ಹೊಸದಿಲ್ಲಿ: ಸಂಸತ್ ಅಧಿವೇಶನ ಆರಂಭವಾಗುವ ದಿನ ಹತ್ತಿರವಾಗುತ್ತಿದ್ದಂತೆಯೇ ಬಿಜೆಪಿ ತನ್ನ ಸಂಸದೀಯ ಮಂಡಳಿ ಪುನಾರಚಿಸಿದೆ.
ವಿಶೇಷವೆಂದರೆ ಇದೇ ಮೊದಲ ಬಾರಿಗೆ ಎಲ್.ಕೆ.ಆಡ್ವಾಣಿ, ಮುರಳಿ ಮನೋಹರ ಜೋಶಿ, ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್ ಇಲ್ಲದ ಸಂಸದೀಯ ಮಂಡಳಿಯನ್ನು ರಚಿಸಲಾಗಿದೆ. ಇವರಲ್ಲಿ ಜೇಟ್ಲಿ ರಾಜ್ಯಸಭಾ ಸದಸ್ಯರಾಗಿರುವುದನ್ನು ಬಿಟ್ಟರೆ ಉಳಿದವರು ಯಾರೂ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಹೀಗಾಗಿ ಈ ಎಲ್ಲ ಹಿರಿಯರ ಹೊರತಾದ ಸಂಸದೀಯ ಮಂಡಳಿ ರಚನೆಯಾಗಿದೆ.
ಲೋಕಸಭೆಯಲ್ಲಿ ಪ್ರಧಾನಿ ಮೋದಿ ನಾಯಕರಾಗಿದ್ದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಪನಾಯಕರಾಗಿದ್ದಾರೆ. ರಾಜ್ಯಸಭೆಯಲ್ಲಿ ಥಾವರ್ ಚಂದ್ ಗೆಹ್ಲೋಟ್ ಆಡಳಿತ ಪಕ್ಷದ ನಾಯಕರಾಗಿರುತ್ತಾರೆ. ಪಿಯೂಶ್ ಗೋಯಲ್ ಉಪನಾಯಕರಾಗಿರುತ್ತಾರೆ.
ಇನ್ನು ಲೋಕಸಭೆಯಲ್ಲಿ ಸರಕಾರದ ಮುಖ್ಯ ಸಚೇತಕರಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ, ಉಪ ಮುಖ್ಯ ಸಚೇತಕರಾಗಿ ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘ್ವಾಲ್ರನ್ನು ನೇಮಿಸಲಾಗಿದೆ. ಪಕ್ಷದ ಮುಖ್ಯ ಸಚೇತರನ್ನಾಗಿ ಸಂಜಯ ಜೈಸ್ವಾಲ್ರನ್ನು ನೇಮಿಸಲಾಗಿದೆ. ಸಂಸದೀಯ ಮಂಡಳಿಯ ಮೊದಲ ಸಭೆ ಜೂ. 16ಕ್ಕೆ ನಡೆಯಲಿದೆ.
ಕೇಂದ್ರ ಜವುಳಿ ಸಚಿವೆ ಸ್ಮತಿ ಇರಾನಿ ಅವರನ್ನು ಸಂಸದೀಯ ಮಂಡಳಿಗೆ ಸೇರಿಸಿಕೊಳ್ಳಲಾಗಿದ್ದು, ಲೋಕಸಭೆಯಿಂದ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರವಿಶಂಕರ ಪ್ರಸಾದ್, ಅರ್ಜುನ್ ಮುಂಡಾ, ರಾಜ್ಯಸಭೆಯಿಂದ ಜೆ.ಪಿ. ನಡ್ಡಾ, ಪ್ರಕಾಶ್ ಜಾಬ್ಡೇಕರ್, ಒ.ಪಿ. ಮಾಥುರ್, ನಿರ್ಮಲಾ ಸೀತಾ ರಾಮನ್, ಧರ್ಮೇಂದ್ರ ಪ್ರಧಾನ್ ಇರಲಿದ್ದಾರೆ.