Advertisement

ಕಮಲ ದಳ ಮೈತ್ರಿ ಸುಳಿವು? 

06:00 AM May 02, 2018 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗjರಿ ಹರಿಬಿಡುತ್ತಲೇ ಬಿಜೆಪಿಯ ಪ್ರಚಾರದ ಕಾವು ಹೆಚ್ಚಿಸಿದ್ದಾರೆ. ಜತೆಗೆ ಮಾಜಿ ಪ್ರಧಾನಿ ದೇವೇಗೌಡರನ್ನು ಶ್ಲಾಘಿಸಿದ್ದಾರೆ.  

Advertisement

ಬಿಜೆಪಿಯ ಕಾಯಂ ವಿರೋಧಿ ಕಾಂಗ್ರೆಸ್‌ ಪಕ್ಷವನ್ನು ಜೆಡಿಎಸ್‌ನಿಂದ ದೂರವಿಟ್ಟು, ಫ‌ಲಿತಾಂಶದ ಬಳಿಕ ಬಿಜೆಪಿ-ಜೆಡಿಎಸ್‌ ಮೈತ್ರಿಯ ಮುನ್ಸೂಚನೆಯನ್ನು ಪ್ರಧಾನಿ ನೀಡಿದರೇ ಎಂಬ ಪ್ರಶ್ನೆ ಈಗ ಚರ್ಚೆಗೆ ಕಾರಣವಾಗಿದೆ. ಮಂಗಳವಾರ ಬೆಳಗ್ಗೆ 11.45ಕ್ಕೆ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿಯಲ್ಲಿ ಆಯೋಜಿಸಲಾಗಿದ್ದ ರ್ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ ಅವರು, “”ಕರ್ನಾಟಕದಲ್ಲಿ ಮುಖ್ಯಮಂತ್ರಿಗೆ ಟೂ ಪ್ಲಸ್‌ ಒನ್‌ ಫಾರ್ಮುಲಾ ಹಾಗೂ ಅವರ ಸಂಪುಟದ ಸಚಿವ ರಿಗೆ ಒನ್‌ ಪ್ಲಸ್‌ ಒನ್‌ ಫಾರ್ಮುಲಾ ನಡೆಯುತ್ತಿದೆ,” ಎಂದು ಹೇಳುವ ಮೂಲಕ ಸಿಎಂ ವಿರುದ್ಧ ಮಾತಿನ ಬಾಣ ಬಿಟ್ಟರು. ಕರ್ನಾಟಕದಲ್ಲಿ ಹಿಂದೆ ಕುಟುಂಬ ರಾಜಕಾರಣದ ಸೂತ್ರ ಇತ್ತು. ಈಗ ಬದಲಾಗಿದೆ. ಟೂ ಪ್ಲಸ್‌ ಒನ್‌ ಎಂಬ ಹೊಸ ಫಾರ್ಮುಲಾ ನಡೆಯುತ್ತಿದೆ. 

ಮುಖ್ಯಮಂತ್ರಿಯವರು ಸೋಲಿನ ಭೀತಿಯಿಂದ 2 ಕಡೆ ಸ್ಪರ್ಧಿಸುತ್ತಿದ್ದಾರೆ. ಹಿಂದೆ ತಾವು ಗೆದ್ದಿದ್ದ ಕ್ಷೇತ್ರದಲ್ಲಿ ತಮ್ಮ ಮಗನನ್ನು ನಿಲ್ಲಿಸಿ ಬಲಿ ಕೊಡಲು ನಿರ್ಧರಿಸಿದ್ದಾರೆ ಎಂದು ಛೇಡಿಸಿದರು. ಟು ಪ್ಲಸ್‌ ಒನ್‌ ಅಂದರೆ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಹಾಗೂ ಅವರ ಪುತ್ರನಿಗೆ ಇನ್ನೊಂದು ಕ್ಷೇತ್ರ, ಹಾಗೆಯೇ ಸಚಿವರಿಗೆ ಒನ್‌ ಪ್ಲಸ್‌ ಒನ್‌ ಫಾರ್ಮುಲಾ ಅಂದರೆ ಅವರು ಮತ್ತು ಮಕ್ಕಳಿಗೆ ಕ್ಷೇತ್ರ ನೀಡಲಾಗಿದೆ ಎಂದು ವ್ಯಂಗ್ಯವಾಡಿದರು.

