Advertisement
ಬ್ರಿಟಿಶರು ತಮ್ಮ ವಶದಲ್ಲಿದ್ದ ಭಾರತವನ್ನು ಒಡೆದು ಹೋದರು ಎಂಬುದು ಚರಿತ್ರೆಯ ಕರಾಳ ಅಧ್ಯಾಯ. ಆದರೆ ಇದೇ ಬ್ರಿಟಿಶರು ಒಡೆದುಕೊಂಡೇ ಇದ್ದ ಭಾರತದ ಭೂಪಟವನ್ನು ಒಗ್ಗೂಡಿಸಿದ ಕೀರ್ತಿಗೂ ಪಾತ್ರರಾಗುತ್ತಾರೆ ಎಂಬುದನ್ನು ಸಂಭ್ರಮದಿಂದ ಹೇಳಿದರೆ ಅದು ಸೂಕ್ತವೆ? ಕಾಲದ ಸತ್ಯವನ್ನು ಆಧಾರವಾಗಿಸಿದರೆ ಎಂದೂ ಬ್ರಿಟಿಶರನ್ನು ಭಾರತೀಯರು ಕ್ಷಮಿಸಲು ಸಾಧ್ಯವಿಲ್ಲ.
Related Articles
Advertisement
ದುರ್ಬಲರು ನಾಯಕರಾಗಿರದಿದ್ದರೆ, ಆಡಳಿತ ಜವಾಬ್ದಾರಿಯನ್ನು ಸೂಕ್ತವಾಗಿ ನಿರ್ವಹಿಸಿದ್ದರೆ ಧಾರ್ಮಿಕ ಆಧಾರದ ಮೇಲೆ ವಿಭಜನೆಗೊಳ್ಳುತ್ತಿರುವ ಭಾರತ ಹಾಗೂ ಪಾಕಿಸ್ತಾನಗಳಾಗಿ ರೂಪುಗೊಳ್ಳುತ್ತ ಬ್ರಿಟಿಶ್‌ರಾಜ್ ಎಂಬ ಸಂಕೋಲೆಯಲ್ಲಿ ಬಂಧಿತವಾಗಿದ್ದ ಭರತಖಂಡ ಹಿಂಸಾಕಾಂಡವನ್ನು ನೋಡಬೇಕಾಗಿ ಬರುತ್ತಿತ್ತೆ? ಮಾನವೀಯತೆ ನಾಚಲೇ ಬೇಕಾದ ಸಿಥತಿ “ವಸುಧೈವ ಕುಟುಂಬಕಂ’ ಎಂಬ ಐಕ್ಯತೆಯ ಮಂತ್ರವನ್ನು ಬೋಧಿಸಿದ ಭರತಭೂಮಿ ದೇಶ ವಿಭಜನೆಯ ಹೆಸರಿನಲ್ಲಿ ನೋಡಬೇಕಾದ ಸ್ಥಿತಿ ಬಂದದ್ದು ಒಂದು ವ್ಯಂಗ್ಯ. ಸದ್ಭಾವನೆ, ತಾಳ್ಮೆ, ವ್ಯವಧಾನ ಇತ್ಯಾದಿಗಳು ಎಂದೂ ಮೂಡಲಾರದು ಎಂಬ ಕಾರ್ಕೋಟಕ (ವಿಷದ ಹೆಡೆ ಹೊತ್ತ) ಸರ್ಪದ ಅಸ್ತಿತ್ವ ಹಿಂದೂ ಹಾಗೂ ಮುಸ್ಲಿಂ ಸಮೂಹದ ನಡುವೆ ಇಂದೂ ಉಭಯ ದೇಶಗಳಲ್ಲೂ ಹರಳುಗಟ್ಟಿಕೊಂಡೇ ಇರುವುದು ನೋವಿನ ಸಂಗತಿ. ಗೀರಿ ರಕ್ತ ತಂದೇ ತೀರುವ ಈ ಹರಳನ್ನು ದೂರಕ್ಕೆ ಎತ್ತಿ ಎಸೆಯುವುದು ಹೇಗೆ? ಈ ಪ್ರಶ್ನೆಯನ್ನು ತಮಗೆ ಕಂಡ ರೀತಿಯಲ್ಲಿ ವಿಶ್ಲೇಷಿಸುತ್ತ ಹೋಗುತ್ತಿರುವವರನ್ನು ಇಂದೂ ಕಾಣುತ್ತಿದ್ದೇವೆ.
