Advertisement

ಮೋದಿ, ಅಡ್ವಾಣಿ, ವಾಜಪೇಯಿ ಸ್ವಾತಂತ್ರ್ಯ ಹೋರಾಟಗಾರರಲ್ಲ: ಸಿದ್ದರಾಮಯ್ಯ

06:14 PM Dec 11, 2021 | Team Udayavani |

ಮೈಸೂರು: ನರೇಂದ್ರ ಮೋದಿ, ಅಡ್ವಾಣಿ, ವಾಜಪೇಯಿ ಇವರಾರು ಸ್ವಾತಂತ್ರ್ಯ ಹೋರಾಟಗಾರರಲ್ಲ, ಇವರೆಲ್ಲ ಸ್ವಾತಂತ್ರ್ಯದ ಫಲಾನುಭವಿಗಳು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

Advertisement

ಎಐಸಿಸಿ ಸೂಚನೆ ಮೇರೆಗೆ ಪ್ರದೇಶ ಕಾಂಗ್ರೆಸ್ ಸಮಿತಿ ಶನಿವಾರ ರಾಜ್ಯಾದ್ಯಂತ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಸ್ವಗ್ರಾಮ, ಮೈಸೂರು ತಾಲೂಕಿನ ಸಿದ್ದರಾಮನ ಹುಂಡಿಯ ಬೂತ್ ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರು, ಸಂಸದರು, ಮುಖಂಡರುಗಳು ತಮ್ಮ ಮತವಿರುವ ಗ್ರಾಮದಲ್ಲಿ ಸದಸ್ಯತ್ವ ನೊಂದಾವಣೆ ಮಾಡಿದ್ದಾರೆ. 136 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ಸದಸ್ಯರಾಗೋದೇ ಒಂದು ಹೆಮ್ಮೆಯ ವಿಚಾರ. 1885 ರಲ್ಲಿ ಹ್ಯೂಮ್ ಅವರಿಂದ ಸ್ಥಾಪನೆಯಾದ ಸಂದರ್ಭದಲ್ಲಿ ಡಾ|| ಬ್ಯಾನರ್ಜಿ ಅವರು ಅಧ್ಯಕ್ಷರಾದರು. ನಂತರ ಗೋಪಾಲಕೃಷ್ಣ ಗೋಖಲೆ, ಬಾಲ ಗಂಗಾಧರ ತಿಲಕ್, ವಲ್ಲಭಭಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಮಹಾತ್ಮ ಗಾಂಧಿ, ನೆಹರು ಸೇರಿದಂತೆ ಇಂದಿನ ಶ್ರೀಮತಿ ಸೋನಿಯಾ ಗಾಂಧಿ ಅವರ ವರೆಗೆ ಬಹಳಷ್ಟು ಜನರು ಪಕ್ಷದ ಅಧ್ಯಕ್ಷರಾಗಿದ್ದಾರೆ ಎಂದರು.

ಗೋಖಲೆ ಅವರ ಆಹ್ವಾನದ ಮೇರೆಗೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ಮಹಾತ್ಮ ಗಾಂಧಿ ಅವರು, ಇಲ್ಲಿ ಬ್ರಿಟಿಷ್ ಸರ್ಕಾರದ ದೌರ್ಜನ್ಯ, ದಬ್ಬಾಳಿಕೆಯನ್ನು ಕಂಡು ದೇಶಕ್ಕೆ ಸ್ವಾತಂತ್ರ್ಯ ಸಿಗಬೇಕೆಂದು 1947 ರ ವರೆಗೆ ಅನೇಕ ಚಳವಳಿಗಳನ್ನು ನಡೆಸಿದರು. ಸ್ವಾತಂತ್ರ್ಯ ನಂತರ ದೇಶ ವಿಭಜನೆಯಾಗಿ ನೆಹರು ಅವರು ದೇಶದ ಪ್ರಥಮ ಪ್ರಧಾನಿಗಳಾದರು. ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು ಗಾಂಧೀಜಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ. 1925 ರಲ್ಲಿ ಆರ್.ಎಸ್.ಎಸ್ ನ ಸ್ಥಾಪನೆಯಾದರೂ ಕೂಡ ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯ ಎಂದರು.

