Advertisement

ಕೇರಳದಲ್ಲಿ ಭಕ್ತಿ,ಭಾವ

01:18 AM Jun 09, 2019 | Team Udayavani |

ಗುರುವಾಯೂರು: “ಲೋಕಸಭಾ ಚುನಾ ವಣೆಗೂ ಮುನ್ನ ದೇಶದ ಜನರ ನಾಡಿಮಿಡಿತ ಅರಿಯು ವಲ್ಲಿ ದೊಡ್ಡ ರಾಜಕೀಯ ಪಂಡಿತರು, ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ಎಡವಿದವು. ಹಲವಾರು ಸಂಸ್ಥೆಗಳು, ತಮ್ಮ ಮೂಗಿನ ನೇರಕ್ಕೆ ಚುನಾವಣೋತ್ತರ ಸಮೀಕ್ಷೆಗಳನ್ನು ನಡೆಸಿದವು. ಆದರೆ, ದೇಶದ ಜನತೆ ತಮ್ಮ ಒಲವು ಯಾರ ಕಡೆಗೆ ಇತ್ತು ಎಂಬುದನ್ನು ತಮ್ಮ ಮಹಾ ತೀರ್ಪಿನ ಮೂಲಕ ತೋರಿಸಿದರು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಕೇರಳದ ಗುರುವಾಯೂರಿಗೆ ಶನಿವಾರ ಬೆಳಗ್ಗೆ ಭೇಟಿ ನೀಡಿದ್ದ ಅವರು, ಮೊದಲು ಅಲ್ಲಿನ ಪ್ರಸಿದ್ಧ ಶ್ರೀಕೃಷ್ಣನ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅನಂತರ ಕೇರಳದ ಬಿಜೆಪಿ ಘಟಕ ಆಯೋಜಿಸಿದ್ದ “ಅಭಿನಂದನಾ ಸಭೆ’ಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ದೊಡ್ಡ ಬಹುಮತ ನೀಡುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಿದ ದೇಶದ ಜನತೆಗೆ ಧನ್ಯವಾದ ಹೇಳಿದರು.

ಕೇರಳ ಮತದಾರರಿಗೂ ತಮ್ಮದೇ ಧಾಟಿಯಲ್ಲಿ ಭಾವುಕತೆಯ ಧನ್ಯವಾದ ಅರ್ಪಿಸಿದ ಅವರು, “”ಮಹಾ ಚುನಾವಣೆಯೆಂದರೆ, ಪ್ರಜಾಪ್ರಭುತ್ವದ ಹಬ್ಬ. ಈ ರಾಜ್ಯದಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲು ಸಾಧ್ಯವಾಗಿಲ್ಲ. ನಿಜ. ಆದರೆ, ಕೇರಳಕ್ಕಾಗಿ ಕೆಲಸ ಮಾಡುವಲ್ಲಿ ಬಿಜೆಪಿ ಎಂದಿಗೂ ಹಿಂದೆ ಬೀಳುವುದಿಲ್ಲ. ನಮ್ಮ ಪಕ್ಷವು ಇಲ್ಲಿನ ಜನರೊಂದಿಗೆ ಉತ್ತಮ ಬಾಂಧವ್ಯ ಬೆಸೆಯಲಿದೆ” ಎಂದರು. ಜತೆಗೆ, ತಮಗೆ ತಮ್ಮ ಸ್ವಕ್ಷೇತ್ರ ವಾರಾಣಸಿ ಯಷ್ಟೇ ಕೇರಳವೂ ಆಪ್ತ ಎನ್ನುವ ಮೂಲಕ ಸಭಿಕರ ಚಪ್ಪಾಳೆಗೆ ಪಾತ್ರರಾದರು.

“ನಿಪಾ’ ಅಭಯ: ಕೇರಳದಲ್ಲಿ ಮತ್ತೆ ಆತಂಕ ಸೃಷ್ಟಿಸಿರುವ ನಿಪಾ ವೈರಸ್‌ ಕುರಿತೂ ಪ್ರಸ್ತಾಪಿಸಿದ ಅವರು, ಆತಂಕ ದೂರಾಗಿಸುವಲ್ಲಿ ಕೇಂದ್ರ ಸರಕಾರ, ಕೇರಳದ ಜತೆಗೆ ಹೆಗಲು ಕೊಟ್ಟು ಕೆಲಸ ಮಾಡಲಿದೆ ಎಂದರು. ಕೇರಳ ಸರಕಾರವು, ಕೇಂದ್ರದ ಆಯುಷ್ಮಾನ್‌ ಭಾರತದಂಥ ಯೋಜನೆಗಳನ್ನು ಜನತೆಗೆ ತಲುಪಿ ಸಬೇಕೆಂದು ಮನವಿ ಮಾಡಿದರು.

ಉಡುಪಿ ನೆನೆದ ಪಿಎಂ: ದೇಶದಲ್ಲಿರುವ ಶ್ರೀಕೃಷ್ಣನ ದಿವ್ಯ ಸಾನ್ನಿಧ್ಯಗಳಲ್ಲಿ ಪ್ರಮುಖವಾದ ಗುಜರಾತ್‌ನ ದ್ವಾರಕಾ, ಉಡುಪಿಯ ಕೃಷ್ಣಮಠಗಳನ್ನು ನೆನೆದ ಪ್ರಧಾನಿ ಮೋದಿ, ಗುರುವಾಯೂರು ಎನ್ನುವುದು ಕೃಷ್ಣನ ಮತ್ತೂಂದು ಪ್ರಮುಖ ಸಾನ್ನಿಧ್ಯವಾಗಿದೆ. ಈ ಕ್ಷೇತ್ರ ಸ್ಫೂರ್ತಿಯ ಪ್ರತೀಕ ಎಂದು ಹಾಡಿ ಹೊಗಳಿದರು.