ದೇಶ ವಿಭಜನೆಯ ನಂತರದಲ್ಲಿ ಇದೀಗ 72 ವರ್ಷಗಳೇ ಕಳೆದುಹೋದವು. ಬದಲಾವಣೆಯ ದಾರಿಯನ್ನು ವಿಧವಿಧವಾಗಿ ಆಯ್ಕೆಯಾದ ಸರಕಾರಗಳು ಯೋಜನೆಗಳನ್ನು ರೂಪಿಸುತ್ತಲೇ ಬಂದಿವೆ. ದಾರಿದ್ರé ನೀಗಿದೆ ಎಂದು ಅನ್ನಲಾಗದ ವರ್ತಮಾನವನ್ನು ಸೃಷ್ಟಿಸಲು ಈ 72 ವರ್ಷಗಳು ಏಕೆ ವಿಫಲವಾದವು? ಧರ್ಮಗಳನ್ನು ವಿಭಜಿಸಿ ಚುನಾವಣೆಯಲ್ಲಿ ಮತ ಪಡೆಯುತ್ತಿದ್ದ ಅಸಂಗತ ವಿಚಾರದ ಮಿಸುಕಾಟವನ್ನೂ ಮೀರಿ ಜಾತಿಗಳನ್ನೂ ಒಡೆದು ಚುನಾವಣೆಯಲ್ಲಿ ಮತ ಪಡೆಯುವ ಸ್ಥಿತಿಗತಿಯನ್ನೂ ನೋಡುತ್ತಲೇ ಬಂದೆವು.
1947ರಿಂದ ಭಾರತ ದೇಶದ ಆಡಳಿತ ನೆಹರೂ ಯುಗದೊಂದಿಗೆ ಹೆಜ್ಜೆ ಇರಿಸಿದ ಬಗೆ ಹೇಗಿತ್ತು? “ನಹಿ ಜ್ಞಾನೇನ ಸದೃಶಂ’ ಎಂಬ ವಿಚಾರ ಆಗಿನಿಂದಲೂ ಆಡಳಿತದಲ್ಲಿದ್ದ ಮಂದಿಯ, ಆಡಳಿತ ನಡೆಸುತ್ತಿದ್ದ ಮಂದಿಯ ಸುತ್ತ ಇದ್ದ ಬುದ್ಧಿಜೀವಿಗಳ, ಸಾಂಸ್ಕೃತಿಕ ರಂಗದ ಶ್ರೇಷ್ಠರೆಲ್ಲರ ಧೋರಣೆ ಆಗೇ ಇತ್ತು. ಆದರೆ ಜ್ಞಾನವೆಂಬುದು ಇಂಗ್ಲಿಷ್ ಆಚ್ಛಾದಿತ ಸಂಕೋಲೆಯೊಂದಿಗೇ ವ್ಯಕ್ತಗೊಳ್ಳುತ್ತಿದ್ದ ಸ್ಥಿತಿ ಇತ್ತು. ಇಂಗ್ಲಿಷರನ್ನು ಅಂಧಾನುಕರಣೆ ಮಾಡುವ ಕ್ರಮ, ಇಂಗ್ಲಿಷ್ ತಿಳಿದರೆ ಪಂಡಿತ ಎಂಬ ಅಘೋಷಿತ ಆದರೆ ಅನಿವಾರ್ಯ ಸ್ಥಿತಿ ದಟ್ಟವಾಗಿ ನಿಂತು ದೈತ್ಯಾಕಾರ ತಳೆದು ನಿಂತಿತು. ಇಂಗ್ಲಿಷ್ ತಿಳಿಯದವರು ಜ್ಞಾನಶೂನ್ಯರು ಎಂಬ ಸ್ಥಿತಿ (ಈಗಲೂ ಇದು ದೂರವಾಗಿಲ್ಲ)ಗೆ ನೆಹರೂ ಅವರಿಂದ ಶುರುವಾದ ಆಡಳಿತ ಕಾಲದಿಂದಲೂ ದೈತ್ಯಾಕಾರ ತಳೆದುನಿಂತ ಸ್ಥಿತಿ ಯಾಕೆ ಆವರಿಸಿತು? ಆಡಳಿತದಲ್ಲೂ ಇಂಗ್ಲಿಷ್ ಅಧಿಕೃತ ಭಾಷೆಯಾಗಿ ನಿಂತಿತು. ಆದರೆ ಭಾರತೀಯರ ಯೋಚನೆಗಳು ಇಂಗ್ಲಿಷಿನಲ್ಲಿ ಇರುತ್ತಿರಲಿಲ್ಲ.
