ಜಮಖಂಡಿ: ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ವಜ್ರವಿದ್ದಂತೆ. ಅವರನ್ನು ಹೀಯಾಳಿಸಿ ಟೀಕೆ ಮಾಡುವ ಹಕ್ಕು
ಯಾರಿಗೂ ಇಲ್ಲವೆಂದು ಟೀಮ್ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ನಗರದ ಬಸವಭವನದ ಮೈದಾನದಲ್ಲಿ ಹಮ್ಮಿಕೊಂಡಿದ್ದ ದೇಶದಲ್ಲಿ ಮತ್ತೂಮ್ಮೆ ಮೋದಿ ಸಾರ್ವಜನಿಕ ಸಮಾರಂಭದಲ್ಲಿ
ಮಾತನಾಡಿದ ಅವರು, ಗೋದಾವರಿ, ಕಾವೇರಿ ನದಿಗಳ ಬೆಸೆಯುವ ಕಾರ್ಯ ಪೂರ್ಣಗೊಂಡರೆ ರಾಜ್ಯದಲ್ಲಿ ನೀರಾವರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಶೀಘ್ರದಲ್ಲಿ ಪ್ರಾರಂಭಗೊಳ್ಳಲಿದೆ. ಇದರಿಂದ ರೈತರ ಸಮಸ್ಯೆಗೆ ಪರಿಹಾರ ಸಿಗಲಿದೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದು, ಅದು ಹುಸಿಯಾಗಿದೆ ಎಂದು ಜನರಲ್ಲಿ ತಪ್ಪು ಕಲ್ಪನೆ ಮೂಡಿಸುತ್ತಿದ್ದಾರೆ.
ದೇಶದ 1.86 ಲಕ್ಷ ಸೈನಿಕರಿಗೆ ಬುಲೆಟ್ ಪ್ರುಫ್ ಜಾಕೇಟ್, ಸೈಬರ್ ರೈಫಲ್ ನೀಡಲಾಗಿದೆ. ಎಂ. 777, ವಜ್ರಾ, ರೆಫೇಲ್‌ಗಳಂತಹ ಯುದ್ಧ ಸಾಮಗ್ರಿ ಸೈನಿಕರಿಗೆ ನೀಡಿ, ಶತ್ರುಗಳನ್ನು ಸದೆಬಡೆಯಲು ಸಜ್ಜಾಗುವಂತೆ ಆದೇಶ ನೀಡಿದ್ದರಿಂದ ಭಾರತದ ತಂಟೆಗೆ ಯಾವ ದೇಶ ಮುಂದೆ ಬರುತ್ತಿಲ್ಲ. ಪಾಕ್ ವಿರುದ್ಧ ನಡೆಸಿದ ದಾಳಿ ಬಗ್ಗೆ ಯಾವ ದೇಶ ವಿರೋಧಿಸಿಲ್ಲ ಎಂಬುದನ್ನು ಕಾಂಗ್ರೆಸ್ಸಿಗರು ಅರಿತುಕೊಳ್ಳಬೇಕೆಂದು ಲೇವಡಿ ಮಾಡಿದರು. ದೇಶದ 1 ಕೋಟಿ 50 ಸಾವಿರ ರೈತರು ದಿನನಿತ್ಯ 50 ಸಾವಿರಗಳಷ್ಟು ವಹಿವಾಟು ಮಾಡುವಂತೆ ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ತೆರೆಯಲಾಗಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ಅತೀ ಉತ್ಕೃಷ್ಟ ಬೀಜಗಳ ಉತ್ಪನ್ನಗಳಿಂದ 14 ರಾಜ್ಯದ 100 ಜಿಲ್ಲೆಗಳಲ್ಲಿ ರೈತರಿಗೆ ಉತ್ತಮ ಬೀಜ ಪೂರೈಕೆಯಾಗಿದ್ದು, ಯೂರಿಯಾ ರಸಗೊಬ್ಬರದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯಾವುದೇ ಭ್ರಷ್ಟಾಚಾರ ಪ್ರಕರಣ, ಆರೋಪವಿಲ್ಲ ಎಂದರು. ಮೈಗೂರು ಶಿವಾನಂದ ಮಠದ ಗುರುಪ್ರಸಾದ ಮಾತನಾಡಿದರು. ಶೃತಿ ಕಟ್ಟಿ, ಗೀತಾ ಹೊರಟ್ಟಿ ಪ್ರಾರ್ಥಿಸಿದರು. ವಿಠ್ಠಲ ಪರೀಟ ಸ್ವಾಗತಿಸಿದರು. ಶೈಲೇಶ ಅಪ್ಟೆ ಪರಿಚಯಿಸಿದರು. ಭೋವಿ ನಿರೂಪಿಸಿದರು.