ಮುದ್ದೇಬಿಹಾಳ: ಮಹದಾಯಿ ಸಮಸ್ಯೆ ಬಗೆಹರಿಸಲು ಮೂರು ಬಾರಿ ಪ್ರಧಾನಿ ನರೇಂದ್ರ ಮೋದಿಗೆ ಏನು ಮಾಡಬಹುದು ಅನ್ನೋ ಸಲಹೆ ನೀಡಿ ಪತ್ರ ಬರೆದಿದ್ದೇನೆ, ಒಂದು ಬಾರಿ ಭೇಟಿಯಾಗಿದ್ದೇನೆ. ಆದರೆ ನನ್ನ ಸಲಹೆಗೆ ಅವರು ಮಾನ್ಯತೆ ಕೊಟ್ಟಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀರಾವರಿ ವಿಷಯದಲ್ಲಿ ನಾನು ಪ್ರಧಾನಿ ಆಗಿದ್ದಾಗ
ಸಾಕಷ್ಟು ಜನಪರ ತೀರ್ಮಾನ ಕೈಗೊಂಡಿದ್ದೆ. ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಆದವರಿಗೆ ಮಾನವೀಯತೆ ಇರಬೇಕು. ನಾನು ಪ್ರಧಾನಿ ಆಗಿದ್ದಾಗ ರಾಜ್ಯಕ್ಕೆ ಹಲವು ಮಹತ್ವದ ಯೋಜನೆ ಜಾರಿಗೊಳಿಸಿದ್ದೆ. ಹುಬ್ಬಳ್ಳಿ- ಅಂಕೋಲಾ ಮಧ್ಯೆ ರೈಲ್ವೆ ಯೋಜನೆ, ಹೆದ್ದಾರಿ ಅಭಿವೃದ್ಧಿ, ರೈಲ್ವೆ ಬೆಳವಣಿಗೆಗೆ ಹೆಚ್ಚಿನ ಅವಕಾಶ ಕೊಟ್ಟಿದ್ದೆ. ಆದರೆ ಅವನ್ನೆಲ್ಲ ನಿಲ್ಲಿಸಿದ್ದಾರೆ. ಇದಕ್ಕೇನು ಕಾರಣ. ನಾನೇನು ಉಪಯೋಗಕ್ಕೆ ಬರದ ಯೋಜನೆಗಳನ್ನು ಮಾಡಿದ್ದೇನಾ ಎಂದು ನೋವು ತೋಡಿಕೊಂಡರು. ನಾನು ಪ್ರಧಾನಿ ಆಗಿದ್ದಾಗ ಉತ್ತರ ಕರ್ನಾಟಕದ ಕೃಷ್ಣಾ ಮೆಲ್ದಂಡೆ ಯೋಜನೆಯಡಿ ನಾರಾಯಣಪುರ, ಆಲಮಟ್ಟಿ ಡ್ಯಾಂ, ಮುಳವಾಡ ಏತ ನೀರಾವರಿ ಮೊದಲ ಹಂತ, ಗುತ್ತಿ ಬಸವಣ್ಣ ಏತ ನೀರಾವರಿ ಸಹಿತ ಹಲವು ಯೋಜನೆ ಜಾರಿಗೊಳಿಸಿದ್ದೆ. ಆದರೆ ಆಗ ಆರ್ಥಿಕ ಕೊರತೆಯಿಂದ ಯೋಜನೆ ಪೂರ್ಣಗೊಳಿಸಲು ಆಗಲಿಲ್ಲ. ಈಗಲೂ ಸಂಪೂರ್ಣ ಸಾಧ್ಯವಾಗಿಲ್ಲ. ಯುಕೆಪಿ ಬಿ ಸ್ಕೀಂನಲ್ಲಿ 130-138 ಟಿಎಂಸಿ ನೀರು ಸಿಕ್ಕಿದೆ. ಅದನ್ನು ಈಗ ಬಳಕೆ ಮಾಡಲು ಸರ್ಕಾರ ಹೊರಟಿದೆ. ಕಳೆದ 5 ವರ್ಷದಲ್ಲಿ ಈಗಿನ ಸರ್ಕಾರ ಆ ನೀರನ್ನು ಬಳಕೆ ಮಾಡಿಲ್ಲ. ಆದರೂ ಈಗ ಆ ನೀರಿನ ಬಳಕೆಗಾಗಿ ಮತ್ತೆ 50,000 ಕೋಟಿ ಖರ್ಚು ಮಾಡ್ತೇವೆ ಅಂತ ಹೇಳ್ತಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಇದು ಅಸಾಧ್ಯವಾದ ಮಾತು. ಮುಂದೆ ಯಾವ ಸರ್ಕಾರ ಬರುತ್ತೆ ಅನ್ನೋ ಗ್ಯಾರಂಟಿ ಇಲ್ಲದಂತಾಗಿದೆ ಎಂದರು.