ಒಂದು ರೀತಿಯ ಆಧುನಿಕತೆ, ಇಂಗ್ಲಿಷ್ ತಿಳಿದರೇ ಪಾಂಡಿತ್ಯ ಎಂಬ ಎಡಬಿಡಂಗಿ ಗ್ರಹಿಕೆ, ಭಾರತೀಯರು ಪ್ರತಿ ರಂಗದಲ್ಲೂ ತಮಗೆ ತಿಳಿಯದ ಇಂಗ್ಲಿಷ್ ಭಾಷೆಯ ಉರುಳನ್ನು ಕೊರಳಿಗೆ ಕಟ್ಟಿಕೊಂಡೇ ತಿರುಗಬೇಕಾದ ಅಸಹಾಯಕ ಸ್ಥಿತಿಯಿಂದ ಕಾಲರಾಯ ಈಗ (ನರೇಂದ್ರ ಮೋದಿಯವರ ಯುಗವನ್ನು ಕಾಲರಾಯ ಭಾರತದಲ್ಲಿ ಸೃಷ್ಟಿಸಿರುವ ತನಕ ನಡೆದ ಚರ್ಚೆ, ಉಪನ್ಯಾಸ, ಭಾಷಣ, ವಿಕಸನ, ನಿಶ್ಚಲತೆ, ದಾರಿದ್ರé, ಒಂದು ಹಂತದ ಬೆಳವಣಿಗೆ, ಆದರೆ ಮೂಲಭೂತ ಸೌಕರ್ಯಗಳು ಕನಸೇ ಆಗಿಹೋದ ದಾರುಣ ಸ್ಥಿತಿಗತಿಗಳನ್ನು ನೆನೆಯದಿರಲಾಗದು. ಥಟ್ಟಂತ ಮರೆಯಲು ಸಾಧ್ಯವಿಲ್ಲ) ಹೊಸದೇ ದಿವ್ಯಕ್ಕೆ ತಂದು ನಿಲ್ಲಿಸಬಹುದೆ?
ಮೋದಿ ಕೋಟಿ ಕೋಟಿ ಜನರನ್ನು ಸಂವೇದಿಸುತ್ತಿರುವ ವಿಚಾರ ನಾವು 2014ರಿಂದಲೂ ಗಮನಿಸುತ್ತಲೇ ಬಂದಿದ್ದೇವೆ. ಎಲ್ಲಿಯ ತನಕ ಮೋದಿಯವರು ಪ್ರಶ್ನಾತೀತ ನಾಯಕನಾಗಿ ರೂಪುಗೊಂಡಿದ್ದಾರೆ ಎಂದರೆ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದಿಂದ ಬಂದ ಬಹುದೊಡ್ಡ ಕಾಂಗ್ರೆಸ್ ನಾಯಕ ರೋಷನ್ ಬೇಗ್ ಖುದ್ದಾಗಿ “”ಮೋದಿ ಇಡೀ ಭಾರತವನ್ನು ಏಕಪಕ್ಷೀಯವಾಗಿ ತನ್ನ ನಾಯಕತ್ವದಿಂದ ಸಂವೇದಿಸಬಲ್ಲ ನಾಯಕ” ಎಂದು ಟ್ವೀಟ್ ಮಾಡುವ ತನಕ ಎಂದರೆ ಆ ಆಳ ತಿಳಿಯಬಹುದು. ನೆಹರೂ ಹೊಂದಿದ್ದ ಇಂಗ್ಲಿಷ್ ಪ್ರಣೀತ Sophisticationಯುಗದ ಸಮಾಪ್ತಿಯಾಗಿ ನರೇಂದ್ರ ಮೋದಿಯವರ ಅಪ್ಪಟ ಭಾರತೀಯ ಶೈಲಿಯ ಎಂದೆನ್ನಲಾದ ಚೌಕಟ್ಟಿಗೆ ಸ್ಥಾಯಿಯಾದ ವರ್ತಮಾನ ಭಾರತದ ರಾಜಕೀಯ ಕ್ಷಿತಿಜಕ್ಕೆ ಪಸರಿಸಿ ನಿಂತುಕೊಂಡಿದೆ.
