Advertisement

ಮೋದಿ ಸಾಮಾಜಿಕ ನ್ಯಾಯದ ಹರಿಕಾರ: ಸಿಎಂ ಬಸವರಾಜ ಬೊಮ್ಮಾಯಿ

10:39 PM Jan 19, 2023 | Team Udayavani |

ಕಲಬುರಗಿ: ದೇಶದಲ್ಲಿ ಸಾಮಾಜಿಕ ನ್ಯಾಯದ ಪರಿಪಾಲನೆ ಹಿನ್ನೆಲೆಯಲ್ಲಿ ಎಲ್ಲ ವರ್ಗಗಳ ಹಿತ ಕಾಯುವ ನಿಟ್ಟಿನಲ್ಲಿ ಮನೆ ಬಾಗಿಲಿಗೆ ಹಲವಾರು ಸೌಕರ್ಯ, ಸೌಲಭ್ಯಗಳನ್ನು ಒದಗಿಸುವ ಮೂಲಕ ಪ್ರಧಾನಿ ಮೋದಿ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಗಳಿದರು.

Advertisement

ಸೇಡಂ ತಾಲೂಕಿನ ರಾಷ್ಟ್ರಕೂಟರ ರಾಜಧಾನಿ ಮಳಖೇಡದಲ್ಲಿ ಗುರುವಾರ ಕಂದಾಯ ಇಲಾಖೆ ಅಡಿ 52,072 ಬಂಜಾರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಮೋದಿಯವರು ಶಿಕ್ಷಣ, ಉದ್ಯೋಗ, ಭದ್ರತೆ ಹಾಗೂ ಆರ್ಥಿಕ ಸಹಿತ ಎಲ್ಲ ಕ್ಷೇತ್ರಗಳನ್ನೂ ಡಿಜಿಟಲೀಕರಿಸಿದ್ದಾರೆ. ಆಡಳಿತವನ್ನು ಚುರುಕಾಗಿಸುವ ನಿಟ್ಟಿನಲ್ಲಿ, ಭ್ರಷ್ಟಾಚಾರವಿಲ್ಲದೆ ಜನರಿಗೆ ಸರಕಾರಿ ಸೌಕರ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ “ಇ ಗವರ್ನೆನ್ಸ್‌’ ಜಾರಿಗೆ ತರುವಲ್ಲಿ ಕ್ರಾಂತಿ ಮಾಡಿದ್ದಾರೆ ಎಂದರು.

ಡಬಲ್‌ ಎಂಜಿನ್‌ ಸರಕಾರದ ಅಡಿಯಲ್ಲಿ ದಲಿತರಿಗೆ, ಶೋಷಿತರಿಗೆ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದಾರೆ. ಈಗ ಭಾರತದಲ್ಲಿ ಅಭಿವೃದ್ಧಿ ಶಕೆಯಿದೆ. ಮುಖ್ಯವಾಗಿ ಬಂಜಾರ ಸಮುದಾಯಗಳಿಗೆ ನೆಮ್ಮದಿಯ ಸೂರು ಒದಗಿಸುವ ನಿಟ್ಟಿನಲ್ಲಿ, ಸೂರಿಗೆ ಅಗತ್ಯ ದಾಖಲೆಗಳನ್ನು ನೀಡಿ, ಸ್ವಾಭಿಮಾನದ ಬದುಕು, ಭದ್ರತೆಯ ಭಾವ ಮೂಡಿಸಿದ್ದಾರೆ. ರಾಜ್ಯದಲ್ಲಿ ನಮ್ಮ ಸರಕಾರ 100 ಅಂಬೇಡ್ಕರ್‌ ವಸತಿ ನಿಲಯಗಳನ್ನು ಆರಂಭಿಸುತ್ತಿದೆ. ಎಸ್ಸಿ, ಎಸ್ಟಿ ಕುಟುಂಬಗಳಿಗೆ 75 ಯೂನಿಟ್‌ ಉಚಿತ ವಿದ್ಯುತ್‌ ನೀಡುತ್ತಿದೆ. ಕಲಬುರಗಿ ವಲಯದಲ್ಲಿ ಒಂದು ಸಾವಿರ ವಸತಿ ನಿಲಯಗಳನ್ನು ನಿರ್ಮಿಸುವ ಮೂಲಕ ಒಬಿಸಿಗಳ ಉನ್ನತ ವ್ಯಾಸಂಗ ಮುಂದುವರಿಸಲು ಅನುಕೂಲ ಮಾಡಿಕೊಡಲಾಗಿದೆ ಎಂದರು.

ಕೇವಲ ಸಾಮಾಜಿಕ ನ್ಯಾಯದ ಕುರಿತು ಮಾತನಾಡಿದರೆ ಏನೂ ಆಗುವುದಿಲ್ಲ. ಕಾಂಗ್ರೆಸ್‌ ಧೋರಣೆ ಕೇವಲ ಓಟ್‌ ಬ್ಯಾಂಕ್‌ ಗಟ್ಟಿ ಮಾಡಿಕೊಳ್ಳುವುದೇ ಆಗಿತ್ತು. ನಾವು ಮೋದಿ ಅವರ “ಸಬ್‌ಕಾ ಸಾಥ್‌ ಸಬ್‌ ಕಾ ವಿಕಾಸ’ ಅನುಷ್ಠಾನ ಮಾಡಿದ್ದೇವೆ. ಈ ಮೂಲಕ ದೇಶದಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಿದ್ದೇವೆ ಎಂದರು.

ಗ್ರಾಮ ವಾಸ್ತವ್ಯದಿಂದ ಬೆಳಕು
ರಾಜ್ಯದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಗ್ರಾಮ ವಾಸ್ತವ್ಯ ಮಾಡಿ ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ. ಅವರ ಓಡಾಟ ಸರಕಾರಕ್ಕೆ ಮತ್ತು ರಾಜ್ಯದ ಜನರಿಗೆ ನೆಮ್ಮದಿ ತಂದಿದೆ. ಪಿಂಚಣಿ ವ್ಯವಸ್ಥೆ ಬಲಪಡಿಸಿದ್ದಾರೆ. ಎಷ್ಟೋ ವಿಧವೆಯರಿಗೆ, ಹಿರಿಯರಿಗೆ ಪಿಂಚಣಿ ಭ್ರಷ್ಟಾಚಾರವಿಲ್ಲದೆ ತಲುಪುವಂತೆ ಮಾಡಿದ್ದಾರೆ. ಡಿಬಿಟಿ ಮೂಲಕ ಜಮೀನು ಪತ್ರ, ದಾಖಲೆಗಳು ಈಗ ಮನೆ ಬಾಗಿಲಿಗೆ ಬರುವಂತೆ ಮಾಡಿದ್ದಾರೆ. ಈ ಎಲ್ಲದರಲ್ಲೂ ಮಧ್ಯವರ್ತಿಗಳ ಹಾವಳಿ ತಪ್ಪಿಸಿದ್ದಾರೆ. ಇದು ನಿಜಕ್ಕೂ ಕರ್ನಾಟಕ ಸರಕಾರದ ಶ್ರೇಯಸ್ಸು ಎಂದು ಸಿಎಂ ಬೊಮ್ಮಾಯಿ ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next