Advertisement

ಮಾದರಿ ಹೆಣ್ಣು

09:13 AM Sep 12, 2019 | mahesh |

ಕಡಿಮೆ ಓದಿರುವ ಕಾರಣದಿಂದಲೋ, ಸಂಸಾರ ತಾಪತ್ರಯಗಳಿಂದಲೋ ಎಲ್ಲ ಮಹಿಳೆಯರಿಗೂ ಮನೆಯಿಂದ ಹೊರಗೆ ಹೋಗಿ ದುಡಿಯಲು ಸಾಧ್ಯವಾಗದೇ ಇರಬಹುದು. ಆದರೆ, ಗಂಡನ ವ್ಯವಹಾರದಲ್ಲಿ- ಹೋಟೆಲ್‌, ಅಂಗಡಿ, ಎಲೆಕ್ಟ್ರಾನಿಕ್‌ ಶಾಪ್‌ ಇತ್ಯಾದಿಗಳಲ್ಲಿ ಕೈ ಜೋಡಿಸಲಂತೂ ಸಾಧ್ಯವಿದೆಯಲ್ಲ?

Advertisement

ಸಭೆ, ಸಮಾರಂಭಗಳಿಗೆ ಹೋದಾಗ ಮದುವೆಯಾದ ಹೆಣ್ಣು ಮಕ್ಕಳನ್ನು ಎಲ್ಲರೂ ಕೇಳುವ ಒಂದು ಸಾಮಾನ್ಯ ಪ್ರಶ್ನೆ- “ಹೌಸ್‌ ವೈಫಾ?, ಏನಾದರೂ ಕೆಲಸದಲ್ಲಿ ಇದ್ದೀರಾ?’

ನೀವೇನಾದರೂ “ನಾನು ಗೃಹಿಣಿ’ ಅಂದಿರೋ, ತಾತ್ಸಾರದ ಭಾವವೊಂದು ಅವರ ಮುಖದಲ್ಲಿ ಕಂಡೂ ಕಾಣದಂತೆ ಇಣುಕುತ್ತದೆ. ಆದರೆ, ವಾಸ್ತವದಲ್ಲಿ ಮನೆ ನಿರ್ವಹಣೆ, ಕುಟುಂಬದ ಎಲ್ಲ ಸದಸ್ಯರ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದು ಯಾವ ಕಾರ್ಪೊರೇಟ್‌ ಕೆಲಸಕ್ಕಿಂತ ಏನೂ ಕಡಿಮೆ ಇಲ್ಲ. ಹೆಣ್ಣಿನ ತಾಳ್ಮೆ-ಸಹನೆ ಪರೀಕ್ಷಿಸುವ, ತ್ಯಾಗಗಳನ್ನು ಬೇಡುವ ಕೆಲಸವದು. ಹಾಗಂತ ಹೇಳಿದರೆ ಯಾರು ಅರ್ಥ ಮಾಡಿಕೊಳ್ಳುತ್ತಾರೆ? ಕೆಲಸಕ್ಕೆ ಹೋಗದ ಮಹಿಳೆಯರು ಗಂಡನ ದುಡ್ಡಿನಲ್ಲಿ ಬದುಕುವವರು ಎಂಬ ಭಾವನೆ ಹಲವು ಜನರಲ್ಲಿದೆ.

ಮೊದಲು ನಾನು ಕೂಡ ದೊಡ್ಡ ತಲೆಬಿಸಿಗಳ್ಯಾವುದೂ ಇಲ್ಲದೇ ಮನೆ, ತೋಟ ಅಂತ ಆರಾಮಾಗಿದ್ದೆ. ಆಗ ಸಾಕಷ್ಟು ಸಮಯವಿರುತ್ತಿತ್ತು ನನ್ನ ಬಳಿ. ಯಾರಾದರೂ ಕೇಳಿದಾಗ, “ಹೌಸ್‌ವೈಫ್’ ಅಂತ ಹೇಳಿ, ಅವರ ಒಂಥರಾ ನೋಟದಿಂದ ಬೇಸತ್ತ ಮೇಲೆ, ನಾನೂ ಏನಾದರೂ ಮಾಡ್ಬೇಕು ಎಂಬ ಛಲ ಮೂಡಿತು. ನನ್ನ ಯಜಮಾನರಿಗೆ ಎಲೆಕ್ಟ್ರಿಕಲ್‌ ಅಂಗಡಿ ಇತ್ತು. ಅವರು ವೈರಿಂಗ್‌ ಮತ್ತು ಮೋಟಾರ್‌ ವೈಂಡಿಂಗ್‌ ಕೆಲಸ ಮಾಡುತ್ತಿದ್ದರು.