ನೆಹರೂ ಸಂದರ್ಭದಲ್ಲಿ ಮಾಧ್ಯಮಗಳು ಇದ್ದ ಬಗೆಯೇ ಬೇರೆ ಇತ್ತು. ಈಗ ಪರಿಸ್ಥಿತಿ ಬೇರೆ. ಪ್ರತಿ ಮಾತು, ಪ್ರತಿ ದಿರುಸು, ಪ್ರತಿಯೊಂದು ಚಲನವಲನ, ಕಾಶಿಯಲ್ಲಿ ನಡೆಯುವ ಪ್ರಧಾನಿ ನಡೆಸುವ ಗಂಗಾರತಿ ಅಭಿಷೇಕ, ಫಲ ಪಂಚಾಮೃತ ಪೂಜೆಗಳೆಲ್ಲ ಮಾಧ್ಯಮಗಳ ಮೂಲಕ ನಮ್ಮ ಕಣ್ಣೆದುರಿಗೇ ವರ್ತಮಾನದ ಸ್ವರೂಪಗಳೆಲ್ಲ ಪ್ರತ್ಯಕ್ಷವಾಗುತ್ತವೆ. ನೆಹರೂ ಕಾಲ ಇಂಗ್ಲಿಷೇ ಆಧುನಿಕತೆಯಾದರೆ, ಈ ಕಾಲ ಸನಾತನ ಭಾರತವನ್ನು ಆಧುನಿಕವಾದ ತಂತ್ರಗಳ ಮುಖೇನ ತೋರಿಸುವ ಹಂತಕ್ಕೆ ಬಂದು ತಲುಪಿದೆ. ಪ್ರಧಾನಿಯವರ ಹಣೆಯ ಮೇಲಿನ ಗಂಧ, ಇನ್ಯಾರೋ ಸುಪ್ರಸಿದ್ಧರ ಕೈಮಣಿಕಟ್ಟಿಗೆ ಕಟ್ಟಿಕೊಂಡ ಸಿದ್ಧಿ ಸೂತ್ರ, ರಾಜಕಾರಣಿಗ ಕೈಯಲ್ಲಿರುವ ಲಿಂಬು ಫಲಗಳೆಲ್ಲ ಯಥಾವತ್ತಾಗಿ ಮನೆಯಲ್ಲೇ ಕುಳಿತು ನೋಡುವ ಕಾಲ.
ಈಗ ನರೇಂದ್ರ ಮೋದಿ ನೆಹರು, ಇಂದಿರಾ ಇವರೆಲ್ಲ ಕಂಡಿದ್ದ ಜನಪ್ರಿಯತೆಯನ್ನು ನೆನೆಪಿಸುತ್ತಿರುವ ಕಾಲ. “”ಐದು ವರ್ಷಗಳ ಆಡಳಿತ ಹೇಗೋ ನಡೆಸಿದರು. ಆದರೆ, ಮೋದಿ ಈ ಚುನಾವಣೆಯ ನಂತರ 543 ಎಂಪಿಗಳಲ್ಲಿ ಇವರೂ ಒಬ್ಬ ಎಂಪಿ ಅಷ್ಟೇ” ಎಂದು ಸಾವಿರಾರು ಮಂದಿ ನಂಬಿದ್ದ ವಿಚಾರ ಬುಡಮೇಲಾಗಿ ಮೋದಿ (ಯಾರೂ ರಾಜಕೀಯ ವಿಶ್ಲೇಷಕರು ಊಹಿಸಿರದ ಸೈಂಧವ ಶಕ್ತಿಯಿಂದ ಭಾರತದ ರಾಜಕೀಯದ ದಿಕ್ಕನ್ನು ಹೇಗೆ ಬದಲಿಸಲು) ಹೇಗೆ ಬೆಳೆದು ನಿಂತರು? ಭಾರತೀಯ ಸೈನಿಕರನ್ನು ನಿಷ್ಕರುಣೆಯಿಂದ ಸಾಯಿಸಿದ, ಭಯೋತ್ಪಾದಕರು ಪುಲ್ವಾಮಾದಲ್ಲಿ ನಡೆಸಿದ ರಕ್ತದೋಕುಳಿ ನರೇಂದ್ರ ಮೋದಿಯವರ ನೆರವಿಗೆ ಬಂತೆ? ಆದರೆ ಸಮೀಕ್ಷೆಯ ಪ್ರಕಾರ ಒಟ್ಟೂ 7 ಹಂತಗಳ ಚುನಾವಣೆಯಲ್ಲಿ ಮೊದಲ 2 ಹಂತದ ಲೋಕಸಭಾ ಚುನಾವಣೆ ದೇಶದಲ್ಲಿ ಮುಗಿದಾದ ಮೇಲೂ ಮೋದಿ ಜನಪ್ರಿಯತೆ ಅಂಕಪಟ್ಟಿಯಲ್ಲಿ ನಾಟಕೀಯ ಬದಲಾವಣೆ ಇಲ್ಲ ಎಂದೇ ಸಮೀಕ್ಷೆಗಳು ಹೇಳಿದವು.