ಆಲಮಟ್ಟಿ ಜಲಾಶಯ 524 ಮೀ. ಎತ್ತರದವರೆಗೆ ಪೂರ್ಣಗೊಳಿಸಿದ್ದೇವೆ. ಆದರೆ ಎಸ್.ಎಂ. ಕೃಷ್ಣ ಸರ್ಕಾರ ಇದ್ದಾಗ 519 ಮೀ.ವರೆಗೆ ಮಾತ್ರ ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಗೇಟ್ ಕೂಡಿಸಿ ಡ್ಯಾಂ ಲೋಕಾರ್ಪಣೆ ಮಾಡಿದರು. ಮತ್ತೇ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ 519 ಮೀ. ಎಂದು ತಪ್ಪಾಗಿದೆ ಅದನ್ನು ಸರಿಪಡಿಸಿ 524 ಮೀ.ಗೆ ಗೇಟ್ ಏರಿಸಿ ನೀರು ಹಿಡಿಯೋಕೆ ಅವಕಾಶ ಕೊಡುವಂತೆ ಕೋರಲಾಗಿದೆ. ಈಗ 524 ಮೀ.ವರೆಗೆ ನೀರು ನಿಲ್ಲಿಸೋದು, ಬಳಸೋದಷ್ಟೇ ಉಳಿದಿದೆ ಎಂದರು.
ಸಿಎಂ ಸಿದ್ದರಾಮಯ್ಯ ಮಠಗಳು ಸೇರಿದಂತೆ ತುಂಬಾ ವಿಷಯಗಳ ಮೇಲೆ ಕಣ್ಣು ಹಾಕಿದ್ದಾರೆ. ಆ ಚರ್ಚೆ ಈಗ ಬೇಡ. ಚುನಾವಣೆಗೀಗ 3 ತಿಂಗಳಿದೆ. ಕಾಂಗ್ರೆಸ್, ಬಿಜೆಪಿ ತಲಾ 5 ವರ್ಷ ರಾಜ್ಯ ಆಳಿದ್ದಾರೆ. ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ಗೂ 5 ವರ್ಷ ಅಧಿಕಾರ ಕೊಡಿ ಎಂದು ಜನರನ್ನು ಬೇಡುತ್ತಿದ್ದೇವೆ. ರಾಮನಗರ ಕುಮಾರಸ್ವಾಮಿ ಮೂಲಕ್ಷೇತ್ರ. ಮುಂಬೈ ಕರ್ನಾಟಕದಲ್ಲಿ ಜೆಡಿಎಸ್‌ಗೆ ಬೆಲೆ ಇಲ್ಲ ಅನ್ನೋ ಪ್ರಚಾರ ಆಗಿತ್ತು. ಈಗ ಉಕದ ಕೆಲ ಪುಣ್ಯಾತ್ಮರು ನಮ್ಮಲ್ಲಿ ಬನ್ನಿ ಅನ್ನೋ ಒತ್ತಾಯ ಮಾಡ್ತಿರುವುದಕ್ಕೆ ನಾನು ಆಭಾರಿ. ಉಕದಲ್ಲಿ ಕುಮಾರಸ್ವಾಮಿ ಸ್ಪರ್ಧಿಸೋ ತೀರ್ಮಾನ ಆಮೇಲೆ. ಮುಂಬೈ ಕರ್ನಾಟಕದಲ್ಲೂ ಜೆಡಿಎಸ್‌ಗೆ ಶಕ್ತಿ ಇದೆ ಅನ್ನೋದನ್ನು ಸಾಬೀತು ಮಾಡೋ ಅವಕಾಶ ದೊರೆತಿದೆ. ಕುಮಾರಸ್ವಾಮಿ ಎರಡು ಕಡೆ ಸ್ಪರ್ಧಿಸಬಾರದೆಂದೇನಿಲ್ಲ. ಆದರೂ ಸ್ವಕ್ಷೇತ್ರದವರ ತೀರ್ಮಾನದ ಮೇಲೆ ಎಲ್ಲ ನಿಂತಿದೆ ಎಂದರು.
