ನವದೆಹಲಿ: “ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ವೇಳೆ ನರೇಂದ್ರ ಮೋದಿ ಹೆಸರು ಹೇಳುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ನಡೆದಿದ್ದ ಎನ್‌ಕೌಂಟರ್ ಪ್ರಕರಣದಲ್ಲಿ ಸಿಬಿಐ ತಮ್ಮನ್ನು ವಿಚಾರಣೆ ನಡೆಸುತ್ತಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರನ್ನು ಸಿಲುಕಿಸುವ ಬಗ್ಗೆ ಸಹಕರಿಸುವಂತೆಯೂ ಒತ್ತಡ ಹೇರಿತ್ತು ಎಂದಿದ್ದಾರೆ. ಪ್ರತಿಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಸಿಬಿಐ ಮತ್ತು ಇತರ ಕೇಂದ್ರ ತನಿಖಾ ಸಂಸ್ಥೆಗಳನ್ನು ಛೂ ಬಿಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಅಮಿತ್ ಶಾ ಈ ರೀತಿ ಉತ್ತರಿಸಿದ್ದಾರೆ.
ಇದೇ ವೇಳೆ, “ಸಂಸತ್ ಸದಸ್ಯತ್ವ ಕಳೆದುಕೊಂಡವರ ಪೈಕಿ ರಾಹುಲ್ ಗಾಂಧಿ ಮೊದಲಿಗರೇನೂ ಅಲ್ಲ. ಹಿಂದೆಯೂ ಅನೇಕ ಶಾಸಕರು, ಸಂಸದರು ಅನರ್ಹಗೊಂಡಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದು ಬಿಟ್ಟು ಕಾಂಗ್ರೆಸ್ ಮತ್ತು ಇತರ ಮುಖಂಡರು ವಿನಾ ಕಾರಣ ಪ್ರಧಾನಿ ಮೋದಿಯವರ ವಿರುದ್ಧ ವಾಗ್ಧಾಳಿ ನಡೆಸುತ್ತಿದ್ದಾರೆ’ ಎಂದು ದೂರಿದರು.
“ರಾಹುಲ್ ಅವರಿಗೆ ಸಂಸತ್ ಸದಸ್ಯರಾಗಿ ಮುಂದುವರಿಯುವ ಆಸೆ ಇದೆ. ಆದರೆ ತೀರ್ಪಿನ ವಿರುದ್ಧ ಮೇಲ್ಮನವಿಯನ್ನೂ ಸಲ್ಲಿಸುತ್ತಿಲ್ಲ’ ಎಂದರು. ಯುಪಿಎ ಅವಧಿಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನಿಂದಾಗಿ ಲಾಲು ಪ್ರಸಾದ್ ಯಾದವ್, ರಶೀದ್ ಅಳ್ವಿ, ಜಯಲಲಿತಾ ಸೇರಿದಂತೆ 17 ಮಂದಿ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದರು. ಈ ನೆಲದ ಕಾನೂನು ಸ್ಪಷ್ಟವಾಗಿದೆ ಎಂದು ಹೇಳಿದ ಅಮಿತ್ ಶಾ, ಯಾರ ವಿರುದ್ಧವೂ ರಾಜಕೀಯ ದ್ವೇಷ ಸಾಧಿಸುವ ಪ್ರಶ್ನೆ ಇಲ್ಲ ಎಂದರು.