ಹಾಗಾದರೆ ಯಾವ ದಿವ್ಯಕ್ಕೆ ಮೋದಿಯವರ ಯಾಚನೆ ಈವರೆವಿಗೂ ಭಾಜಪ ಕಂಡರಿಯದ ಯಶಸ್ಸಿನ ಕ್ರಾಂತಿಗೆ ಸಿದ್ಧಿಸೂತ್ರವನ್ನು ಒದಗಿಸಿತು? ಕಾಶೀ ವಿಶ್ವೇಶ್ವರನಿಗೆ ನಡೆಸಿದ ಪೂಜೆ, ಪ್ರಾರ್ಥನೆ, ಅಹವಾಲುಗಳು ಅನುಗ್ರಹವಾಗಿ ಪರಿವರ್ತನೆಗೊಂಡವೆ? ಗಂಗಾರತಿ, ಗಂಗಾಪೂಜೆ ಯಶಸ್ಸಿಗಾಗಿ ಮೋದಿಯ ಕೈ ಬಲಪಡಿಸಿದವೆ?
ಎಂತೆಂಥ ಮುತ್ಸದ್ದಿಗಳನ್ನು ಹೊಂದಿದ್ದ ವಿಪಕ್ಷಗಳು ಅಥವಾ ಜಾತಿ ರಾಜಕೀಯ ಲೆಕ್ಕಾಚಾರದಿಂದಾಗಿ ಗೆದ್ದು ಬೀಗಲೇಬೇಕಿದ್ದ ಘಟಾನುಘಟಿಗಳು ಕಾಶಿಯಲ್ಲಿ ನಾಮಪತ್ರ ಸಲ್ಲಿಸಿ ಬಂದಾದ ಮೇಲಿನ ಮೋದಿಯನ್ನು ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ.ಆರ್‌ಎಸ್‌ಎಸ್‌ಗೂ ಅಪಧ್ಯ ಎಂದಂದುಕೊಂಡ ಮೋದಿ ಪುಟಿದೆದ್ದರು. ಮೋದಿ ಜನರನ್ನು ಮಾತಿನ ಮೂಲಕ ತಲುಪುತ್ತಾರೆ. ತಾನು ಜನಪ್ರತಿನಿಧಿಯಲ್ಲ, ನಾನೂ ನಿಮ್ಮಂತೆ ಕಾರ್ಯಕರ್ತ ಎನ್ನುತ್ತಾರೆ. ಚೌಕಿದಾರ ಎಂದು ಅನ್ನುತ್ತ ಕಾವಲು ಕಾಯುವವನು ಎಂದು ಜನರ ಕೈ ಹಿಡಿದು ಇದನ್ನು ನಿನ್ನ ಬಳಿ ಹೇಳುತ್ತಿದ್ದೇನೆ ಎಂದು ಪ್ರತಿಯೊಬ್ಬನಿಗೂ ಅನಿಸುವ ಹಾಗೆ ಮಾತನಾಡುತ್ತಾರೆ. ಮಾತು ಅವರಿಗೆ ವರವಾಗಿದೆ. ಎದುರಾಳಿಗಳನ್ನು ಕೇಂದ್ರದ ಸ್ವಾಧೀನ ಸಂಸ್ಥೆಗಳ ಮೂಲಕ ನಿಯಂತ್ರಿಸುತ್ತಾರೆ (ದುರ್ಬಳಕೆ ಮಾಡುತ್ತಾರೆ) ಎಂಬ ಆರೋಪ ಎದುರಿಸಿದರೂ ಯಾರ ಮೇಲೆ ದಾಳಿ ನಡೆಯಿತೋ ಅವರು ದಾಳಿಗೊಳಗಾಗಬೇಕಾದ ವ್ಯಕ್ತಿಯೇ ಅಲ್ಲ ಎಂಬುದನ್ನು ಸಾರಾ ಸಗಟಾಗಿ ಅಲ್ಲಗಳೆಯುವಂತೆ ಇರುತ್ತಿರಲಿಲ್ಲ. ವೈಯಕ್ತಿಕವಾಗಿ ಶಕ್ತಿವಂತನಾಗಬೇಕು ಎಂಬುದು ಮೋದಿಯವರ ಸಾತ್ವಿಕ ಹಟ ಎಂಬುದನ್ನು ಜನ ನಂಬುವಂತೆ ಮಾಡಿದರು. ಗೆದ್ದರು.
