ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ರಚನೆಯಾಗಿ ಇಂದಿಗೆ (ಗುರುವಾರ ಮೇ 26) 8 ವರ್ಷ ಪೂರೈಸಲಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 2014ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಪ್ರಚಂಡ ಗೆಲುವಿನೊಂದಿಗೆ ಸರಕಾರ ರಚಿಸಿದ್ದು, ಪ್ರಧಾನಿ ಮೋದಿ ಅವರು ಸಾರ್ಕ್ ದೇಶಗಳ ಮುಖಂಡರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.
ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆಗಳನ್ನು ಇಟ್ಟಿದ್ದು, ಕೋವಿಡ್ ನಂತಹ ಮಹಾಮಾರಿ ಭಾರತ ಸೇರಿದಂತೆ ಜಗತ್ತನ್ನೇ ತಲ್ಲಣಗೊಳಿಸಿತ್ತು. ಟೀಕೆ, ಟಿಪ್ಪಣಿಯ ನಡುವೆಯೂ ಭಾರತ ಕೋವಿಡ್ ಸೋಂಕನ್ನು ಸಮರ್ಥವಾಗಿ ನಿಭಾಯಿಸಿ ಜಾಗತಿಕ ಮಟ್ಟದಲ್ಲಿ ಶ್ಲಾಘನೆಗೊಳಾಗಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎಂಟು ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಆಡಳಿತ ಸೇರಿದಂತೆ ಸ್ವಚ್ಛ ಭಾರತ, ಆಯುಷ್ಮಾನ್ ಕಾರ್ಡ್, ಜನ್ ಧನ್ ಸೇರಿದಂತೆ ಜನಪರವಾದ ಎಂಟು ಯೋಜನೆಗಳ ಸಂಕ್ತಿಪ್ತ ಮಾಹಿತಿ ಇಲ್ಲಿದೆ.
1)ಪ್ರಧಾನ್ ಮಂತ್ರಿ ಆವಾಸ್ ಯೋಜನೆ: ಪ್ರಧಾನಿ ಮೋದಿ ಸರ್ಕಾರದ ಪ್ರಮುಖ ಯೋಜನೆಯಾದ ಪ್ರತಿಯೊಬ್ಬರಿಗೂ ಮನೆ ಎಂಬ ಪರಿಕಲ್ಪನೆಯ “ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯನ್ನು 2015ರ ಜೂನ್ ನಲ್ಲಿ ಪ್ರಾರಂಭಿಸಲಾಗಿತ್ತು. ಪಿಎಂಎವೈ ಯೋಜನೆಯು ದೇಶದಲ್ಲಿನ ವಸತಿ ರಹಿತ ಜನರ ಜೀವನವನ್ನು ಉತ್ತಮಗೊಳಿಸುವ ಯೋಜನೆಯಾಗಿದೆ. ಕಡಿಮೆ ಆದಾಯ ಹೊಂದಿದ, ಮಧ್ಯಮ ವರ್ಗದ ಹಾಗೂ ಆರ್ಥಿಕವಾಗಿ ದುರ್ಬಲವಾದ ಸುಮಾರು ಎರಡು ಕೋಟಿ ಜನರಿಗೆ ಮನೆ ನಿರ್ಮಿಸಿ ಕೊಡುವ ಗುರಿ ಈ ಯೋಜನೆಯದ್ದಾಗಿತ್ತು.
