Advertisement

ಸೋಂಕು ನಿಯಂತ್ರಣದಲ್ಲಿ ಮಾದರಿ ಜಿಲ್ಲೆ

04:52 PM Aug 19, 2020 | Suhan S |

ಕಾರವಾರ: ಕೋವಿಡ್‌ ಸೋಂಕಿತರ ನಿಯಂತ್ರಣದಲ್ಲಿ ಜಿಲ್ಲೆಯ ಕ್ರಮ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಹರೀಶಕುಮಾರ್‌ ಹೇಳಿದರು. ಕೋವಿಡ್‌ ಸ್ಥಿತಿಗತಿ ಬಗ್ಗೆ ಜಿಲ್ಲಾಡಳಿತ ಸಮಗ್ರ ಮಾಹಿತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿ ಅವರು ಮಾತನಾಡಿದರು.

Advertisement

ಇಡೀ ವಿಶ್ವ ಕೋವಿಡ್‌-19 ಮಹಾ ಮಾರಿಯ ವಿರುದ್ಧ ಹೊರಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆ ಕೂಡಾ ನಿರಂತರ ಹೋರಾಟ ನಡೆಸುತ್ತಿದ್ದು, ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಲಾಕ್‌ಡೌನ್‌ ನಿಯಮಗಳನ್ನು ಹಾಗೂ ಅನ್‌ಲಾಕ್‌ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಿರುವುದರಿಂದ, ಜಿಲ್ಲೆಯಲ್ಲಿ ಸೋಂಕು ವ್ಯಾಪಿಸುವುದನ್ನು ಬಹುತೇಕ ನಿಯಂತ್ರಣ ಸಾಧಿಸುವಲ್ಲಿ ಯಶಸ್ಸು ಕಾಣುತ್ತಿದೆ ಎಂದರು.

ಜಿಲ್ಲಾಡಳಿತವು ಪ್ರಮುಖವಾಗಿ ಕೊವಿಡ್‌-19 ಸಮುದಾಯಕ್ಕೆ ಹರಡದಂತೆ ನೋಡಿಕೊಳ್ಳಲಾಗಿದೆ. ಸೋಂಕಿತರ ಮರಣ ಸಂಭವಿಸದಂತೆ ಚಿಕಿತ್ಸೆ ನೀಡುವ ಬಗ್ಗೆ ಹೆಚ್ಚಿನ ಗಮನ ನೀಡಿದ್ದೇವೆ. ನಿರಂತರವಾಗಿ ಸೋಂಕು ಪತ್ತೆ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಡೆಸುತ್ತಿದ್ದು, ರಾಜ್ಯದಲ್ಲೇ ಅತ್ಯಂತ ಕಡಿಮೆ ಅಂದರೆ ಶೇ.5.6 ರಷ್ಟು ಸೋಂಕು ಪತ್ತೆಯಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟೂ 46,406 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೇವಲ 3368 ಪಾಸಿಟಿವ್‌ ಪತ್ತೆಯಾಗಿದೆ. ಈ ಪೈಕಿ 2420 ಜನರು ಸಂಪೂರ್ಣ ಗುಣಮುಖರಾಗಿದ್ದು, ಕೇವಲ 33 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಇತರೇ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆ ಕೊರೊನಾವನ್ನು ಸಮರ್ಥವಾಗಿ ನಿಭಾಯಿಸಿರುತ್ತದೆ ಎಂದು ಅವರು ತಿಳಿಸಿದರು.

ಈ ಯಶಸ್ಸಿಗೆ ಕಾರಣೀಕರ್ತರಾದ ಜಿಲ್ಲೆಯ ಜನರನ್ನು ಅವರು ಅಭಿನಂದಿಸಿದ್ದಾರೆ. ಜನ ಪ್ರತಿನಿಧಿಗಳಿಗೆ, ಕೋವಿಡ್ ವಾರಿಯರ್ಸ್‌ಗಳಾಗಿ ಕಾರ್ಯನಿರ್ವಹಿಸಿದ ವೈದ್ಯರು, ದಾದಿಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮತ್ತು ಪೊಲೀಸ್‌ ಇಲಾಖೆ, ಕಂದಾಯ ಇಲಾಖೆ, ಮತ್ತಿತರ ಇಲಾಖೆ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ, ಸಿಬ್ಬಂದಿಗೆ, ಮಾಧ್ಯಮ ಪ್ರತಿನಿಧಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣದಲ್ಲಿದೆ ಎಂದು ನಾವು ಮೈಮರೆಯುವ ಹಾಗಿಲ್ಲ. ಕೊವಿಡ್‌-19 ಇದು ಬಹುಬೇಗ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದರಿಂದ ಇದರ ನಿಯಂತ್ರಣ ಸಾರ್ವಜನಿಕರ ಸಹಕಾರವಿಲ್ಲದೇ ಸಾಧ್ಯವಾಗುವುದಿಲ್ಲ. ಮುಂದಿನ ದಿನಗಳಲ್ಲಿ ಗಣೇಶ ಚತುರ್ಥಿ ಹಾಗೂ ಇತರೇ ಸಾಲು ಸಾಲು ಹಬ್ಬಗಳು ಬಂದಿವೆ. ಜಿಲ್ಲೆಯ ನಾಗರಿಕರು ಈ ಹಿಂದಿನಂತೆಯೇ ಸಾಮಾಜಿಕ ಅಂತರ, ವೈಯಕ್ತಿಕ ಸ್ವತ್ಛತೆ ಹಾಗೂ ಉತ್ತಮ ಆರೋಗ್ಯ ಕಾಯ್ದುಕೊಂಡು, ಕೋವಿಡ್‌-19 ಅನ್‌ ಲಾಕ್‌ ಮಾರ್ಗಸೂಚಿ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next