯೋಜನೆ ಜಾರಿಗೊಳಿಸಲಾಗಿದೆ. ಜಾರಿಯಾದ 150 ದಿನದಲ್ಲಿಯೇ 14 ಲಕ್ಷ ಫಲಾನುಭವಿಗಳು ಇದರ ಸೌಲಭ್ಯ ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಬುಧವಾರ ರಾಜ್ಯದ ವಿವಿಧ ಅಭಿವೃದ್ಧಿ  ಕಾಮಗಾರಿಗಳ ಲೋಕಾರ್ಪಣೆಗಾಗಿ ನಗರಕ್ಕೆ ಆಗಮಿಸಿದ್ದ ಅವರು ಇಲ್ಲಿನ ಎನ್‌.ವಿ. ಮೈದಾನದಲ್ಲಿ ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಫಲಾನುಭವಿಗಳೊಂದಿಗೆ ಆಯೋಜಿಸಿದ ಸಂವಾದದಲ್ಲಿ ಮಾತನಾಡಿ, ದೇಶದ ಆರೋಗ್ಯ ಕ್ಷೇತ್ರದಲ್ಲಿಯೇ ಆಯುಷ್ಮಾನ್‌ ಭಾರತ ಬೃಹತ್‌ ಹಾಗೂ ಮಹತ್ವಪೂರ್ಣ ಯೋಜನೆಯಾಗಿದೆ. ಇದರಡಿ ಖಾಸಗಿ ಆಸ್ಪತ್ರೆಯಲ್ಲಿಯೂ ರೋಗಿಗಳು ವಾರ್ಷಿಕ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಬಡಜನರು ಹಣವಿಲ್ಲದೆ ಮೃತ್ಯುವಿಗೆ ಆಹ್ವಾನ ನೀಡುವ ಕಾಲವಿತ್ತು. ಇದೀಗ ಅದು ಬದಲಾಗಿದೆ. ಪ್ರತಿಯೊಬ್ಬರೂ ಗೌರವದ ಬದುಕು ಸಾಗಿಸಬೇಕೆಂಬುದು ಸರ್ಕಾರದ ಆಶಯವಾಗಿದೆ. ಪ್ರತಿದಿನ ಕನಿಷ್ಠ 10 ಸಾವಿರ ಜನರು ಈ ಯೋಜನೆಯಡಿ ಉಚಿತ ಲಾಭ ಪಡೆಯುತ್ತಿದ್ದು, ಬಡವರಿಗೆ ಇದು ವರದಾನವಾಗಿದೆ ಎಂದರು.

ರಾಜ್ಯದಿಂದ 250 ಕೋಟಿ ಖರ್ಚು: ಆಯುಷ್ಮಾನ್‌ ಭಾರತ ಯೋಜನೆಯಡಿ ಇದುವರೆಗೆ ರಾಜ್ಯದಲ್ಲಿ ಒಂದು ಲಕ್ಷ ಫಲಾನುಭವಿಗಳು ಇದರ ಲಾಭ ಪಡೆದಿದ್ದು, ಇದಕ್ಕಾಗಿ 250 ಕೋಟಿ ರೂ. ರಾಜ್ಯ ಸರ್ಕಾರ ಖರ್ಚು ಮಾಡಿದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು 80 ಕೋಟಿ ರೂ. ಇದೆ. ಕಲಬುರಗಿ ಜಿಲ್ಲೆಯ ಸುಮಾರು 5000 ಜನ ಆಯುಷ್ಮಾನ್‌ ಭಾರತದಲ್ಲಿ ಉಚಿತ ಚಿಕಿತ್ಸೆ ಪಡೆಯಲು 20 ಕೋಟಿ ರೂ. ಹಣ ವ್ಯಯ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಪಂಕಜ ಕುಮಾರ ಪಾಂಡೆ ಮಾಹಿತಿ ನೀಡಿದರು.

ಹೃದ್ರೋಗ, ಕ್ಯಾನ್ಸರ್‌, ಕಿಡ್ನಿ ಸ್ಟೋನ್‌ ಸೇರಿ ಇನ್ನೀತರ ಗಂಭೀರ ಕಾಯಿಲೆಗೆ ತುತ್ತಾಗಿ ಆಯುಷ್ಮಾನ್‌ ಭಾರತ ಯೋಜನೆಯಡಿ ಶಸ್ತ್ರಚಿಕಿತ್ಸೆಯಲ್ಲದೆ ಇನ್ನಿತರ ಉಚಿತ ಚಿಕಿತ್ಸೆ ಪಡೆದ ಕಲಬುರಗಿ ಮತ್ತು ಬೀದರ ಜಿಲ್ಲೆಯ 20 ಜನ ಫಲಾನುಭವಿಗಳು ಪ್ರಧಾನಮಂತ್ರಿಯವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇತರರಿದ್ದರು.

