ಬೆಂಗಳೂರು: ರ‍್ಯಾಪಿಡೋ ಬೈಕ್ ಚಾಲಕನೊಬ್ಬ ತನ್ನ ಖಾಸಗಿ ಜಾಗ ಸ್ಪರ್ಶಿಸಿ ವಿಕೃತಿ ಮೆರೆದಿದ್ದಾನೆ ಎಂದು ರೂಪದರ್ಶಿಯೊಬ್ಬರು ನೀಡಿದ್ದ ದೂರು ಸುಳ್ಳು ಎಂಬುದು ಹೆಣ್ಣೂರು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಅಕ್ಟೋಬರ್ 31ರಂದು ರಾತ್ರಿ 10.30ರ ಸುಮಾರಿಗೆ ಜಕ್ಕೂರಿನಿಂದ ಬಾಬುಸಪಾಳ್ಯಕ್ಕೆ ಬೈಕ್ ಬುಕ್ ಮಾಡಿದ್ದರು. ಅದರಂತೆ ಸ್ಥಳಕ್ಕೆ ಬಂದ ಬೈಕ್ ಚಾಲಕ ಮಾರ್ಗ ಮಧ್ಯೆ ತನ್ನ ಖಾಸಗಿ ಭಾಗ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ರೂಪದರ್ಶಿ, ನಟಿ, ಡಬ್ಬಿಂಗ್ ಆರ್ಟಿಸ್ಟ್ ದೂರು ನೀಡಿದ್ದರು.
ಬಳಿಕ ತನಿಖೆ ನಡೆಸಿದ ರ‍್ಯಾಪಿಡೋ ಬುಕ್ ಮಾಡಿ, ಕೆಲ ಹೊತ್ತಿನ ಬಳಿಕ ರದ್ದುಗೊಳಿಸಲಾಗಿದೆ. ಅಲ್ಲದೆ, ಘಟನಾ ಸ್ಥಳದ ಸಿಸಿ ಕ್ಯಾಮೆರಾದಲ್ಲೂ ಯುವಕ ಬಂದಿರುವ ಯಾವುದೇ ದೃಶ್ಯಗಳು ಸೆರೆ ಆಗಿಲ್ಲ. ಚಾಲಕನ ಮೇಲಿನ ಕೋಪಕ್ಕೆ ದೂರು ನೀಡಿದ್ದಾರೆ. ಹೀಗಾಗಿ ಇದೊಂದು ಸುಳ್ಳು ದೂರು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸರು ಹೇಳಿದರು.
ಈ ಕುರಿತು ಮಾಹಿತಿ ನೀಡಿದ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ಆಕೆಯ ದೂರಿನ ಮೇರೆಗೆ ತನಿಖೆ ನಡೆಸಿದಾಗ ರ‍್ಯಾಪಿಡೋ ಬುಕ್ ಮಾಡಿ, ನಂತರ ಕ್ಯಾನ್ಸಲ್ ಮಾಡಿದ್ದಾರೆ. ಆರೋಪಿತ ಯುವಕ ಸ್ಥಳಕ್ಕೆ ಬಂದಿರುವ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಇದೊಂದು ಸುಳ್ಳು ದೂರು ಎಂಬುದು ಗೊತ್ತಾಗಿದೆ. ಆದರೂ ಎಸಿಪಿಗೆ ತನಿಖೆ ಸಂಪೂರ್ಣ ಮಾಹಿತಿ ಸಂಗ್ರಹಿಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.