ನಾವೇ ಸ್ಟಾರ್ ಕ್ಯಾಂಪೇನರ್: ನಾನು, ಕುಮಾರಸ್ವಾಮಿ ಸ್ಟಾರ್ ಕ್ಯಾಂಪೇನರ್ ಆಗಿದ್ದೇವೆ. ಜೆಡಿಎಸ್‌ಗೆ ಆರ್ಥಿಕ ಬಲ ಇಲ್ಲ. ನನಗೆ ವಯಸ್ಸಾಗಿದೆ. ಹೆಚ್ಚು ಪ್ರವಾಸ, ತಿರುಗಾಟ ಸಾಧ್ಯವಿಲ್ಲ. ಜೆಡಿಎಸ್ ಮುಖಂಡರಾದ ಸಿಂಧ್ಯ, ವಿಶ್ವನಾಥ, ಕಾಶೆಂಪುರ, ಮಧು ಬಂಗಾರಪ್ಪ, ಸುರೇಶಬಾಬು, ರಮೇಶಬಾಬು, ಮನೋಹರ ಸಹಿತ 8 ಜನರ ತಂಡ 3 ಭಾಗವಾಗಿ ರಾಜ್ಯವ್ಯಾಪಿ ಜೆಡಿಎಸ್ ಪರ ಒಂದು ತಿಂಗಳು ಪ್ರಚಾರ ನಡೆಸಲು ಸಿದ್ಧತೆ ನಡೆದಿದೆ. ಫೆ.17ರಂದು ಮೊದಲ ಪಟ್ಟಿ ಬಿಡುಗಡೆ ಮಾಡಲಿದ್ದು ಅದರಲ್ಲಿ ಬಿಎಸ್ಪಿಯ 20 ಸ್ಥಾನ ಹಂಚಿಕೆ ಅಂತಿಮಗೊಳಿಸಲಾಗುತ್ತದೆ. ಮಾರ್ಚ್ ಅಂತ್ಯಕ್ಕೆ ಕೊನೆ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದರು.
ನೀರಾವರಿ ಮಂತ್ರಿ ಎಂ.ಬಿ. ಪಾಟೀಲರ ಕೆಲಸದ ಬಗ್ಗೆ ನಾನು ಸರ್ಟಿಫಿಕೇಟ್ ಕೊಡೊಲ್ಲ. ಜನತೆಯೇ ಕೊಡ್ತಾರೆ. ಈ ಸರ್ಕಾರ
ಏನು ಮಾಡಿದೆ ಅನ್ನೋ ಚರ್ಚೆ ಮಾಡೋ ಶಕ್ತಿಯನ್ನು ಜನತೆ ಹೊಂದಿದ್ದಾರೆ. ಅವರೇ ತೀರ್ಪು ಕೊಡ್ತಾರೆ. ಅವರು ಪ್ರತಿನಿಧಿಸುವ ವಿಜಯಪುರ ಜಿಲ್ಲೆ ಬಬಲೇಶ್ವರದ ಸೀಟನ್ನು ಸ್ಥಾನ ಹೊಂದಾಣಿಕೆಯನ್ವಯ ಬಿಎಸ್ಪಿಯವರು ಕೇಳಿದ್ದಕ್ಕೆ ಅವರಿಗೇ ಬಿಟ್ಟುಕೊಟ್ಟಿದ್ದೇವೆ. ಇದರಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಯಾರೂ ತಪ್ಪು ಕಲ್ಪನೆಗೊಳಗಾಗಬಾರದು ಎಂದರು.