5 ಯೋಜನೆಗಳಿಗೆ ಪ್ರಧಾನಿ ಚಾಲನೆ
ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ರಾಜ್ಯದ ಐದು ಪ್ರಮುಖ ಯೋಜನೆಗಳಿಗೆ ರಿಮೋಟ್‌ ಕಂಟ್ರೋಲ್‌ ಮೂಲಕ ಏಕಕಾಲಕ್ಕೆ ಶಿಲಾನ್ಯಾಸ ಹಾಗೂ ಉದ್ಘಾಟನೆ ನೆರವೇರಿಸಿದರು.

Advertisement

ಭಾರತ ಪೆಟ್ರೋಲಿಯಂ ಕಾರ್ಪೋರೇಶನ್‌ ಲಿಮಿಟೆಡ್‌ (ಬಿಪಿಸಿಎಲ್‌)ನ ಕಲಬುರಗಿ ಡಿಪೋಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಬೆಂಗಳೂರಿನ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾ ಧಿಕರಣ,ಬೆಂಗಳೂರಿನ ರಾಜಾಜಿನಗರದ ಇಎಸ್‌ಐಸಿ ವೈದ್ಯಕೀಯ ಕಾಲೇಜು ಮತ್ತು ಪಿಜಿಐಎಂಎಸ್‌ಆರ್‌,ಹುಬ್ಬಳ್ಳಿಯ ಕಿಮ್ಸ್‌ನ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ  ಯೊಜನೆ ಅಡಿಯಲ್ಲಿ ಸೂಪರ್‌ ಸ್ಪೆಷಾಲಿಟಿ ವಿಭಾಗ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ  ಯಲ್ಲಿ ಈಶಾನ್ಯ ವಲಯದ ಬಾಲಕಿಯರ ವಿದ್ಯಾರ್ಥಿ  ಗಳಿಗಾಗಿ ಮಹಿಳಾ ವಸತಿ ನಿಲಯ ಕಟ್ಟಡಗಳನ್ನು ಲೋಕಾರ್ಪಣೆ ಮಾಡಿದರು.

ಖರ್ಗೆ ಹೆಸರು ಪ್ರಸ್ತಾಪಿಸದ ಮೋದಿ
ಕಲಬುರಗಿ: ಪ್ರಧಾನಿ ಮೋದಿ ತಮ್ಮ ಸುದೀರ್ಘ‌ 39 ನಿಮಿಷಗಳ ಕಾಲದ ಭಾಷಣದಲ್ಲಿ ಖರ್ಗೆ ಅವರ ಹೆಸರನ್ನು ಒಮ್ಮೆಯೂ ಪ್ರಸ್ತಾಪಿಸಲಿಲ್ಲ. ಬುಧವಾರ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ನಡೆದ ರ್ಯಾಲಿ ಹಾಗೂ ಸಾರ್ವಜನಿಕ ಬಹಿರಂಗ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಮೋದಿ, ಕಾಂಗ್ರೆಸ್‌ ಸರ್ಕಾರ ಮಾಡಿದ್ದ ಅರ್ಧಂಬರ್ಧ ಕೆಲಸ ಕಾರ್ಯಗಳನ್ನು ತಾವು ಬಂದ ಮೇಲೆ ಪೂರ್ಣಗೊಳಿಸಿದ್ದೇವೆ. ಅದರಲ್ಲಿ ಕಲಬುರಗಿ-ಬೀದರ್‌ ರೈಲು ಮಾರ್ಗ ಸಹ ಒಂದಾಗಿದೆ ಎಂಬುದಾಗಿ ಕಾಮಗಾರಿಗಳ ವಿವರಣೆ ನೀಡಿ ದರು. ಡಾ| ಉಮೇಶ ಜಾಧವ್‌ ಅವರನ್ನು ಪಕ್ಷಕ್ಕೆ ಕರೆ ತಂದು ಪಕ್ಷದ ಅಭ್ಯರ್ಥಿಯನ್ನಾಗಿ ಖರ್ಗೆ ಅವರ ವಿರುದಟಛಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿ ದ್ದರಿಂದ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸುತ್ತಾರೆಂದು ನಿರೀಕ್ಷಿಸಲಾ ಗಿತ್ತು. ಜತೆಗೆ ಡಾ| ಉಮೇಶ ಜಾಧವ್‌ ಹೆಸರನ್ನು ಪ್ರಸ್ತಾಪಿಸದಿದ್ದರೂ ಬಂಜಾರಾ ಸಮುದಾಯದ ಮಹಿಳೆಯರು ಇಲ್ಲಿ ಬಂದಿದ್ದಾರೆ. ಅವರ ಸಮುದಾಯದ ಅಭಿವೃದಿಟಛಿಗಾಗಿ ಕೇಂದ್ರದಲ್ಲಿ ನಿಗಮದ ಮೂಲಕ ಏಳ್ಗೆಗಾಗಿ ಶ್ರಮಿಸಲಾಗುತ್ತಿದೆ ಎಂದರು. 2018ರ ಮೇ 3ರಂದು ಕಲಬುರಗಿಯಲ್ಲಿ ಪ್ರಧಾನಿ ಮೋದಿ ಚುನಾವಣಾ ಪ್ರಚಾರ ನಿಮಿತ್ತ ಪ್ರಖರ ಭಾಷಣ ಮಾಡಿದ್ದರು. ಆ ಸಂದರ್ಭದಲ್ಲಿ ದಲಿತರ ಮತಗಳನ್ನು ಪಡೆದ ಕಾಂಗ್ರೆಸ್‌ ಪಕ್ಷವು ಹಿರಿಯ ನಾಯಕ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡ ದೇ ಪಕ್ಷ ಅವರಿಗೆ ಕೈ ಕೊಟ್ಟಿದೆ ಎಂದು ಅನುಕಂಪದ ಮಾತುಗಳನ್ನಾಡಿದ್ದರು.