ಆದರೆ, ಪ್ರಬಲ ವಿರೋಧಿ ಆಗಬೇಕಾದವರು ತತ್ತರಿಸಿದ್ದಾರೆ. ಮೋದಿಯವರನ್ನು ಥಂಡಾಗೊಳಿಸಬಹುದಾದ ಅಸ್ತ್ರಗಳನ್ನು ಉಪಯೋಗಿಸುವ ಚೈತನ್ಯ ಅವರ ಮಾತುಗಳಿಗೆ ಇರದೇ ಹೋಯಿತು. ವೈಯಕ್ತಿಕವಾಗಿ ನೀವು ಭ್ರಷ್ಟರಿಲ್ಲದಿರಬಹುದು. ಆದರೆ, ನಿಮ್ಮ ಆರ್ಥಿಕ ನೀತಿಗಳು ಸರಿ ಇದ್ದವೆ, ಗಂಗೆಯನ್ನು ಸ್ವತ್ಛಗೊಳಿಸಿದಿರಾ, ಕಸ ಮುಕ್ತ ಭಾರತವಾಯೆ¤, ನೋಟ್ ಬಂದೀ ಅಖೈರಾಗಿ ಭಾರತೀಯರ ಪಾಲಿಗೆ ಯಾವ ಒಳಿತನ್ನು ತಂದಂತಾಯ್ತು, ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ ಅಸಹಿಷ್ಣುತೆಯ, ಯಾರನ್ನೋ ಉದ್ರೇಕಿಸುವ ಸಂಗತಿಗಳು ವೈರಲ್ ಆಗುತ್ತಿವೆ, ಸಾತ್ವಿಕ ಭಾರತದ ಯಾವ ದಿವ್ಯಗಳನ್ನು ಜಗತ್ತಿನ ಇತರ ಉನ್ನತ ಸಂಗತಿಗಳಿಗಿಂತ ಶ್ರೇಷ್ಠ ಎಂಬುದನ್ನು (ಸಾಹಿತ್ಯ, ಔಷಧ, ಆಹಾರ, ಶಿಸ್ತು, ಸಂಯಮ, ಆಚಾರ, ವಿಚಾರ, ದೇವರು, ಪುರಾಣಗಳ ಬಗೆಗೆ ತಿಳಿಸುವುದರ ಮೂಲಕ) ಮುನ್ನೆಲೆಗೆ ತಂದಿರಿ, ಎಷ್ಟು ಭ್ರಷ್ಟರನ್ನು ಈ ಐದು ವರ್ಷಗಳಲ್ಲಿ ಇತರ ಭ್ರಷ್ಟರು ಹೆದರುವ ಮಟ್ಟಿಗೆ ಒಂದು ಅಂತಿಮ ಘಟ್ಟಕ್ಕೆ ತಲುಪಿ ಶಿಕ್ಷೆ ಹೊಂದುವಂತೆ ಮಾಡಿದಿರಿ, ನ್ಯೂಕ್ಲಿಯರ್ ಯುದ್ಧವೇ ಅಂತಿಮವಾಗುವ ಸಂದರ್ಭ ಬಂದರೆ ಪಾಕಿಸ್ತಾನ, ಚೀನಾದಂಥ ರಾಷ್ಟ್ರಗಳನ್ನು ನಿಯಂತ್ರಿಸುವ ವಜ್ರಾಯುಧ ನಿಮ್ಮಲ್ಲಿದೆಯೆ, ಕಳ್ಳನೋಟುಗಳು ಅನ್ಯ ದೇಶದ ಮೂಲಕ, ಅನ್ಯ ದೇಶದಿಂದ ಭಯೋತ್ಪಾದಕರು ನಮ್ಮ ದೇಶಕ್ಕೆ ನುಸುಳಿ ಬರುವ, ಕಾಶ್ಮೀರದಂಥ ಸೂಕ್ಷ್ಮ ಪ್ರದೇಶಗಳಲ್ಲಿ ಇರುವ ಪ್ರಕ್ಷುಬ್ಧತೆಗಳನ್ನು ನಿಯಂತ್ರಿಸುವ, ಕುಡಿಯುವ ನೀರು, ಬೆಳೆಗಾಗಿನ ನೀರಿನ ಸಮಸ್ಯೆ ಪರಿಹರಿಸುವ, ಕೋಟಿಗಟ್ಟಲೆ ನಿರುದ್ಯೋಗಿಗಳಿಗೆ ಕೆಲಸ ಸಿಗುವ, ಜಿಎಸ್‌ಟಿಯ ಮೂಲಕ ಆರ್ಥಿಕವಾದ ವೇದಿಕೆಗೆ ದೇಶದಲ್ಲಿ ಪ್ರಭಾವಳಿ ಸಿಗುವಂತಾಗುವ ಗಡಿಭಾಗದ ದೇಶಗಳಿಂದ ಬರುತ್ತಲೇ ಇರುವ ಅನ್ಯ ದೇಶೀಯರನ್ನು ನಿಯಂತ್ರಿಸುವ ಇತ್ಯಾದಿ, ಇತ್ಯಾದಿ ವಿಷಯಗಳನ್ನು ಮುಂದಿಟ್ಟುಕೊಂಡು ರಾಹುಲ್ ಆಗಲೀ, ಮಹಾ ಘಟಬಂಧನದ ನಾಯ್ಡು, ಮುಲಾಯಂ, ಮಾಯಾವತಿಯಾಗಲೀ ಅಬ್ಬರಿಸಲೇ ಇಲ್ಲ. ಕೇಜ್ರಿವಾಲ್, ಮಮತಾ ಅಂಥವರೂ ಮಸುಕಾಗಿ ಹೋದರು. ಹಾಗಾದರೆ ಇನ್ನು ಮೋದಿ ಪ್ರಶ್ನಾತೀತ ನಾಯಕರಾದರೆ? “”ನೀವು ನಿಮ್ಮ ರಾಜ್ಯದ ಎಂಪಿಗಳಲ್ಲ, ದೇಶದ ಹಿತ ಕಾಯುವ ಎಂಪಿಗಳು ಎಂಬುದನ್ನು ನೆನಪಿಡಿ, ಮಂತ್ರಿಗಳಾಗಿ ಮಂತ್ರಿಮಂಡಲ ಸೇರುತ್ತೇವೆ ಎಂಬ ಅರಿವನ್ನು ಮೋದಿ ಹೊಂದಿದ್ದಾರೆಂಬುದು ಸ್ಪಷ್ಟ. ಮೋದಿ ಬಲಿಷ್ಠರಾಗಿ ಕಾಣಿಸುತ್ತಿದ್ದಾರೆ. ಆದರೆ, ಹಸಿವು, ಬಡತನ, ನಿರುದ್ಯೋಗ, ಶಿಕ್ಷಣ ಸೌಲಭ್ಯ ವಂಚಿತ ಸಮೂಹ ನಿರ್ನಾಮ ವಾಗುವವರೆಗೂ ಮೋದಿ ಪ್ರಶ್ನಾತೀತ ಬಲಿಷ್ಠ ನಾಯಕರಾಗಲಾರರು. ಅಲ್ಪಸಂಖ್ಯಾತರನ್ನು ರಕ್ಷಿಸುವ ಗೌರವಿಸುವ ಮಾತುಗಳು ಕೇವಲ ಮಾತುಗಳಾಗದೇ, ಆರ್ಥಿಕಬಲ ಪಡೆದ ಭಾರತವನ್ನು ಮೋದಿ ಕಟ್ಟಲಾರರು. ಇಂಥದ್ದೊಂದು ಭಾರತ ಮೈದಳೆಯುವಂತಾದರೆ 2029ರವರೆಗೂ ಮೋದಿ ಎಂಬುದು ಅಬಾಧಿತ. -ಮಹಾಬಲಮೂರ್ತಿ ಕೊಡ್ಲಕೆರೆ