ಒಂದು ದಿನ ಯಜಮಾನರು ಫ್ಯಾನ್‌ ವೈಂಡಿಂಗ್‌ ಯಂತ್ರವನ್ನು ಮನೆಗೆ ತಂದಿರಿಸಿದರು. ರಾತ್ರಿ ಅಂಗಡಿಯಿಂದ ಮನೆಗೆ ಬಂದ ಮೇಲೆ, ವೈಂಡಿಂಗ್‌ನ ಕೆಲಸ ಮಾಡುತ್ತಿದ್ದರು. ವರ್ಕ್‌ ಫ್ರಂ ಹೋಂ ಅಂತಾರಲ್ಲ ಹಾಗೆ! ಅವರ ಕೆಲಸದಲ್ಲಿ ನನಗೂ ಕುತೂಹಲ ಮೂಡಿತು. ಅವರ ಪಕ್ಕ ಕುಳಿತು, ಹ್ಯಾಗೆ ಕೆಲಸ ಮಾಡುತ್ತಿದ್ದಾರೆ ಅಂತ ಸುಮ್ಮನೆ ನೋಡುತ್ತಿದ್ದೆ. ಮಾರನೆದಿನ ಯಜಮಾನರು ಅಂಗಡಿಗೆ ಹೋದ ನಂತರ, ರಾತ್ರಿ ಅವರು ಅರ್ಧಕ್ಕೆ ನಿಲ್ಲಿಸಿದ್ದ ಕೆಲಸವನ್ನು ಸ್ವಲ್ಪ ಸ್ವಲ್ಪವೇ ಮಾಡಲು ಶುರು ಮಾಡಿದೆ. ಹಿಂದಿನ ದಿನ ಸರಿಯಾಗಿ ಗಮನಿಸಿದ್ದರಿಂದ ಸ್ವಲ್ಪ ಗೊತ್ತಾಯಿತು. ಸಂಜೆ ಅವರು ಮನೆಗೆ ಬಂದ ಮೇಲೆ, ನನಗೂ ಕೆಲಸ ಕಲಿಸಿಕೊಡಿ ಅಂತ ದುಂಬಾಲುಬಿದ್ದೆ.

Advertisement

ಅಂದಿನಿಂದಲೇ ಕಲಿಕೆ ಶುರುವಾಯಿತು. ಮೊದಲು ಅವರು ಕೆಲಸ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸಿದೆ. ನಂತರ ಅದನ್ನು ಪುನರಾವರ್ತನೆ ಮಾಡಿದೆ. ಹೆಚ್ಚಾಗಿ ಪುರುಷರೇ ಮಾಡುವ ವೈಂಡಿಂಗ್‌ ಕೆಲಸದಲ್ಲಿ, ಹೆಚ್ಚಿನ ಎಚ್ಚರಿಕೆ ವಹಿಸುವುದು ಮುಖ್ಯ. ಚೂರು ಮೈ ಮರೆತು ಕೈ ಜಾರಿದರೂ, ಧರಿಸಿದ ಬಟ್ಟೆ ಯಂತ್ರಕ್ಕೆ ತಾಗಿದರೂ ಅಪಾಯವಾಗಬಹುದು. ದೈಹಿಕ ಶ್ರಮವನ್ನೂ ಬಯಸುವ ಈ ಕೆಲಸ, ಗಂಡಸರಿಗಷ್ಟೇ ಸೂಕ್ತ ಎಂಬ ಭಾವನೆ ಇರುವುದೂ ಅದಕ್ಕೇ.

ಕೈ-ಕಾಲು, ಕಣ್ಣಿಗೆ ಅಪಾಯವಾಗದಂತೆ ಕೆಲಸ ಮಾಡುವ ಅಚ್ಚುಕಟ್ಟುತನವನ್ನೂ ಮನೆಯವರಿಂದ ಕಲಿತೆ. ಹೀಗೆಯೇ ಕಲಿತು ಮಾಡುತ್ತಾ, ಮಾಡಿ ಕಲಿಯುತ್ತಾ, ಇದೀಗ ಪರ್ಫೆಕ್ಟ್ ಫ್ಯಾನ್‌ ವೈಂಡರ್‌ ಆಗಿದ್ದೇನೆ. ಕಲಿಕೆಯ ಪ್ರತಿ ಹಂತದಲ್ಲೂ ಜೊತೆಗಿದ್ದು ಉತ್ಸಾಹ, ಪ್ರೋತ್ಸಾಹ ನೀಡಿದ ಮನೆಯವರಿಗೆ ಧನ್ಯವಾದ ಹೇಳಲೇಬೇಕು!

