ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ| ಮನಮೋಹನ್ ಸಿಂಗ್ ಕುರಿತು ಪ್ರಧಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿ ಬುಧವಾರ ಆಡಿದ ಮಾತುಗಳು ಗುರುವಾರ ಉಭಯ ಸದನಗಳಲ್ಲೂ ಕೋಲಾಹಲ ಮೂಡಿಸಿದವು. ಸದನದ ಒಳಗಷ್ಟೇ ಅಲ್ಲದೆ, ಹೊರಗೂ ಕಾಂಗ್ರೆಸ್-ಬಿಜೆಪಿ ಸದಸ್ಯರು ಪರಸ್ಪರ ವಾಕ್ಸಮರದಲ್ಲಿ ತೊಡಗಿದ್ದುದು ಕಂಡುಬಂತು.
ಮೋದಿ ಅವರ ಹೇಳಿಕೆ ಖಂಡಿಸಿ ಲೋಕಸಭೆಯಲ್ಲಿ ಕಾಂಗ್ರೆಸ್ ಸದ ಸ್ಯರು ಸಭಾತ್ಯಾಗ ಮಾಡಿದರೆ, ರಾಜ್ಯ ಸಭೆಯಲ್ಲಿ ಮೋದಿ ಕ್ಷಮೆ ಕೋರ ಬೇಕು ಎಂದು ವಿಪಕ್ಷಗಳಾದ ಕಾಂಗ್ರೆಸ್, ಸಿಪಿಎಂ ಹಾಗೂ ಜೆಡಿಯು ಸದಸ್ಯರು ಆಗ್ರಹಿಸಿದರು.
ಲೋಕಸಭೆಯ ಶೂನ್ಯ ವೇಳೆಯಲ್ಲಿ ಪ್ರಧಾನಿ ಹೇಳಿಕೆ ಕುರಿತು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಲು ಮುಂದಾದಾಗ, ಅವ ರನ್ನು ತಡೆದ ಸ್ಪೀಕರ್ ಸುಮಿತ್ರಾ ಮಹಾಜನ್, ಇದು ಇನ್ನೊಂದು ಸದನಕ್ಕೆ ಸಂಬಂಧಿಸಿದ ವಿಷಯವಾದ ಕಾರಣ ಇಲ್ಲಿ ಪ್ರಸ್ತಾವಿಸುವಂತಿಲ್ಲ ಎಂದು ಸೂಚಿಸಿದರು. ಇದಕ್ಕೆ ಸಂಸ ದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರೂ ಧ್ವನಿಗೂಡಿಸಿದರು. ಸ್ಪೀಕರ್ ತಡೆಯುವ ಮುನ್ನವೇ ಖರ್ಗೆ, “ಸಿಂಗ್ ಕುರಿತು ಪ್ರಧಾನಿ ಮೋದಿ ಆಡಿರುವ ಮಾತುಗಳು ಸಂಸದೀಯ ಪ್ರಜಾಸತ್ತೆಗೆ ತಕ್ಕುದಲ್ಲ’ ಎಂದರು.
ಸ್ಪೀಕರ್ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರೆಲ್ಲ ಸದನದ ಬಾವಿಗಿಳಿದು ಪ್ರತಿಭಟಿಸಲು ಆರಂಭಿಸಿದರು. ಇದೆಲ್ಲ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸಮ್ಮುಖದಲ್ಲೇ ನಡೆಯಿತು. ಮೋದಿ ಹೇಳಿಕೆ ದೇಶಕ್ಕೆ ಮಾಡಿದ ಅವಮಾನ ಎಂದು ಖರ್ಗೆ ಪ್ರತಿಪಾದಿಸಿದರು. ಆದರೆ, ಅವರ ಮಾತನ್ನು ಆಲಿಸದೆ ಸ್ಪೀಕರ್ ಸುಮಿತ್ರಾ ಅವರು ಕಲಾಪ ಮುಂದುವರಿಸಿದಾಗ ಕೋಪಗೊಂಡ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು.
