ಮುಂಬೈ : ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅಜೇಯರಲ್ಲ. ಅವರನ್ನೂ ಕೂಡ ಸೋಲಿಸಬಹುದು ಎನ್ನುವ ಸಂದೇಶವನ್ನು ಮಮತಾ ಬ್ಯಾನರ್ಜಿ ನೀಡಿದ್ದಾರೆ ಎಂದು ಶಿವಸೇನಾ ಎಂಪಿ ಸಂಜಯ್ ರಾವತ್ ಹೇಳಿದ್ದಾರೆ.
ಇಂದು ಪ್ರಕಟಗೊಂಡಿರುವ ಪಶ್ಚಿಮ ಬಂಗಾಳ ವಿಧಾನ ಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಭರ್ಜರಿ ಗೆಲುವು ಸಿಕ್ಕಿದೆ. ಸುಮಾರು 200 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಪಡೆಯುವ ಮೂಲಕ ಮೂರನೇ ಬಾರಿಗೆ ದೀದಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ.
ಈ ಬಾರಿ ಪಶ್ಚಿಮ ಬಂಗಾಳ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಶತಾಯ-ಗತಾಯ ಗೆಲುವು ಪಡೆಯಲೇಬೇಕೆನ್ನುವ ಪಣ ತೊಟ್ಟಿದ್ದ ಬಿಜೆಪಿ ಹಲವು ರಣತಂತ್ರಗಳನ್ನು ಹೆಣೆದಿತ್ತು. ಸುವೇಂದು ಅಧಿಕಾರಿ ಸೇರಿದಂತೆ ಹಲವು ಟಿಎಂಸಿಯ ಘಟಾನುಘಟಿ ನಾಯಕರನ್ನು ಪಕ್ಷಕ್ಕೆ ಕರೆತಂದು ಕಣಕ್ಕಿಳಿಸಿತ್ತು. ದೀದಿಗೆ ಸೋಲಿಗೆ ರುಚಿ ತೋರಿಸಬೇಕೆಂದುಕೊಂಡಿದ್ದ ಬಿಜೆಪಿ, ಬೃಹತ್ ಜಾಥಾಗಳನ್ನು ನಡೆಸಿ ಮತಯಾಚನೆ ಮಾಡಿತ್ತು. ಮೋದಿ ಹಾಗೂ ಅಮಿತ್ ಶಾ ಅವರು ಸರಣಿ ರ್ಯಾಲಿಗಳನ್ನು ನಡೆಸಿದ್ದರು.
ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳದ ಫಲಿತಾಂಶದಲ್ಲಿ ಮೊದಲಿನಿಂದಲೂ ಟಿಎಂಸಿ ಮುನ್ನಡೆ ಕಾಯ್ದುಕೊಂಡಿತ್ತು. ಸಂಜೆಯ ಹೊತ್ತಿಗೆ ಸ್ಪಷ್ಟ ಚಿತ್ರಣ ಹೊರ ಬಿದ್ದಿದ್ದು, ಟಿಎಂಸಿ ಅಧಿಕಾರ ಉಳಿಸಿಕೊಂಡಿದೆ.
ದೀದಿ ಗೆಲುವು: ನಂದಿ ಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಲಿನ ರುಚಿ ತೋರಿಸಿದ್ದಾರೆ. 1200 ಮತಗಳ ಅಂತರದಿಂದ ದೀದಿ ಗೆಲುವಿನ ನಗೆ ಬೀರಿದ್ದಾರೆ.