Advertisement

ರೈತರ ಆದಾಯ ದ್ವಿಗುಣ ಮಾಡುವ ಸಂಕಲ್ಪ ಮಾಡಿದ್ದಾರೆ ಮೋದಿ

03:51 PM Apr 29, 2022 | Shwetha M |

ಇಂಡಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಗತಿಸಿದ್ದು ಭಾರತ ಅಮೃತ ಮಹೋತ್ಸವ ಆಚರಣೆ ಮಾಡುತ್ತಿದೆ. ಈ ಸಂದರ್ಭದಲ್ಲಿ ಮೋದಿ ಆತ್ಮ ನಿರ್ಭರ ಭಾರತದ ಕರೆ ನೀಡಿದರು. ಭಾರತೀಯರೆಲ್ಲ ಸ್ವಾವಲಂಬಿಗಳಾಗಬೇಕು ಎಂಬುದು ಮೋದಿಯವರ ಆಶಯವಾಗಿದೆ ಎಂದು ರಾಜ್ಯ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

Advertisement

ಗುರುವಾರ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷದ ವಿಜಯಪುರ ಜಿಲ್ಲಾ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಆತ್ಮ ನಿರ್ಭರ ಕೃಷಿ ಮತ್ತು ಸಿರಿಧಾನ್ಯಗಳ ವರ್ಷ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆತ್ಮ ನಿರ್ಭರ ಭಾರತ ಎಂದರೆ ಭಾರತ ದೇಶದ ಜನರು ಸ್ವಾವಲಂಬಿಗಳಾಗಿ ಬದುಕಬೇಕು. ದೇಶದಲ್ಲಿ 50 ಪ್ರತಿಶತ ಜನ ರೈತಾಪಿ ಜನ. ಜಿಡಿಪಿಯಲ್ಲಿ ರೈತರ ಪಾಲು 10, 12 ಪ್ರತಿಶತ. ರೈತನ ಆರ್ಥಿಕ ಸ್ಥಿತಿ ಸುಧಾರಣೆ ಮಾಡಲು ಮೋದಿ ವಿಶೇಷ ಕಾಳಜಿ ತೋರಿಸಿ ಅನೇಕ ಯೋಜನೆ ರೂಪಿಸಿದ್ದಾರೆ. ಆ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ಕಾರ್ಯ ನಮ್ಮ ರೈತ ಮೋರ್ಚಾ ಮಾಡುತ್ತಿದೆ. ನರೇಂದ್ರ ಮೋದಿಯವರು ರೈತರ ಆದಾಯ ದ್ವಿಗುಣ ಮಾಡುವ ಸಂಕಲ್ಪ ಮಾಡಿದ್ದಾರೆ. ಪ್ರಕೃತಿ ಜೊತೆಗೆ ಸೆಣಸಾಟ ಮಾಡಿ ದೇಶಕ್ಕೆ ಅನ್ನ ಹಾಕುವ ಏಕೈಕ ವರ್ಗ ಅದು ಕಾಯಕಯೋಗಿ ರೈತರು. ಪ್ರತಿ ತುತ್ತು ಅನ್ನ ತಿನ್ನುವಾಗ ರೈತರನ್ನು ಸ್ಮರಿಸಬೇಕು ಎಂದರು.

ಕೊರೊನಾದಿಂದ ಎಲ್ಲವೂ ಸ್ತಬ್ಧವಾಗಿತ್ತು. ಆದರೆ ರೈತರು ಮಾತ್ರ ತಮ್ಮ ಕಾರ್ಯ ನಿಲ್ಲಿಸಲಿಲ್ಲ. ಅವರು ಎಂದಿನಂತೆ ತಮ್ಮ ಬೆಳೆ ಬೆಳೆದು ಈ ನಾಡಿಗೆ ಅನ್ನ ನೀಡಿದ್ದಾರೆ. ಎಲ್ಲ ಉದ್ಯಮ ನಿಂತರೂ ಕೃಷಿ ಕಾಯಕ ನಿಲ್ಲಲ್ಲ ಎಂದರು.