ಕ್ಷಮೆ ಕೇಳುವಂತೆ ಒತ್ತಡ: ಇನ್ನು ರಾಜ್ಯಸಭೆಯಲ್ಲೂ ಇದೇ ಪರಿಸ್ಥಿತಿ ಮುಂದುವರಿಯಿತು. ಮೋದಿ ತನ್ನ ಹೇಳಿಕೆಗೆ ಕ್ಷಮೆ ಯಾಚಿಸಬೇಕು ಎಂದು ವಿಪಕ್ಷ ಸದಸ್ಯರು ಒತ್ತಾಯಿಸಿದರು. ಕಾಂಗ್ರೆಸ್, ಸಿಪಿಎಂ, ಜೆಡಿಯು ಈ ಆಗ್ರಹ ಮುಂದಿಟ್ಟುಕೊಂಡು ಪ್ರತಿಭಟಿ ಸಿದರೆ, ಎಐಎಡಿಎಂಕೆ ಸಂಸದರು ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್‌ರಾವ್ ಅವರು ಕೂಡಲೇ ರಾಜ್ಯಕ್ಕೆ ಆಗಮಿಸಿ ಶಶಿಕಲಾ ಸಿಎಂ ಪಟ್ಟಕ್ಕೇರಲು ಅವಕಾಶ ನೀಡುವಂತೆ ಕೋರಿ ಘೋಷಣೆಗಳನ್ನು ಕೂಗತೊಡಗಿದರು. ಹೀಗಾಗಿ, ಸದನವಿಡೀ ಗದ್ದಲ ಆವರಿಸಿತು. ಕೊನೆಗೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.
ಸದನದ ಹೊರಗೂ ನಾಯಕರ ವಾಕ್ಸಮರ ಮುಂದುವರಿಯಿತು. ಇತರರಿಗೆ ಪಾಠ ಹೇಳುವ ನೈತಿಕತೆ ಕಾಂಗ್ರೆಸ್‌ಗಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದರು. ಮೋದಿ ಗುಜರಾತ್ ಸಿಎಂ ಆಗಿದ್ದಾಗ, ಸೋನಿಯಾ ಅವರು ಆಡಿದ್ದ ಮಾತುಗಳನ್ನು(ಸಾವಿನ ವ್ಯಾಪಾರಿ) ನೆನಪಿಸಿದ ಅಮಿತ್ ಶಾ, ಮೊದಲು ಕಾಂಗ್ರೆಸ್‌ನವರೇ ಸಂಸತ್‌ನ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು. ಮೋದಿ ಅವರು ರಾಜಕೀಯ ಚರ್ಚೆಯನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿದ್ದಾರೆ. ಅತ್ಯಂತ ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಕಾಂಗ್ರೆಸ್‌ನ ಆನಂದ್ ಶರ್ಮಾ ದೂರಿದರು.
ಬಳಸಿ ಬಿಸಾಕುವ ನಾಯಕರಂತೆ ಬಳಕೆ: ಬಿಜೆಪಿ
ಗಾಂಧಿ ಕುಟುಂಬದ ಹೊರಗಿನ ಅನೇಕ ನಾಯಕರಂತೆ ಮನಮೋಹನ್‌ಸಿಂಗ್‌ರನ್ನೂ ಕಾಂಗ್ರೆಸ್ “ಬಳಸಿ ಬಿಸಾಕುವ ನಾಯಕ’ನಂತೆ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಸಿಂಗ್ ಕುರಿತು ಪ್ರಧಾನಿ ಮೋದಿ ಆಡಿದ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತಾ ಸಚಿವ ರವಿಶಂಕರ್ ಪ್ರಸಾದ್ ಈ ರೀತಿ ಹೇಳಿದ್ದಾರೆ. ತಮಾಷೆ, ಶ್ಲೇಷೆ (ಎರಡರ್ಥದ ಪದ), ಚತುರ ಪ್ರತ್ಯುತ್ತರಗಳು ಸಂಸದೀಯ ಚರ್ಚೆಯ ಒಂದು ಭಾಗ. ಕಾಂಗ್ರೆಸ್‌ನಲ್ಲಿ ಎರಡು ಗುಂಪಿನ ನಾಯಕರಿದ್ದಾರೆ. ಒಂದು ನಿರ್ದಿಷ್ಟ ಕುಟುಂಬದಿಂದ ಬಂದವರು ಎಲ್ಲ ಟೀಕೆ, ಟಿಪ್ಪಣಿಗಳಿಂದ ಹೊರತಾದವರು. ಅವರು ತಪ್ಪೇ ಮಾಡುವುದಿಲ್ಲ. ಮತ್ತೂಂದು ಗುಂಪಿಗೆ ಸೇರಿದವರು, ಎಲ್ಲ ರೀತಿ ಬಳಸಲ್ಪಟ್ಟು, ಬಳಿಕ ಬಿಸಾಕಲ್ಪಡುತ್ತಾರೆ. ಸಿಂಗ್ ಅವರು ಈ ಗುಂಪಿಗೆ ಸೇರಿದವರು ಎಂದಿದ್ದಾರೆ ಪ್ರಸಾದ್.