ರಾಜ್ಯದಿಂದ ಮೋದಿಗೆ 22 ಸ್ಥಾನ ಕೊಡುಗೆ
ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ 22 ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಪ್ರಧಾನಿ ಮೋದಿಗೆ ಕೊಡುಗೆಯಾಗಿ ನೀಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ನಗರದ ನೂತನ ಮಹಾವಿದ್ಯಾಲಯದ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಮಾವೇಶದಲ್ಲಿ ಪ್ರಧಾನಿ ಮೋದಿ ಸಮ್ಮುಖದಲ್ಲಿ ಮಾತನಾಡಿದ ಅವರು, ಈ ಹಿಂದಿನ ಕಾಂಗ್ರೆಸ್‌ ಸರ್ಕಾರ ಹಗರಣಗಳ ಸರಮಾಲೆಯನ್ನೇ ಮಾಡಿತ್ತು. ಆದರೆ, ಐದು ವರ್ಷಗಳ ಕಾಲ ಪ್ರಧಾನಿ ಮೋದಿ ಯಾವುದೇ ಹಗರಣ ಮಾಡದೆ ಶುದ್ಧ ವಾದ ಆಡಳಿತ ನೀಡಿದ್ದಾರೆ. ದೇಶದ ಜನತೆಗೆ ಕೊಟ್ಟ ಭರವಸೆ ಈಡೇರಿಸಿರುವ ಮೋದಿ ಮತ್ತೂಮ್ಮೆ ಪ್ರಧಾನಿಯಾಗಲು ರಾಜ್ಯದ 22 ಸಂಸದರ ಕೊಡುಗೆ ಕೊಡಲಾಗುವುದು. ಚುನಾವಣೆಯಲ್ಲಿ ಬಿಜೆಪಿ 300 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರ ಶೀಘ್ರ ತೀರ್ಮಾನ ತೆಗೆದುಕೊಳ್ಳಲಿದೆ. ಈಗಾಗಲೇ ಕೋಲಿ ಸಮಾಜದ ಬೇಡಿಕೆ ಕೇಂದ್ರದ ಗಮನಕ್ಕಿದೆ.
● ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿ ಎಂಟು ತಿಂಗಳು ಕಳೆದರೂ ಎಂದಾದರೂ ಕುಮಾರಸ್ವಾಮಿ ಸಿಎಂಎಂದೆನಿಸಿದ್ದಾರೆಯೇ? ಸ್ವತ: ಕುಮಾರಸ್ವಾಮಿ ತಾವು ಭಿಕ್ಷುಕ ಎಂದು ಹೇಳಿಕೊಂಡಿದ್ದಾರೆ. ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರ ಮನೆ ಮುಂದೆ ಭಿಕ್ಷುಕರಾಗಿ ಕುಮಾರಸ್ವಾಮಿ ನಿಂತಿದ್ದಾರೆ.
● ಆರ್‌.ಅಶೋಕ, ಮಾಜಿ ಉಪ ಮುಖ್ಯಮಂತ್ರಿ

ಪ್ರಧಾನಿ ಮೋದಿ ಅನುದಾನ ಸೋರಿಕೆಯಾಗದಂತೆ ಕಡಿವಾಣ ಹಾಕಿದ್ದಾರೆ. ನಾನೂ ತಿನ್ನಲ್ಲ, ತಿನ್ನಲು ಬಿಡಲ್ಲ ಎಂದು ನುಡಿದಂತೆ ನಡೆಯುತ್ತಿದ್ದಾರೆ. ಕೆಂಪುಕೋಟೆಯಲ್ಲಿ ನಿಂತು ಮೊದಲ ಬಾರಿಗೆ ಮಹಿಳೆಯರ ಕುರಿತು ಮಾತನಾಡಿದ್ದು ಮೋದಿ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಯೋಜನೆ ಜಾರಿಗೆ ತಂದ ಪ್ರಧಾನಿ ಬಗ್ಗೆ ಮಹಿಳೆಯರು ಗರ್ವ ಪಡಬೇಕು.
● ಕಿರಣ ಮಹೇಶ್ವರಿ, ಮಾಜಿ ಸಚಿವೆ, ರಾಜಸ್ಥಾನ.

Advertisement

Udayavani is now on Telegram. Click here to join our channel and stay updated with the latest news.

Next