ಕಳೆದ 10 ವರ್ಷದ ಹಿಂದೆ ದೇಶದ ರೈತರಿಗೆ ಬಜೆಟ್‌ನಲ್ಲಿ ಕೇವಲ 20 ಸಾವಿರ ಕೋಟಿ ಇಡಲಾಗುತ್ತಿತ್ತು. ಈಗ ಮೋದಿಯವರು 1 ಲಕ್ಷ ಕೋಟಿಗೂ ಹೆಚ್ಚಿನ ಹಣ ಮೀಸಲಿಟ್ಟಿದ್ದಾರೆ. ದೇಶದಲ್ಲಿ 15 ಕೋಟಿ ಕೃಷಿ ಕುಟುಂಬಗಳಿವೆ. ಈಗಾಗಲೆ 11 ಕೋಟಿ ರೈತರಿಗೆ ಸ್ಟೈಲ್‌ಹೆಲ್ತ್‌ಕಾರ್ಡ್‌ ನೀಡಲಾಗಿದೆ. ಕೃಷಿಗೆ ಸರಕಾರ ಸದಾ ಉತ್ತೇಜನ ನೀಡುತ್ತಿದ್ದು ರೈತರು ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕೆಂದರು.

Advertisement

ಮಳೆ ಆಶ್ರಿತ ಪ್ರದೇಶಗಳಿಗೆ ನೀರು ಹಿಡಿದುಕೊಳ್ಳಲು ಸಾಕಷ್ಟು ಅನುದಾನ ನೀಡಲಾಗುತ್ತಿದೆ. ನೀರಾವರಿಗೆ ಅವಶ್ಯವಿರುವ ಉಪಕರಣ ಖರೀದಿಗೆ ಕೇಂದ್ರ ಸರಕಾರ ಸಾಮಾನ್ಯರಿಗೆ 75 ಪ್ರತಿಶತ ಸಬ್ಸಿಡಿ ನೀಡುತ್ತಿದೆ. ಪಜಾ, ಪಪ ವರ್ಗದವರಿಗೆ ಶೇ. 95 ಸಬ್ಸಿಡಿ ನೀಡಲಾಗುತ್ತಿದೆ.

ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕಾಸುಗೌಡ ಬಿರಾದಾರ ಮಾತನಾಡಿ, ನಮ್ಮ ರೈತರಿಗೆ ಸರಕಾರ 24 ಗಂಟೆಗಳ ಕಾಲ ನೀರು ಮತ್ತು ವಿದ್ಯುತ್‌ ನೀಡಬೇಕು. ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ಪರವಾಗಿ ಸಾಕಷ್ಟು ಯೋಜನೆ ರೂಪಿಸಿದ್ದು ಆ ಯೋಜನೆಗಳ ಲಾಭ ಪಡೆದುಕೊಳ್ಳಬೇಕೆಂದರು.

ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪಟ್ಟಣದ ಅಂಬೇಡ್ಕರ್‌ ವೃತ್ತದಿಂದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದವರೆಗೆ ನೂರಾರು ಎತ್ತಿನ ಬಂಡಿಗಳು ಮತ್ತು ನೂರಾರು ಟ್ರ್ಯಾಕ್ಟರ್‌ಗಳ ರ್ಯಾಲಿ ನಡೆಯಿತು. ಕಾರ್ಯಕ್ರಮದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ರೈತರು ಪಾಲ್ಗೊಂಡಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಬೀಜ, ಗೊಬ್ಬರ ನಿಗಮ ಮಂಡಳಿ ಅಧ್ಯಕ್ಷ ವಿಜುಗೌಡ ಪಾಟೀಲ, ದಯಾಸಾಗರ ಪಾಟೀಲ, ಶಂಕರಗೌಡ ಪಾಟೀಲ, ಎಸ್‌.ಎ. ನೇದಲಗಿ, ಶೀಲವಂತ ಉಮರಾಣಿ, ಪ್ರಕಾಶ ಅಕ್ಕಲಕೋಟ, ಸಿದ್ದಲಿಂಗ ಹಂಜಗಿ, ರವಿಕಾಂತ ಬಗಲಿ, ಮಲ್ಲಿಕಾರ್ಜುನ ಕಿವುಡೆ, ಶಿವರುದ್ರ ಬಾಗಲಕೋಟ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next