Related Articles
2)ಉಜ್ವಲಾ ಯೋಜನೆ: ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆ ಎಂಬುದು ನರೇಂದ್ರ ಮೋದಿ ಸರ್ಕಾರದ ಮಹತ್ವದ ಹೆಜ್ಜೆಯಾಗಿದೆ. ಮಹಿಳೆಯರ ಮತ್ತು ಮಕ್ಕಳ ಆರೋಗ್ಯವನ್ನು ಕಾಪಾಡಲು ಶುದ್ಧ ಅಡುಗೆ ಇಂಧನವನ್ನು ಒದಗಿಸುವ ಯೋಜನೆಯಾಗಿದೆ. ಅಷ್ಟೇ ಅಲ್ಲ ಯಾವುದೇ ಭದ್ರತಾ ಠೇವಣಿ ಇಲ್ಲದೆ ಎಲ್ ಪಿಜಿ ಪಡೆಯುವ ವ್ಯವಸ್ಥೆ ಇದಾಗಿದೆ. 2016ರ ಮೇ 1ರಂದು ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಸುಮಾರು 5 ಕೋಟಿ ಕುಟುಂಬಗಳಿಗೆ ಎಲ್ ಪಿಜಿ ಸಂಪರ್ಕ ನೀಡಲಾಗುತ್ತದೆ.
3)ಜನ-ಧನ್ ಯೋಜನೆ: 2014ರ ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆಯನ್ನು ಘೋಷಿಸಿದ್ದರು. ಆಗಸ್ಟ್ 28ರಂದು ಯೋಜನೆಯನ್ನು ಪ್ರಾರಂಭಿಸಿದ್ದು, ಸ್ಕಾಲರ್ ಶಿಪ್, ಸಬ್ಸಿಡಿ, ಪಿಂಚಣಿ ಹಾಗೂ ಕೋವಿಡ್ ಪರಿಹಾರ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವ ಯೋಜನೆ ಇದಾಗಿದೆ. ಈ ಯೋಜನೆಯಡಿ ಒಟ್ಟು 44 ಕೋಟಿಗೂ ಹೆಚ್ಚು ಖಾತೆಗಳಿದ್ದು, ಈವರೆಗೆ 1,50,939 ಕೋಟಿ ರೂಪಾಯಿ ಹಣದ ವಹಿವಾಟು ನಡೆದಿದೆ.
4)ಕಿಸಾನ್ ಸಮ್ಮಾನ್ ನಿಧಿ: ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಶೇ.100ರಷ್ಟು ಧನಸಹಾಯ ನೀಡುವ ಭಾರತ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ವರ್ಷ ಅರ್ಹ ಕೃಷಿಕರಿಗೆ ಆರು ಸಾವಿರ ರೂ. ಗೌರವ ಧನ ನೀಡಲಾಗುತ್ತಿದೆ. ಈ ಹಣವು ತಲಾ 2 ಸಾವಿರ ರೂ.ಗಳಂತೆ 3 ಕಂತುಗಳಲ್ಲಿ ಕೃಷಿಕರ ಖಾತೆಗೆ ಜಮಾ ಆಗುತ್ತದೆ. ಕೇಂದ್ರ ಸರ್ಕಾರ ನೀಡುವ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ.
5) ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ: 2020ರ ಮಾರ್ಚ್ ನಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಘೋಷಿಸಲಾಗಿತ್ತು. ಇದು ಕೋವಿಡ್ ಸೋಂಕಿಗೆ ತುತ್ತಾಗುವ ಬಡವರಿಗೆ ಧನಸಹಾಯ ನೀಡುವ ಯೋಜನೆಯಾಗಿದ್ದು, ಸುಮಾರು 1.70 ಲಕ್ಷ ಕೋಟಿ ರೂಪಾಯಿಯ ಯೋಜನೆಯಾಗಿದೆ. ಈ ಯೋಜನೆಯಿಂದ ಆಹಾರ ಮತ್ತ ಹಣ ಕೈಯಲ್ಲಿದ್ದರೆ ಬಡತನದಿಂದ ಹೊರಬರಲು ಹಾಗೂ ಯಾವುದೇ ಅಗತ್ಯ ವಸ್ತುಗಳನ್ನು ಖರೀದಿಸಲು ತೊಂದರೆ ಅನುಭವಿಸಬೇಕಾಗಿಲ್ಲ.