ತಮ್ಮೊಂದಿಗೆ 15 ನಿಮಿಷ ಚರ್ಚೆಗೆ ಬರಲಿ ಎಂದಿದ್ದ ರಾಹುಲ್‌ಗೆ ಉತ್ತರಿಸಿದ ಮೋದಿ, “”ಕಾಂಗ್ರೆಸ್‌ ಅಧ್ಯಕ್ಷರು 15 ನಿಮಿಷ ಮಾತಾಡುತ್ತಾರೆ ಎಂಬುದು ಅಚ್ಚರಿ ಮೂಡಿಸುತ್ತದೆ. ಕಾಂಗ್ರೆಸ್‌ ಅಧ್ಯಕ್ಷರೇ, ನೀವು ಹೆಸರಿಗಾಗಿ ಇರುವವರು (ನಾಮಧಾರ್‌). ನಾವು ಸಾಧಾರಣ ಬಟ್ಟೆ ತೊಡುವ ಕೆಲಸಗಾರರು (ಕಾಮ್‌ದಾರ್‌). ನಾವು ಹೇಗೆ ಒಂದೇ ಕಡೆ ಕುಳಿತುಕೊಳ್ಳಲು ಸಾಧ್ಯ? ಎಂದರು. ಅಲ್ಲದೇ, ನಿಮ್ಮ ಯಾವುದೇ ಮಾತಿಗೆ ನಾವು ಘಾಸಿಗೊಳ್ಳುವುದಿಲ್ಲ. ಇದೇನು ನಮಗೆ ಹೊಸದೂ ಅಲ್ಲ. ನಿಮ್ಮ ಇಂಥ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೆ’’ ಎಂದರು. ಜತೆಗೆ, 15 ನಿಮಿಷ ಸಂಸತ್‌ನಲ್ಲಿ ಮಾತಾಡುವು ದು ಪಕ್ಕಕ್ಕಿರಲಿ, ಇಂಗ್ಲಿಷಿನಲ್ಲೋ, ಹಿಂದಿಯಲ್ಲೋ ಅಥವಾ ನಿಮ್ಮ ಮಾತೃಭಾಷೆಯಲ್ಲಾ ದರೂ, ಕರ್ನಾಟಕ ಸರ್ಕಾರದ ಸಾಧನೆಗಳನ್ನು ನಿಮ್ಮ ಸಭೆಗಳಲ್ಲಿ ಚೀಟಿಯ ಸಹಾಯವಿಲ್ಲದೇ ಮಾತನಾಡಿ ನೋಡೋಣ’’ ಎಂದು ಮೋದಿ ಪ್ರತಿ ಸವಾಲು ಹಾಕಿದರು.

5 ಬಾರಿ ವಿಶ್ವೇಶ್ವರಯ್ಯ ಹೆಸರು ಹೇಳಿ: ಕಾಂಗ್ರೆಸ್‌ ಅಧ್ಯಕ್ಷರೇ ಸರ್‌ ಎಂ. ವಿಶ್ವೇಶ್ವರಯ್ಯನವರ ಹೆಸರನ್ನು 5 ಬಾರಿ ಸರಿಯಾಗಿ ಹೇಳಿಬಿಡಿ. ಅಷ್ಟು ಮಾಡಿಬಿಟ್ಟರೆ ಸಾಕು ಕರ್ನಾಟಕದ ಜನತೆ ನೀವೊಬ್ಬ ಸಮರ್ಥ ವ್ಯಕ್ತಿ ಎಂದು ನಿರ್ಧರಿಸುತ್ತದೆ ಎಂದು ಮೋದಿ ವ್ಯಂಗ್ಯವಾಗಿ ನುಡಿದರು.