ಈಗ ಬಿಜೆಪಿಯವರು ಸಾವರ್ಕರ್ ಅವರು ಬಹಳ ದೊಡ್ಡ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂದೆಲ್ಲಾ ಹೇಳುತ್ತಾರೆ, ನಿಜವಾಗಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿದವರಲ್ಲ, ಜೈಲು ವಾಸದಲ್ಲಿ ಇರುವಾಗ ನಿಮ್ಮ ವಿರುದ್ಧ ಯಾವುದೇ ಹೋರಾಟದಲ್ಲಿ ಭಾಗವಹಿಸುವುದಿಲ್ಲ, ನನ್ನನ್ನು ಬಿಡುಗಡೆ ಮಾಡಿ ಎಂದು ಮೇಲಿಂದ ಮೇಲೆ ಕ್ಷಮಾಪಣಾ ಅರ್ಜಿ ಬರೆದಿದ್ದರಿಂದ ಬ್ರಿಟೀಷರು ಅವರು ಬಿಡುಗಡೆ ಮಾಡಿದ್ದರು. ಈ ಸಾವರ್ಕರ್ ಕೂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದವರಲ್ಲ ಎಂದರು.

Advertisement

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರು, ಆಸ್ತಿ ಪಾಸ್ತಿ ಕಳೆದುಕೊಂಡವರು ಕಾಂಗ್ರೆಸ್ ನವರು. ಸ್ವಾತಂತ್ರ್ಯ ಹೋರಾಟದಲ್ಲೇ ಭಾಗವಹಿಸಿದವರು ಇವತ್ತು ನಮಗೆ ದೇಶಪ್ರೇಮದ ಪಾಠ ಮಾಡಲು ಬರುತ್ತಾರೆ. ನಾನು ಹುಟ್ಟಿದ್ದು 03/08/1947 ಅಂದರೆ ಸ್ವಾತಂತ್ರ್ಯ ಬರುವ ಹನ್ನೆರಡು ದಿನ ಮೊದಲು. ನಾನು ಕೂಡ ಸ್ವಾತಂತ್ರ್ಯದ ಫಲಾನುಭವಿ ಎಂದರು.

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾದ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆ ಆಯಿತು. ಇದರಿಂದ ಒಂದು ಮತ, ಒಂದು ಮೌಲ್ಯ ಜಾರಿಗೆ ಬರುವಂತಾಯಿತು. ಬಡವನಾಗಲೀ, ಸಿರಿವಂತನಾಗಲೀ ಅವರ ಮತಕ್ಕೆ ಸಮಾನ ಮೌಲ್ಯ ಸಿಗುವಂತಾಗಿದ್ದು ಸಂವಿಧಾನದಿಂದ. ಭಾರತೀಯ ಜನತಾ ಪಕ್ಷ ಸಮಾಜದ ಕೆಳ ವರ್ಗದ ಜನರ ಪಕ್ಷವಲ್ಲ. ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿರುವುದು ಅಂತಾರೆ. ಇದೇ ಕಾರಣಕ್ಕೆ ನಾನು ಸಿಂದಗಿ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಭಾಷಣ ಮಾಡುವಾಗ ಕಾರಜೋಳ, ನಾರಾಯಣಸ್ವಾಮಿ, ಜಿಗಜಿಣಗಿಯಂತವರು ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ ಎಂದಿದ್ದೆ, ಇದಕ್ಕೆ ಛಲವಾದಿ ನಾರಾಯಣಸ್ವಾಮಿ ನನ್ನನ್ನು ದಲಿತ ವಿರೋಧಿ, ದಲಿತರಿಗೆ ಅವಮಾನ ಮಾಡಿದೆ ಎಂದೆಲ್ಲಾ ಹುಸಿ ಆರೋಪ ಮಾಡಿದರು ಎಂದು ಕಿಡಿ ಕಾರಿದರು.

ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆ ಇವುಗಳನ್ನು ಸುಧಾರಣೆ ಮಾಡಲು ಪ್ರಯತ್ನಿಸಿ, ಕಡೆಗೆ ಸಾಧ್ಯವಾಗದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸೇರಿದರು. ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ ಎಂದು ಅವರು ಹೇಳಿದ್ದರು. ಅಂಬೇಡ್ಕರ್ ಅವರು ಅವಕಾಶಗಳಿಂದ ವಂಚಿತರಾದ ಎಲ್ಲಾ ಸಮುದಾಯಗಳ ಅಭಿವೃದ್ಧಿಯ ಕಾಳಜಿ ವಹಿಸಿದ್ದರಿಂದ ಅವರನ್ನು ಮಹಾನಾಯಕ ಎಂದು ಕರೆಯುತ್ತಾರೆ ಎಂದರು.

ಜೆಡಿಎಸ್ ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿದೆ. ಆದರೂ 2023 ರಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಅಂತಾರೆ. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 59 ಸೀಟು ಗೆದ್ದಿತ್ತು, ನನ್ನನ್ನು ಪಕ್ಷದಿಂದ ಹೊರಹಾಕಿದ ಮೇಲೆ ಅವರ ಸೀಟುಗಳು ನಿರಂತರವಾಗಿ ಕೆಳಗಿಳಿಯುತ್ತಾ ಇದೆ. ಇವರು ಅಧಿಕಾರಕ್ಕೆ ಬರುತ್ತಾರಾ ಎಂದು ಪ್ರಶ್ನಿಸಿದರು.

ನಮ್ಮ ಧರ್ಮವನ್ನು ಪ್ರೀತಿಸೋದು, ಪರ ಧರ್ಮವನ್ನು ಗೌರವಿಸೋದು ಕಾಂಗ್ರೆಸ್ ನ ಧ್ಯೇಯ. ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಜಾತ್ಯಾತೀತತೆ ಹಾಗೂ ಸಹಿಷ್ಣುತೆ ಕಾಂಗ್ರೆಸ್ ನ ಸಿದ್ದಾಂತರಗಳು. ಈ ದೇಶದಲ್ಲಿ ಎಲ್ಲಾ ಜಾತಿ, ಧರ್ಮದ ಜನರಿದ್ದಾರೆ. ಸರ್ವರನ್ನೂ ಪ್ರೀತಿಸುವುದೇ ಕಾಂಗ್ರೆಸ್ ನ ತತ್ವ. ಈ ದಿನ ನಾವು ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ. ಪ್ರತಿಯೊಬ್ಬರು ಕೇವಲ 5 ರೂಪಾಯಿ ಶುಲ್ಕ ನೀಡುವ ಮೂಲಕ ಪಕ್ಷದ ಸದಸ್ಯತ್ವ ಪಡೆಯಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಪ್ರತಿಯೊಬ್ಬರೂ ಸಂವಿಧಾನ ಓದಬೇಕು, ಆಗ ನಮ್ಮ ಜವಾಬ್ದಾರಿಯ ಅರಿವಾಗುತ್ತೆ. ನಾವು ಯಾರಿಗೆ? ಯಾಕಾಗಿ ಮತ ನೀಡಬೇಕು ಎಂಬುದು ತಿಳಿಯುತ್ತೆ. ಪ್ರಜಾಪ್ರಭುತ್ವ ಉಳಿಯಬೇಕು, ಇದಕ್ಕೆ ಪ್ರಜೆಗಳು ಜಾಗೃತರಾಗಬೇಕು. ಮತದಾನವನ್ನು ಪ್ರತಿಯೊಬ್ಬರು ತಪ್ಪದೇ ಮಾಡಬೇಕು.
ನಾವೆಲ್ಲರೂ ಸೇರಿ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ದೇಶವನ್ನು ಉಳಿಸುವ ಕಡೆಗೆ ಕೆಲಸ ಮಾಡಬೇಕು, ಇದಕ್ಕಾಗಿ ಜಾತಿ, ಧರ್ಮ, ಲಿಂಗ ತಾರತಮ್ಯ ಮರೆತು ಒಂದಾಗೋಣ ಎಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಲು ಹಳ್ಳಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು, ಮುಖಂಡರು ಅದ್ದೂರಿ ಸ್ವಾಗತ ಕೋರಿದರು. ಸಿದ್ದರಾಮಯ್ಯ ಅವರನ್ನು ಎತ್ತಿನ ಗಾಡಿಯಲ್ಲಿ ವೇದಿಕೆಗೆ ಕರೆದೊಯ್ದರು.

ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ವಿಜಯಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next