ಯಾವ ಕೆಲಸವೂ ಕೀಳಲ್ಲ. ಹಾಗೆಯೇ, ಮನಸು ಮಾಡಿದರೆ ಯಾವ ಕೆಲಸವೂ ಕಷ್ಟವಲ್ಲ. ಕೆಲಸ ಕಲಿಯುವ ಛಲ ಇರಬೇಕಷ್ಟೇ. ವೈಂಡಿಂಗ್‌ ಕೆಲಸ ಶುರು ಮಾಡಿ, ಗಂಡನ ಕೆಲಸಕ್ಕೆ ನೆರವಾಗಲು ಪ್ರಾರಂಭಿಸಿದ ಮೇಲೆ, ನನ್ನಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿದೆ. ಮೊದಲೆಲ್ಲಾ ಯಾವುದಕ್ಕೂ ಉಪಯೋಗ ಇಲ್ಲದವಳು, ದಂಡಪಿಂಡ, ಯೂಸ್‌ಲೆಸ್‌ ಅಂತೆಲ್ಲಾ ನೆಗೆಟಿವ್‌ ಭಾವನೆಗಳು ಕಾಡುತ್ತಿದ್ದವು. ಏನು ಕೆಲಸದಲ್ಲಿದ್ದೀಯಾ ಅಂತ ಯಾರಾದರೂ ಕೇಳಿದರೆ, ಹೇಳಲು ಹಿಂಜರಿಯುತ್ತಿದ್ದೆ. ಆದರೀಗ ಹೆಮ್ಮೆಯಿಂದ, ನಾನು ಫ್ಯಾನ್‌ ವೈಂಡಿಂಗ್‌ ಮಾಡುತ್ತೇನೆ ಅಂತ ಹೇಳುತ್ತೇನೆ. ಆಗ, ಹೆಣ್ಣು ಮಕ್ಕಳೂ ಈ ಕೆಲಸ ಮಾಡುತ್ತಾರಾ? ಎಂದು ಅಚ್ಚರಿಯಿಂದ ಕೇಳುತ್ತಾರೆ. “ಹೌದು, ಯಾಕೆ ಮಾಡಬಾರದು?’ ಅಂತ ನಾನೂ ತಿರುಗಿ ಕೇಳುತ್ತೇನೆ.

ಎಲ್ಲಾ ಹೆಣ್ಣು ಮಕ್ಕಳೂ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡು ಸ್ವಾಭಿಮಾನಿಗಳಾಗಬೇಕು. ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ ದುಡಿಯಬೇಕು. ಆಗ ನಮ್ಮ ಬಗ್ಗೆ ನಮಗಿರುವ ಕೀಳರಿಮೆ ದೂರಾಗುವುದಲ್ಲದೆ, ಸಂಸಾರ ನಿರ್ವಹಣೆಗೆ ಗಂಡನಿಗೂ ನೆರವಾದಂತಾಗುತ್ತದೆ. ಈಗಿನ ಕಾಲದಲ್ಲಿ ಇದು ಅನಿವಾರ್ಯ ಕೂಡ ಹೌದು.

ಕಡಿಮೆ ಓದಿರುವ ಕಾರಣದಿಂದಲೋ, ಸಂಸಾರ ತಾಪತ್ರಯಗಳಿಂದಲೋ ಎಲ್ಲ ಮಹಿಳೆಯರಿಗೂ ಮನೆಯಿಂದ ಹೊರಗೆ ಹೋಗಿ ದುಡಿಯಲು ಸಾಧ್ಯವಾಗದೇ ಇರಬಹುದು. ಆದರೆ, ಗಂಡನ ವ್ಯವಹಾರದಲ್ಲಿ- ಹೋಟೆಲ್‌, ಅಂಗಡಿ, ಎಲೆಕ್ಟ್ರಾನಿಕ್‌ ಶಾಪ್‌ ಇತ್ಯಾದಿಗಳಲ್ಲಿ ಕೈ ಜೋಡಿಸಲಂತೂ ಸಾಧ್ಯವಿದೆಯಲ್ಲ? ನನಗೆ ಅದೆಲ್ಲಾ ಬರುವುದಿಲ್ಲ ಅನ್ನುವುದಕ್ಕಿಂತ, ನಾನೂ ಟ್ರೈ ಮಾಡಬಹುದಲ್ಲ ಎಂಬ ಭಾವನೆ ಮೂಡಿದರೆ, ಎಲ್ಲವೂ ಸುಲಭ.

– ನಯನ ಬಜಕೂಡ್ಲು, ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next