Advertisement

ರಾಜ್‌ ನೆನೆದ ಮೋದಿ: ಮಂಟೇಸ್ವಾಮಿ, ದೇವಿ ಮಾರಮ್ಮ, ಮಲೆ ಮಹದೇಶ್ವರ, ಬಿಳಿಗಿರಿರಂಗ, ಚಾಮರಾಜೇಶ್ವರ, ಹಿಮವದ್‌ ಗೋಪಾಲಸ್ವಾಮಿ, ಚಾಮರಾಜ ಒಡೆಯರ್‌, ಡಾ. ರಾಜ್‌ಕುಮಾರ್‌, ಜಿ.ಪಿ.ರಾಜರತ್ನಂ ಅವರ ಹೆಸರನ್ನು ಪ್ರಸ್ತಾಪಿಸುವ ಮೂಲಕ ಕನ್ನಡದಲ್ಲೇ ಭಾಷಣ ಆರಂಭಿಸಿ, ಕನ್ನಡದಲ್ಲೇ ಮುಗಿಸಿದರು.

ಸಲೀಸಾಗಿ ಕೊಲೆ: ಕೇಂದ್ರದಲ್ಲಿ ನಾವು ಸುಲಭವಾಗಿ ವ್ಯಾಪಾರ ನಡೆಸುವ ಬಗ್ಗೆ ನೀತಿ ಜಾರಿಗೆ ತಂದಿದ್ದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸುಲಭವಾಗಿ ಹತ್ಯೆ ಮಾಡುವ ವಿಧಾನ ಪಾಲಿಸುತ್ತಿದೆ. ರಾಜ್ಯದಲ್ಲಿ 24 ಮಂದಿ ಬಿಜೆಪಿ ಕಾರ್ಯಕರ್ತರು ಕೊಲೆಯಾಗಿದ್ದಾರೆ. ಅವರು ಮಾಡಿದ ಅಪರಾಧವೇನು? ನಿಮ್ಮ ಸಿದ್ಧಾಂತಗಳನ್ನು ವಿರೋಧಿಸಿದರು ಎಂಬ ಕಾರಣಕ್ಕಾಗಿ ಅವರನ್ನು ಹತ್ಯೆ ಮಾಡಲಾಯಿತೇ? ದೇಶದ ಇತರೆ ಭಾಗದಲ್ಲಿ ಕಾಂಗ್ರೆಸ್‌ ಅನ್ನು ಕಿತ್ತೂಗೆದಂತೆ ಇಲ್ಲೂ ಸೋಲಿಸಿದರೆ ಆಗ ರಾಜಕೀಯ ದ್ವೇಷದ ಹತ್ಯೆಗಳು ಕಡಿಮೆಯಾಗುತ್ತವೆ ಎಂದು ಮೋದಿ ಪ್ರತಿಪಾದಿಸಿದರು.

ಬಹುಮತವುಳ್ಳ ಸರ್ಕಾರ ನೀಡಿ: ಕೇಂದ್ರದಲ್ಲಿ ಸಂಪೂರ್ಣ ಬಹುಮತವುಳ್ಳ ಸರ್ಕಾರವನ್ನು ನೀವೇ ಆರಿಸಿದ್ದೀರಿ. ಇಲ್ಲೂ ಹಾಗೆಯೇ ಬಿ.ಎಸ್‌ .ಯಡಿಯೂರಪ್ಪ ಅವರಿಗೆ ಪೂರ್ಣ ಬಹುಮತನೀಡಿ, ಸರ್ಕಾರ ರಚಿಸಲು ನೆರವಾಗಿ. ಸದ್ಯ ಭಾರತ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. ಇದಕ್ಕೆನಾನು ಕಾರಣವಲ್ಲ, ನೀವೇ ಕಾರಣ ಎಂದಮೋದಿ, ಮಹಾತ್ಮಾ ಗಾಂಧಿ ಅವರ ಕನಸಿನಂತೆ ಕಾಂಗ್ರೆಸ್‌ ಕಿತ್ತೂಗೆಯುವ ಕೆಲಸಕ್ಕೆ ಕೈಜೋಡಿಸಿ ಎಂದು ಮನವಿ ಮಾಡಿದರು. ಅಲ್ಲದೆ ಸಿದ್ದರಾಮಯ್ಯ ಸರ್ಕಾರ ರಾಜ್ಯದ ರೈತರಿಗೆ ಏನನ್ನೂ ಮಾಡಲಿಲ್ಲವೆಂದ ಅವರು, ಸೋಲುವ ಭಯದಿಂದ ಸುಳ್ಳೇ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರು.