6)ಜಲ ಜೀವನ್ ಮಿಷನ್: ಜಲ ಜೀವನ್ ಮಿಷನ್ ಯೋಜನೆಯು 2024ರ ವೇಳೆಗೆ ಗ್ರಾಮೀಣ ಭಾರತದ ಎಲ್ಲಾ ಮನೆಗಳಿಗೆ ವೈಯಕ್ತಿಕವಾಗಿ ಕುಡಿಯುವ ನೀರನ್ನು ಒದಗಿಸುತ್ತದೆ. ಈ ಯೋಜನೆಯು ಮೂಲಭೂತ ಅವಶ್ಯಕತೆಗಳನ್ನು ಕಡ್ಡಾಯವಾಗಿ ಕಾರ್ಯಗತಗೊಳಿಸಲಿದೆ. ಜಲ ಜೀವನ್ ಮಿಷನ್ ಅನ್ನು ಸಮುದಾಯವನ್ನು ಸಂಪರ್ಕಿಸುವ ವಿಧಾನವನ್ನು ಆಧರಿಸಿದ್ದು, ಇದು ನೀರಿನ ಕುರಿತ ಪೂರಕ ಮಾಹಿತಿ ಮತ್ತು ಶಿಕ್ಷಣ, ಸಂವಹನವನ್ನು ಒಳಗೊಂಡಿರುತ್ತದೆ.
7)ಆಯುಷ್ಮಾನ್ ಭಾರತ್ ಯೋಜನೆ: 2017ರಲ್ಲಿ ರಾಷ್ಟ್ರೀಯ ಆರೋಗ್ಯ ನೀತಿಯಡಿ ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ಮಾನ್ ಭಾರತ್ ಅಥವಾ ಆರೋಗ್ಯಕರ ಭಾರತ ಎಂಬ ವಿಶಿಷ್ಟ ಯೋಜನೆಯನ್ನು ಜಾರಿಗೊಳಿಸಿದ್ದರು. ಇದು ಸರ್ಕಾರಿ ಪ್ರಾಯೋಜಿತ ಆರೋಗ್ಯ ವಿಮಾ ಯೋಜನೆ. ಈ ಯೋಜನೆಯಡಿ ಪ್ರತಿ ಬಡ ಕುಟುಂಬಕ್ಕೆ 5 ಲಕ್ಷ ರೂಪಾಯಿ ವಿಮಾ ಭದ್ರತೆ ಲಭ್ಯವಾಗಲಿದ್ದು, ಈಗಾಗಲೇ ದೇಶದಲ್ಲಿ ಸುಮಾರು 10 ಕೋಟಿಗೂ ಹೆಚ್ಚು ಬಡವರು ಯೋಜನೆಯ ಲಾಭ ಪಡೆದಿದ್ದಾರೆ.
ಆಯುಷ್ಮಾನ್ ಯೋಜನೆಯ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಿಸುತ್ತದೆ. ಆಯುಷ್ಮಾನ್ ಭಾರತ್, ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಹಂತದಲ್ಲಿ ಆರೋಗ್ಯವನ್ನು ಸಮಗ್ರವಾಗಿ ಪರಿಹರಿಸುವ ಗುರಿಯನ್ನು ಹೊಂದಿದೆ.
8)ಸ್ವಚ್ಛ ಭಾರತ್ ಮಿಷನ್: 2014ರ ಅಕ್ಟೋಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮಿಷನ್ ಯೋಜನೆಗೆ ಚಾಲನೆ ನೀಡಿದ್ದರು. ದೇಶಾದ್ಯಂತ ತ್ಯಾಜ್ಯ ನಿರ್ಮೂಲನೆ, ಶೌಚಾಲಯ ನಿರ್ಮಾಣದ ಗುರಿಯನ್ನು ಈ ಯೋಜನೆ ಹೊಂದಿದೆ. ಸ್ವಚ್ಛ ಭಾರತ್ ಅಭಿಯಾನದಡಿ ದೇಶದ ಎಲ್ಲಾ ಗ್ರಾಮಗಳು, ಗ್ರಾಮ ಪಂಚಾಯ್ತಿಗಳು, ಜಿಲ್ಲೆಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 2019ರ ಅಕ್ಟೋಬರ್ 2ರೊಳಗೆ ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿತ್ತು.