ಸಚಿವ ನಿರಾಣಿ-ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವೈಮನಸ್ಸು-ಸಮರ ಜೋರಾಗಿ ನಡೆದಿದೆ. ಅದೇ ತೆರನಾಗಿ ಕಲಬುರಗಿ ಜಿಲ್ಲೆಯ ಒಬ್ಬರು ಬಿಜೆಪಿ ಶಾಸಕರ ನಡುವೆಯೂ ಆಂತರಿಕ ತಿಕ್ಕಾಟವೂ ಜೋರಾಗಿದೆ. ಶಾಸಕರ ತಾರಾಜೋಡಿ-ಸಹೋದರರಂತಿದ್ದ ಕೆಕೆಆರ್‌ಟಿಸಿ ಅಧ್ಯಕ್ಷ, ಸೇಡಂ ಶಾಸಕ ರಾಜಕುಮಾರ ಪಾಟೀಲ್ ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರಾಗಿರುವ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಪರಸ್ಪರ ಮುನಿಸಿಕೊಂಡಿದ್ದಾರೆ. ಕೆಲವು ತಿಂಗಳುಗಳಿಂದ ಮಾತುಕತೆ ನಡೆಯದೇ ಶೀತಲ ಸಮರ ನಡೆಯುತ್ತಿದೆ. ಕೋರ್ ಕಮಿಟಿ ಸಭೆಯಲ್ಲಂತೂ ಒಬ್ಬರಿಗೊಬ್ಬರು ಚಾಡಿ ಹೇಳುವುದು ತಾರಕ್ಕೇರುತ್ತಿದೆ.
ಸದಾ ಜೋಡಿಯಾಗಿಯೇ ಓಡಾಡುತ್ತಿದ್ದ ಹಾಗೂ ಇವರಿಬ್ಬರ ಜೋಡಿ ನೋಡಿ ಆಳಂದ ಕ್ಷೇತ್ರದ ಶಾಸಕ ಸುಭಾಷ ಗುತ್ತೇದಾರ್ “ನೀವಿಬ್ಬರು ಮಾತು ಬಿಟ್ಟು ಕಚ್ಚಾಡುವುದನ್ನು ಕಣ್ ನೋಡಬೇಕು’ ಎಂದಿದ್ದರಂತೆ. ಅದರಂತೆ ತೇಲ್ಕೂರ-ರೇವೂರ ಕಳೆದ ಒಂದು ವರ್ಷದಿಂದ ಮಾತುಕತೆ ಬಿಟ್ಟಿದ್ದು, ಶೀತಲ ಸಮರ ಏರ್ಪಟ್ಟಿದೆ. ಇವರಿಬ್ಬರು ಒಬ್ಬರಿಗೊಬ್ಬರು ಎತ್ತಿ ಕಟ್ಟುತ್ತಿರುವುದನ್ನು ನೋಡಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಹಿತ ಹಲವರು ಸಂಧಾನ ಮಾಡಿದ್ದರೂ ಆಗಿಲ್ಲ. ಈ ಸಮಸ್ಯೆ ಬಗೆಹರಿಸಲು ಲೋಕಲ್ ಲೀಡರ್‌ಗಳಿಂದ ಸಾಧ್ಯವೇ ಇಲ್ಲ.
ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಸಂಧಾನ ಸಾಧ್ಯ ಎನ್ನುವ ನಿರ್ಧಾರಕ್ಕೆ ಬರಲಾಗಿದೆ. ಇಷ್ಟಕ್ಕೂ ಇವರಿಬ್ಬರ ನಡುವೆ ವೈಮನಸ್ಸು ಉಂಟಾಗಲು ದೊಡ್ಡ ಕಾರಣಗಳೇನು ಇಲ್ಲ. ಒಂದು ವೇಳೆ ತಾವಿಬ್ಬರೇ ಮಾತಾಡಿಕೊಂಡು ಹೆಗಲ ಮೇಲೆ ಕೈ ಹಾಕಿದರಂತೂ ಎಲ್ಲವೂ ಚಿತ್. ಏನೇ ಆಗಲಿ ಇಬ್ಬರ ನಡುವಿನ ಶೀತಲ ಸಮರ ಬಿಜೆಪಿ ಜಿಲ್ಲಾ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದಂತೂ ನಿಜ.