ದೊಡ್ಡಗೌಡರ ಮೇಲೆ ಪ್ರೀತಿ 
ಸಂತೇಮರಹಳ್ಳಿಯಲ್ಲಿ ರಾಹುಲ್‌ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದ ನರೇಂದ್ರ ಮೋದಿ ಅವರು, ಉಡುಪಿ ರ್ಯಾಲಿಯಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಶ್ಲಾ ಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಮಾಜಿ ಪ್ರಧಾನಿಯೂ ಆಗಿರುವ ಮತ್ತು ದೇಶದ ಅತ್ಯುನ್ನತ ನಾಯಕರಲ್ಲೊಬ್ಬರಾದ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ರಾಹುಲ್‌ ಗಾಂಧಿ, ಅವರಿಗೆ ಅಗೌರವ ತೋರಿದ್ದಾರೆ ಎಂದು ವಾಗ್ಧಾಳಿ ನಡೆಸಿದರು. 15-20 ದಿನಗಳ ಹಿಂದೆ ಗೌಡರ ಬಗ್ಗೆ ರಾಹುಲ್‌ ಮಾತನಾಡಿದ್ದನ್ನು ಕೇಳಿದ್ದೇನೆ, ಅದು ತೀರಾ ಅಹಂಕಾರದ ಮಾತು ಎಂದ ಮೋದಿ, ಅಧ್ಯಕ್ಷರಾಗಿ ಈಗಷ್ಟೇ ಬದುಕು ಶುರು ಮಾಡಿದ್ದೀರಿ ಎಂದರು.

ನಾಯಕನ ಸಾಧನೆ ಬಣ್ಣಿಸಲು ಯಾರಿಗೇ ಆಗಲಿ ಸಂಸ್ಕಾರವಿರಬೇಕು. ಮೋದಿ ಹೊಗಳಿಕೆಯಲ್ಲಿ ಹುಳುಕು ಹುಡುಕಿ ಟ್ವೀಟ್‌ ಮಾಡಿದ ಸಿದ್ದರಾಮಯ್ಯನವರ ಮನಸ್ಸುಎಷ್ಟು ಕಲ್ಮಶ ಎನ್ನುವುದು ಈಗ ಬಟಾಬಯಲಾಗಿದೆ.
● ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ

ಮೋದಿಯವರೇ, ಮಾಜಿ ಪ್ರಧಾನಿ ದೇವೇಗೌಡರಿಗೆ ಹಾಗೂ ಹಿರಿಯರಿಗೆ ಗೌರವ ನೀಡುವುದು ನಮಗೆ ಚೆನ್ನಾಗಿ ಗೊತ್ತು.
ಆದರೆ, ಮೊದಲು ನೀವು ಹತ್ತಿ ಬಂದ ಏಣಿಗೆ ಗೌರವ ನೀಡುವುದನ್ನು ಮರೆಯದಿರಿ. ಎಲ್‌. ಕೆ.ಆಡ್ವಾಣಿಯಂತಹ ಹಿರಿಯ ನಾಯಕರಿಗೆ ನೀವು ನೀಡಿರುವ ಗೌರವ ಇಡೀ ದೇಶವೇ ನೋಡಿದೆ.

● ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next