Advertisement

Modi ಈಗ ನಿಯೋಜಿತ ಪ್ರಧಾನಿ; ನಾಳೆ ಸಂಜೆ 7.15ಕ್ಕೆ ಪ್ರಮಾಣ ಸ್ವೀಕಾರ

12:28 AM Jun 08, 2024 | Team Udayavani |

ಹೊಸದಿಲ್ಲಿ: 3ನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಅವರನ್ನು ಶುಕ್ರವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನಿಯೋಜಿತ ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ.

Advertisement

ರವಿವಾರ ಸಂಜೆ 7.15ಕ್ಕೆ ಪ್ರಧಾನಿಯಾಗಿ ಮೋದಿ ಹಾಗೂ ಸಂಪುಟ ಸಚಿವರಿಗೆ ರಾಷ್ಟ್ರಪತಿ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನವು ತಿಳಿಸಿದೆ. ಬಿಜೆಪಿ, ಎನ್‌ಡಿಎ ನಾಯಕರೊಂದಿಗೆ ನರೇಂದ್ರ ಮೋದಿ ಅವರು ಶುಕ್ರವಾರ ಸಂಜೆ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿದರು. ಬಿಜೆಪಿ ಹಾಗೂ ಎನ್‌ಡಿಎ ಸಂಸದೀಯ ನಾಯಕನಾಗಿ ಮೋದಿ ಆಯ್ಕೆಯಾಗಿರುವ ಪತ್ರಗಳು, ಮೈತ್ರಿ ಪಕ್ಷಗಳ ಬೆಂಬಲ ಪತ್ರಗಳನ್ನು ರಾಷ್ಟ್ರಪತಿ ಅವರಿಗೆ ನೀಡಲಾಯಿತು. ಬಳಿಕ ಅವರು ಸರಕಾರವನ್ನು ರಚಿಸಲು ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದರು. ಜತೆಗೆ ಮೋದಿ ಅವರನ್ನು ನಿಯೋಜಿತ ಪ್ರಧಾನಿಯನ್ನಾಗಿ ರಾಷ್ಟ್ರಪತಿಗಳು ನೇಮಕ ಮಾಡಿದರು.

ಯಾರಿಗೆಲ್ಲ ಇದೆ ವಿಶೇಷಾಹ್ವಾನ?
ಪ್ರಧಾನಿ ಮೋದಿಯವರ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ 8,000 ಮಂದಿಗೆ ಆಹ್ವಾನ ನೀಡಲಾಗಿದ್ದು, ಈ ಪೈಕಿ ವಿದೇಶಿ ನಾಯಕರು, ಗಣ್ಯರು, ರಾಜಕಾರಣಿಗಳು ಮಾತ್ರವಲ್ಲದೇ, ವಿವಿಧ ಕ್ಷೇತ್ರಗಳಲ್ಲಿನ ಸಾಧಕರು, ಸಮಾಜದ ಸರ್ವಸ್ತರವನ್ನು ಪ್ರತಿನಿಧಿಸುವ ಪ್ರಮುಖರೂ ಸೇರಿದ್ದಾರೆ.

ವಿಕಸಿತ ಭಾರತದ ರಾಯಭಾರಿಗಳೆಂದು ವಂದೇ ಭಾರತ್‌, ಮೆಟ್ರೋ ರೈಲಿನ ಪ್ರತಿನಿಧಿಗಳು, ಕೇಂದ್ರ ಯೋಜನೆಗಳ ಫ‌ಲಾನುಭವಿಗಳನ್ನು ಆಹ್ವಾನಿಸಲಾಗಿದೆ. ಏಷ್ಯಾದ ಮೊಟ್ಟ ಮೊದಲ ಮಹಿಳಾ ಲೋಕೋ ಪೈಲಟ್‌ ಸುರೇಖಾ ಯಾದವ್‌ ಅವರಿಗೂ ಆಹ್ವಾನ ನೀಡಲಾಗಿದೆ. ಜತೆಗೆ ಬುಡಕಟ್ಟು ಮಹಿಳಾ ಸಾಧಕಿಯರು, ನೈರ್ಮಲ್ಯ ಕಾರ್ಮಿಕರು, ತೃತೀಯ ಲಿಂಗಿ ಸಾಧಕರು ಹಾಗೂ ಸೆಂಟ್ರಲ್‌ ವಿಸ್ತಾ ಯೋಜನೆಯ ಕಾರ್ಮಿಕರೂ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಜತೆಗೆ ಶಾಸಕರು, ಸಂಸದರು, ಸಚಿವರು ಸೇರಿದಂತೆ ರಾಜಕೀಯ ವಲಯದ ಹಲ ವರು, ಸರ್ವ ಧರ್ಮಗಳನ್ನು ಪ್ರತಿನಿಧಿಸುವ 50ಕ್ಕೂ ಅಧಿಕ ಧಾರ್ಮಿಕ ಮುಖಂಡರಿಗೂ ಆಹ್ವಾನ ನೀಡ ಲಾಗಿದೆ. ಬಾಂಗ್ಲಾದೇಶ, ನೇಪಾಲ, ಭೂತಾನ್‌, ಶ್ರೀಲಂಕಾ, ಮಾಲ್ದೀವ್ಸ್‌ ಸೇರಿದಂತೆ ಹಲವು ರಾಷ್ಟ್ರಗಳ ಪ್ರಧಾನಿ, ಅಧ್ಯಕ್ಷರಿಗೂ ಆಹ್ವಾನ ನೀಡಲಾಗಿದ್ದು, ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಝು ಆಹ್ವಾನ ಸ್ವೀಕರಿಸಿ ಆಗಮಿಸುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next