ಬೆಳಗಾವಿ: ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿ ಮಾಡಲು ದೇಶಾದ್ಯಂತ ಸುಮಾರು 15 ಸಾವಿರ ಕಿಮೀವರೆಗೆ ಬೈಕ್ ರ‍್ಯಾಲಿ ನಡೆಸಿರುವ ತಮಿಳುನಾಡು ಚೆನ್ನೈನ ರಾಜಲಕ್ಷ್ಮೀ ಅವರನ್ನು ಶನಿವಾರ ನಗರದ ಚನ್ನಮ್ಮ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಗರದ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಾಜಲಕ್ಷ್ಮೀ ಹಾಗೂ ತಂಡವನ್ನು ಸ್ವಾಗತಿಸಲಾಯಿತು. ಆರತಿ ಮಾಡಿ, ಶಾಲು ಹೊದಿಸಿ, ಹೂವಿನ ಹಾರ ಹಾಕಿ ಬರಮಾಡಿಕೊಳ್ಳಲಾಯಿತು. ಆಲ್ ಇಂಡಿಯಾ ಬುಲೆಟ್(ಬೈಕ್) ರ‍್ಯಾಲಿ ಆರಂಭಿಸಿರುವ ರಾಜಲಕ್ಷ್ಮೀ ಅವರು 8 ರಾಜ್ಯ, 155 ಜಿಲ್ಲೆಗಳನ್ನು ಸುತ್ತಲಿದ್ದು, ಸುಮಾರು 15,525 ಕಿಮೀವರೆಗೆ ರಾಯಲ್ ಎನ್μಲ್ಡ್ ಬೈಕ್‌ನಲ್ಲಿ ರ‍್ಯಾಲಿ ನಡೆಸಲಿದ್ದಾರೆ. ದೇಶದೆಲ್ಲೆಡೆ ನರೇಂದ್ರ ಮೋದಿ ಅವರು ಕೈಗೊಂಡ ಜನಪರ ಯೋಜನೆಗಳ ಪ್ರಚಾರ ನಡೆಸಿ, ಈ ಸಲವೂ ಮೋದಿ ಅವರನ್ನು ಪ್ರಧಾನಿ ಮಾಡಬೇಕಾದ ಅಗತ್ಯವಿದೆ ಎಂದು ಪ್ರಚಾರ ಆರಂಭಿಸಿದ್ದಾರೆ.
25 ಜನರ ತಂಡದೊಂದಿಗೆ ರ‍್ಯಾಲಿ ನಡೆಸಿರುವ ರಾಜಲಕ್ಷ್ಮೀ ಅವರು ಮೂಲತ: ಕರ್ನಾಟಕದವರು. ಸದ್ಯ ಚೆನ್ನೈನಲ್ಲಿ ವಾಸವಾಗಿದ್ದು, ಈಗ ದೇಶಾದ್ಯಂತ ಮೋದಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಮೋದಿ ಮತ್ತೂಮ್ಮೆ ಎಂಬ ಘೋಷವಾಕ್ಯದೊಂದಿಗೆ ಬೈಕ್‌ನಲ್ಲಿ ಸುತ್ತುತ್ತಿರುವ ರಾಜಲಕ್ಷ್ಮೀ ಅವರಿಗೆ ಅದ್ಧೂರಿ ಸ್ವಾಗತ ಸಿಗುತ್ತಿದ್ದು, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ಬಂದ ಅವರು ಗೋವಾಕ್ಕೆ ತೆರಳಲಿದ್ದಾರೆ.
ಮೋದಿಗಾಗಿ ಬೈಕ್ ಏರಿರುವ ರಾಜಲಕ್ಷ್ಮೀ ಗೋವಾದಿಂದ ಮಹಾರಾಷ್ಟ್ರ, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಹರ್ಯಾಣ, ದೆಹಲಿಗೆ ತೆರಳಲಿದ್ದಾರೆ. ಒಟ್ಟು 56 ದಿನಗಳ ಕಾಲ ಈ ಪ್ರವಾಸ ಮಾರ್ಚ್ 11ರವರೆಗೆ ನಡೆಯಲಿದೆ. ಶನಿವಾರ ಬಾಗಲಕೋಟೆಯಲ್ಲಿ ರಾಜಲಕ್ಷ್ಮೀ ಅವರು 9 ಟನ್ ಭಾರದ ಲಾರಿಯನ್ನು ಹಗ್ಗದಿಂದ ಎಳೆದು ಗಮನ ಸೆಳೆದಿದ್ದರು. ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ ದೇಶವನ್ನು ಸದೃಢಗೊಳಿಸುವುದೇ ನಮ್ಮ ಉದ್ದೇಶ ಎನ್ನುತ್ತಾರೆ ರ‍್ಯಾಲಿಯಲ್ಲಿ ಬಂದ ತಮಿಳುನಾಡಿನ ಬಿಜೆಪಿ ಮುಖಂಡ ರಾಮದಾಸ.
ಸಂಸದ ಸುರೇಶ ಅಂಗಡಿ, ನಗರ ಬಿಜೆಪಿ ಮಹಿಳಾ ಮೋರ್ಚಾ ಮುಖಂಡರಾದ ಲೀನಾ ಟೋಪಣ್ಣವರ, ಸವಿತಾ ಗುಡ್ಡಾಕಾಯಿ, ಕಾಂಚನ ಕೋರ್ಪಡೆ, ಸುವರ್ಣಾ ಪಾಟೀಲ, ಪ್ರಜ್ಞಾ ಶಿಂಧೆ, ಸಾರಿಕಾ ಪಾಟೀಲ, ಮಹಾದೇವಿ ಭಾವನೂ, ಸರೋಜಿನಿ ನಡುವಿನಹಳ್ಳಿ ಸೇರಿದಂತೆ ಇತರರು ಇದ್ದರು.