Advertisement

Rain ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

11:22 PM Jun 17, 2024 | Team Udayavani |

ಮಂಗಳೂರು/ ಉಡುಪಿ: ಕರಾವಳಿಯ ವಿವಿಧೆಡೆ ಸೋಮವಾರ ರಾತ್ರಿಯ ವೇಳೆ ಸಾಧಾರಣ ಮಳೆ ಸುರಿದಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಗಲಿನಲ್ಲಿ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಸಂಜೆಯ ವೇಳೆ ಬೆಳ್ತಂಗಡಿ, ಪುತ್ತೂರು ಮತ್ತು ಮಂಗಳೂರು ನಗರದ ವಿವಿಧೆಡೆ ಸಾಧಾರಣ ಮಳೆಯಾಗಿದೆ.

ಮುಂಗಾರು ಅವಧಿಯಲ್ಲಿ ಸಾಮಾನ್ಯವಾಗಿ ಬಿರುಸಿನ ಮಳೆಯಾಗುತ್ತದೆ. ಆದರೆ ಈ ಬಾರಿ ಜೂ. 2ರಂದು ಕರಾವಳಿಗೆ ಕಾಲಿಟ್ಟ ಮುಂಗಾರು ಆರಂಭದಲ್ಲೇ ಕ್ಷೀಣಿಸಿತ್ತು. ಬಳಿಕ ಕೆಲವು ದಿನವಷ್ಟೇ ಬಿರುಸಿನ ಮಳೆಯಿಂದ ಕೂಡಿತ್ತು. ಮೂರ್‍ನಾಲ್ಕು ದಿನಗಳಿಂದ ದ.ಕ. ಜಿಲ್ಲೆಯಲ್ಲಿ ಮುಂಗಾರಿನ ಹಿನ್ನಡೆ ಉಂಟಾಗಿದೆ. ಈ ನಡುವೆ ತಾಪಮಾನವೂ ಏರಿಕೆ ಕಂಡಿದ್ದು, ಸೆಕೆಯ ವಾತಾವರಣ ಇದೆ. ಮಂಗಳೂರಿನಲ್ಲಿ 31.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.6 ಡಿ.ಸೆ. ಮತ್ತು 24.5 ಮಿ.ಮೀ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.1 ಡಿ.ಸೆ. ಉಷ್ಣಾಂಶ ಏರಿಕೆ ಕಂಡಿತ್ತು.

ನಾಲ್ಕು ದಿನ “ಎಲ್ಲೋ ಅಲರ್ಟ್‌’
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜೂ.18ರಿಂದ 21ರ ವರೆಗೆ ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಈ ವೇಳೆ ಗಾಳಿಯಿಂದ ಕೂಡಿದ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.

ಉಡುಪಿ ಜಿಲ್ಲೆಯಲ್ಲಿ
ಉಡುಪಿ ಜಿಲ್ಲೆಯಲ್ಲಿ ಮೂರ್ನಾಲ್ಕು ದಿನಗಳಿಂದ ಮಳೆ ಪ್ರಮಾಣ ಕಡಿಮೆ ಯಾಗಿದ್ದು, ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಅಲ್ಲಲ್ಲಿ ಸಣ್ಣದಾಗಿ ಮಳೆಯಾಗಿದೆ. ರವಿವಾರ ತಡರಾತ್ರಿ, ಸೋಮ ವಾರ ಮುಂಜಾನೆ ಹೆಬ್ರಿ, ಕುಂದಾಪುರ, ಬೈಂದೂರು ಭಾಗದಲ್ಲಿ ಮಳೆಯಾಗಿದೆ.

Advertisement

ಕಳಸ-ಬಾಳೆಹೊನ್ನೂರು: ಭಾರೀ ಮಳೆ
ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ಕಳಸ-ಬಾಳೆಹೊನ್ನೂರು ಸಂಪರ್ಕ ರಸ್ತೆ ಮೇಲೆ ನೀರು ಹರಿದ ಪರಿಣಾಮ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಪರ್ಕ ಕಡಿತಗೊಂಡ ಘಟನೆ ನಡೆದಿದೆ.

ಸೋಮವಾರ ಸಂಜೆ ಬಾಳೆಹೊನ್ನೂರು ಸಮೀಪದ ಮಾಗುಂಡಿ ಪರಿಸರದಲ್ಲಿ ಭಾರೀ ಮಳೆ ಸುರಿದಿದೆ. ಮಹಲ್ಗೊಡು ಗ್ರಾಮದ ಸಣ್ಣ ಹಳ್ಳ ಏಕಾಏಕಿ ತುಂಬಿ ಹರಿದಿದೆ. ಈ ಹಳ್ಳ ಕಳಸ- ಬಾಳೆಹೊನ್ನೂರು ಸಂಪರ್ಕದ ಹೆದ್ದಾರಿ ಮಧ್ಯೆ ಇರುವ ಮೋರಿ ಮೂಲಕ ಭದ್ರಾ ನದಿ ಸೇರುತ್ತದೆ. ಈ ಮೋರಿಯಲ್ಲಿ ಹೂಳು ತುಂಬಿದ ಪರಿಣಾಮ ಮಳೆ ನೀರು ಮೋರಿ ಮೂಲಕ ಹರಿಯದೆ ರಸ್ತೆ ಮೇಲೆಯೇ ಉಕ್ಕಿ ಹರಿದಿದೆ. ಈ ವೇಳೆ ರಸ್ತೆ ಮೇಲಿದ್ದ ಎರಡು ಹಸುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ರಸ್ತೆ ಮೇಲೆ ಬರುತ್ತಿದ್ದ ಕಾರೊಂದು ನೀರಿನಲ್ಲಿ ಸಿಲುಕಿದ್ದು, ಸ್ಥಳೀಯರು ಕಾರನ್ನು ಸುರಕ್ಷಿತವಾಗಿ ದಡ ಸೇರಿಸಿದ್ದಾರೆ. ಕಳಸ- ಬಾಳೆಹೊನ್ನೂರು ರಸ್ತೆ ಮೇಲೆ ಸುಮಾರು ನಾಲ್ಕು ಅಡಿಯಷ್ಟು ನೀರು ನಿಂತು ರಸ್ತೆ ಸಂಪರ್ಕ ಕಡಿತಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next