ಹುಬ್ಬಳ್ಳಿ: ರಾಜ್ಯದಲ್ಲಿ ಜನ ಪ್ರವಾಹದಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಪ್ರಧಾನಿ ನೆರೆಹಾವಳಿ ಪ್ರದೇಶಕ್ಕೆ ಭೇಟಿ ಕೊಟ್ಟು ನಿರಾಶ್ರಿತರ ಸಮಸ್ಯೆ ಆಲಿಸಿ, ಪರಿಹಾರ ನೀಡಿ ಎಂದು ಕೇಳುವುದು ತಪ್ಪಾ? ಇದನ್ನು ಪ್ರಶ್ನಿಸಿದವರ ಮೇಲೆ ದೂರು ದಾಖಲಿಸುವುದು ಯಾವ ನ್ಯಾಯವೆಂದು ಕಾಂಗ್ರೆಸ್ ಹು-ಧಾ ಮಹಾನಗರ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2009ರಲ್ಲಿ ಆಗಿದ್ದ ನೆರೆ ಹಾವಳಿಗಿಂತ 8-10 ಪಟ್ಟು ಹೆಚ್ಚು ಈ ವರ್ಷ ಪ್ರವಾಹ ಬಂದಿದೆ. ಜನರು ಮನೆ-ಮಠ, ಜಮೀನು ಕಳೆದುಕೊಂಡು ನಿರಾಶ್ರಿತರಾಗಿ ತೀವ್ರ ಸಮಸ್ಯೆಗೊಳಗಾಗಿದ್ದಾರೆ. ಆದರೆ ಕೇಂದ್ರ ಸರಕಾರ ಇದುವರೆಗೂ ಪರಿಹಾರಧನ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಹಾನಿಯಾದರು, ಜನರು ತೊಂದರೆ ಅನುಭವಿಸುತ್ತಿದ್ದರು ಪ್ರಧಾನಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಈಗ ಚಂದ್ರಯಾನ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಅವರ ಈ ಧೋರಣೆ ಬಗ್ಗೆ ಪ್ರಶ್ನಿಸುವುದು ತಪ್ಪೇ? ಅವರ ತಪ್ಪುಗಳನ್ನು ವಿರೋಧಿಸುವ ಹಾಗೂ ಧ್ವನಿ ಎತ್ತಿದವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಆ ಮೂಲಕ ಬಿಜೆಪಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನಾದರು ಅವರು ಪ್ರಜಾಪ್ರಭುತ್ವ ಉಳಿಸಲಿ ಎಂದರು.
ಇನ್ಮುಂದೆ ಎಲ್ಲೆಡೆ ಫ್ಲೆಕ್ಸ್ ಅಳವಡಿಕೆ: ಯುವ ಕಾಂಗ್ರೆಸ್ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿಯ ಕುರಿತು ವ್ಯಂಗ್ಯವಾದ ಫ್ಲೆಕ್ಸ್‌ನ್ನು ಕಾನೂನುಬದ್ಧವಾಗಿಯೇ ಅಳವಡಿಸಿದ್ದರು. ಆದರೆ ಪಾಲಿಕೆ ಅಧಿಕಾರಿಗಳು ಬಿಜೆಪಿಯವರಿಗೆ ಹೆದರಿ ಪಕ್ಷದ ಕಾರ್ಯಕರ್ತರಿಬ್ಬರ ಮೇಲೆ ದೂರು ದಾಖಲಿಸಿದ್ದಾರೆ. ನಗರದಲ್ಲಿ ಸಾಕಷ್ಟು ಅನಧಿಕೃತ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಅವರ ಮೇಲೆಯು ಅಧಿಕಾರಿಗಳು ದೂರು ದಾಖಲಿಸುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿಯವರ ಈ ಧೋರಣೆ ಕುರಿತ ಫ್ಲೆಕ್ಸ್‌ಗಳನ್ನು ಪ್ರತಿ ತಾಲೂಕು ಮಟ್ಟದಲ್ಲಿ ಅಳವಡಿಸುವಂತೆ ಬ್ಲಾಕ್ ಅಧ್ಯಕ್ಷರಿಗೆ ಹಾಗೂ ಜಿಲ್ಲಾಧ್ಯಕ್ಷರು ತಮ್ಮ ಜಿಲ್ಲೆಗಳಲ್ಲಿ ಕಟೌಟ್ ಹಾಕಿ ಜನರಿಗೆ ತಿಳಿವಳಿಕೆ ನೀಡಲು ಸೂಚಿಸಲಾಗಿದೆ. ಆ ಮೂಲಕ ಬಿಜೆಪಿಯವರಿಗೆ ಕಣ್ಣು ತೆರೆಸುವ ಕೆಲಸ ಮಾಡಲಾಗುವುದು. ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣ ಹಿಂಪಡೆಯಬೇಕು. ಇಲ್ಲವಾದರೆ ನಾಳೆಯಿಂದಲೇ ಇಂತಹುದೆ ಫ್ಲೆಕ್ಸ್‌ಗಳನ್ನು ಹಾಕಿಸಲಾಗುವುದು. ಆಗ ನನ್ನ ಮೇಲೂ ದೂರು ದಾಖಲಿಸಲಿ. ಎಷ್ಟು ಜನರ ಮೇಲೆ ಇದೇ ರೀತಿ ಪ್ರಕರಣ ದಾಖಲಿಸುತ್ತಾರೆ ನೋಡೋಣ. ಜನರ ಸಮಸ್ಯೆಗಳ ಬಗೆಗಿನ ಹೋರಾಟ ಕೈ ಬಿಡುವುದಿಲ್ಲ ಎಂದರು.
ರಜತ್ ಉಳ್ಳಾಗಡ್ಡಿಮಠ, ಶ್ವಾಜಮಾನ ಮುಜಾಹಿದ್, ಬಸವರಾಜ ಹೊಸಮನಿ, ರವಿ ರಾಜೂರ, ವಿನಯ ಜಕನೂರ ಇನ್ನಿತರರಿದ್ದರು.