Advertisement

ಗುರುವಾಯೂರಪ್ಪನಿಗೆ ನರೇಂದ್ರ ಮೋದಿ ತುಲಾಭಾರ ಸೇವೆ ಶನಿವಾರ ಬೆಳಗ್ಗೆ ಗುರುವಾಯೂರು ದೇಗುಲಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ ಅಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿದರು.

ನೌಕಾಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬೆಳಗ್ಗೆ 9:50ರ ಸುಮಾರಿಗೆ ಆಗಮಿಸಿದ ಅವರು, ದೇಗುಲದ ಬಳಿಯಿರುವ ಶ್ರೀವತ್ಸಂ ಅತಿಥಿ ಗೃಹಕ್ಕೆ ಆಗಮಿಸಿ, ಅಲ್ಲಿ ಶ್ರೀಕೃಷ್ಣನ ದರ್ಶನಕ್ಕಾಗಿ ತಯಾರಾಗಿ ದೇಗುಲದ ಕಡೆಗೆ ಹೆಜ್ಜೆ ಹಾಕಿದರು. ಕೇರಳದ ಸಾಂಪ್ರದಾಯಿಕ ಧೋತಿ(ಮುಂಡು) ಮತ್ತು ಬಿಳಿ ಶಲ್ಯ ತೊಟ್ಟು ಅತಿಥಿ ಗೃಹದಿಂದ ಹೊರನಡೆದ ಅವರನ್ನು ದೇಗುಲದ ಮಹಾದ್ವಾರದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.

ಪ್ರಧಾನಿ ಜತೆಗೆ, ಕೇರಳ ರಾಜ್ಯಪಾಲ ಪಿ. ಸದಾಶಿವಂ, ಕೇಂದ್ರ ಸಚಿವರಾದ ವಿ. ಮುರಳೀಧರನ್‌ ಹಾಗೂ ಕೇರಳ ದ್ವೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ಇದ್ದರು. ಅನಂತರ, ದೇಗುಲದ ಪ್ರಾಂಗಣದಲ್ಲಿ ತುಲಾಭಾರ ಸೇವೆಯಲ್ಲಿ ಪಾಲ್ಗೊಳ್ಳುವ ಮೂಲಕ, ತಮ್ಮ ತೂಕದಷ್ಟು ಕಮಲದ ಹೂಗಳನ್ನು ಸನ್ನಿಧಾನಕ್ಕೆ ಸಮರ್ಪಿಸಿದರು. ತುಲಾಭಾರದ ಪೂರ್ವ ಸಿದ್ಧತೆಗಾಗಿ ತಮಿಳುನಾಡಿನ ನಾಗರಕೊಯಿಲ್‌ನಿಂದ 22 ಸಾವಿರ ರೂ. ಮೌಲ್ಯದ ಸುಮಾರು 112 ಕೆಜಿಯಷ್ಟು ಹೂಗಳನ್ನು ತರಿಸಲಾಗಿತ್ತು.

ರಾಹುಲ್‌ಗೆ ಉತ್ತರ
“2019ರ ಲೋಕಸಭೆ ಚುನಾವಣೆಯು ಸಕಾರಾತ್ಮಕತೆಗೆ ಜನರು ಕೊಟ್ಟ ಬೆಂಬಲದ ಪ್ರತೀಕ. ಜತೆಗೆ, ಇದು ನಕಾರಾತ್ಮಕತೆ ತಿರಸ್ಕಾರವೂ ಹೌದು. ನಕಾರಾತ್ಮಕ ವಿಚಾರಗಳಿಗೆ ನಮ್ಮ ಬೆಂಬಲವಿಲ್ಲ ಎಂಬುದನ್ನು ಜನ ಈಗಾಗಲೇ ಸಾಬೀತುಪಡಿಸಿದ್ದಾರೆ.’ ಇದು, ಮೋದಿಯವರು ರಾಹುಲ್‌ ಅವರಿಗೆ ಅವರ ಹೆಸರನ್ನೆತ್ತದೆ ಕೊಟ್ಟ ಸಂದೇಶ! ವಯನಾಡ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, “ಮೋದಿಯವರಿಗೆ ಶ್ರೀಮಂತ ಸ್ನೇಹಿತರು ಇರಬಹುದು. ಅವರಲ್ಲಿ ದುಡ್ಡು – ಅಧಿಕಾರ ಇರಬಹುದು. ಆದರೆ, ಬಿಜೆಪಿ ಹರಡುವ ದ್ವೇಷ ದಳ್ಳುರಿಯ ವಿರುದ್ಧ ಹೋರಾಡಲು ಕಾಂಗ್ರೆಸ್‌ ಸದಾ ಸನ್ನದ್ಧ’ ಎಂದಿದ್ದರು. ಇದಕ್ಕೆ ಮೋದಿ ಮೇಲಿನಂತೆ ಉತ್ತರಿಸಿ ನಿರುಮ್ಮಳವಾದರು.

Advertisement

Udayavani is now on Telegram. Click here to join our channel and stay updated with the latest news.

Next