Advertisement

ಕಾಸರಗೋಡು ರಾಜ್ಯಕ್ಕೆ ಮಾದರಿ: ಷಾಹಿದಾ ಕಮಾಲ್‌

11:43 PM Sep 19, 2019 | Team Udayavani |

ಕಾಸರಗೋಡು: ಹೆಣ್ಣು ಮಕ್ಕಳಿಗೆ ವಯರಿಂಗ್‌ ಮತ್ತು ಪ್ಲಂಬಿಂಗ್‌ ಕಾಯಕದ ಬಗ್ಗೆ ತರಬೇತಿ ನೀಡುವ ಮೂಲಕ ಅವರನ್ನು ಸಬಲರನ್ನಾಗಿಸುವ ಯತ್ನದಲ್ಲಿ ಕಾಸರಗೋಡು ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ‌ ಸದಸ್ಯೆ ಡಾ| ಷಾಹಿದಾ ಕಮಾಲ್‌ ಶ್ಲಾಘಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಚಾರದತ್ತ ಬೆಳಕು ಚೆಲ್ಲಿದರು.ಕೇರಳ ಪುನರ್‌ ನಿರ್ಮಾಣ ಯೋಜನೆ ಅಂಗವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್‌ ನೇತೃತ್ವದಲ್ಲಿ ಹೆಣ್ಣು ಮಕ್ಕಳಿಗೆ ಈ ವಲಯದಲ್ಲಿ ನೀಡಲಾದ ತರಬೇತಿ ಪೂರ್ಣಗೊಂಡಿದ್ದು ಸುಮಾರು 20 ಮಂದಿ ಹೆಣ್ಣು ಮಕ್ಕಳು ತರಬೇತಿ ಪಡೆದಿರುವುದು ಆರೋಗ್ಯಕರ ಬೆಳವಣಿಗೆ ಎಂದವರು ಕೊಂಡಾಡಿದರು.

ಈ ವರೆಗೆ ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಈ ವಲಯಗಳಲ್ಲಿ ಈ ಮೂಲಕ ಮಹಿಳೆಯರಿಗೂ ಅವಕಾಶ ಒದಗಿದೆ. ಮನೆಯೊಂದಕ್ಕೆ ಅನಿವಾರ್ಯ ಘಟಕಗಳಾಗಿರುವ ಈ ವಲಯಗಳಲ್ಲಿ ಪುರುಷರು ಮಾತ್ರ ಕಾಯಕ ನಡೆಸುತ್ತಿದ್ದುದು ಅನೇಕ ಸಮಸ್ಯೆಗಳಿಗೂ ಕಾರಣವಾಗುವ ಭೀತಿಗಳಿದ್ದುವು. ಆದರೆ ಮಹಿಳೆಯರೂ ಈ ವಲಯದಲ್ಲಿ ಸಿದ್ಧರಾಗುವ ನೂತನ ಸಾಧ್ಯತೆಗಳು ತೆರೆದುಕೊಂಡಿವೆ ಎಂದವರು ನುಡಿದರು.

ಇದೇ ವೇಳೆ ಪ್ರತಿ ಮನೆಯಲ್ಲೂ ಕನಿಷ್ಠ ಓರ್ವ ಮಹಿಳೆಗೆ ಈ ತರಬೇತಿ ನೀಡಬೇಕು ಎಂದು ಆಯೋಗ ಆಗ್ರಹಿಸುತ್ತಿದೆ ಎಂದು ಷಾಹಿದಾ ಕಮಾಲ್‌ ತಿಳಿಸಿದರು.

ಈ ನಿಟ್ಟಿನಲ್ಲಿ ಈ ತರಬೇತಿ ಯೋಜನೆಯನ್ನು ವಿಪುಲಗೊಳಿಸಬೇಕು ಎಂದು ಜಿಲ್ಲಾ ಧಿಕಾರಿ ಅವರಲ್ಲಿ ವಿನಂತಿಸಿರುವುದಾಗಿ ಮತ್ತು ಅವರು ಇದಕ್ಕೆ ಸಮ್ಮತಿ ನೀಡಿರುವುದಾಗಿ ಅವರು ಹೇಳಿದರು. ಇದರ ಅಂಗವಾಗಿ ಅ. 12ರಂದು ಈ ವಿಚಾರಕ್ಕೆ ಆದ್ಯತೆ ನೀಡುವ ವಿಚಾರಸಂಕಿರಣ ನಡೆಸುವುದಾಗಿ ಅವರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next