ಸಾಮಾನ್ಯವಾಗಿ ಒಂದು ಸಿನಿಮಾದಲ್ಲಿ ಒಬ್ಬರೋ, ಇಬ್ಬರೋ ನಾಯಕಿಯರಿರುತ್ತಾರೆ. ಆದರೆ, ಇಲ್ಲೊಂದು ಸಿನಿಮಾದಲ್ಲಿ ಬರೋಬ್ಬರಿ 9 ನಾಯಕಿಯರಿದ್ದಾರೆ! ಇದು ಆಶ್ಚರ್ಯವಾದರೂ ಸತ್ಯ. ಹೀಗೆ ಒಂಬತ್ತು ನಾಯಕಿಯರ ಜೊತೆ ಡ್ಯುಯೆಟ್ ಹಾಡಿರುವ ನಾಯಕ ರಾಜನರಸಿಂಹ.
ಹೌದು, “ಮೊದಲ ಮಳೆ’ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ರಾಜಶರಣ್ ಈ ಚಿತ್ರದ ನಿರ್ದೇಶಕರು. ಯಾವ ಹುಡುಗಿಯೂ ಇಷ್ಟಪಡದಂಥ ರೂಪವುಳ್ಳ ಹುಡುಗನೊಬ್ಬ ಮದುವೆಯಾಗಲು ಹೊರಟಾಗ ಎದುರಾಗುವ ಸನ್ನಿವೇಶಗಳನ್ನಿಟ್ಟುಕೊಂಡು “ಮೊದಲ ಮಳೆ’ ಸಿನಿಮಾ ಕಟ್ಟಿಕೊಡಲಾಗಿದೆ. ಮರ್ಡರ್ ಮಿಸ್ಟ್ರಿ, ಕಾಮಿಡಿ, ಹಾರರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಾಜನರಸಿಂಹ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ.
ಮಮತಾ ಗೌಡ, ಸಾಹಿತ್ಯ, ಉಷಾ, ಪ್ರಿಯಾಶೆಟ್ಟಿ ಸೇರಿದಂತೆ ಒಂಬತ್ತು ಜನ ನಾಯಕಿಯರಾಗಿ ನಟಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ನಾಯಕ,”ನಾನೊಬ್ಬ ರೈತನ ಮಗ. ನಟನಾಗಬೇಕು ಎನ್ನುವುದು ನನ್ನ ಕನಸು. ಒಂದು ಸಿನಿಮಾ ಮಾಡಲು ಹೋಗಿ ಮೋಸಹೋದೆ. ಈಗ ನಾನೇ ನಿರ್ಮಾಪಕ ಹಾಗೂ ನಾಯಕನಾಗಿ ಈ ಚಿತ್ರ ಮಾಡಿದ್ದೇನೆ. ಏನೋ ಸಾಧನೆ ಮಾಡಲು ಹಳ್ಳಿಯಿಂದ ಬಂದ ಜವರಾಯ ಕೊನೆಗೆ ಏನಾದ ಎನ್ನುವುದೇ ಈ ಚಿತ್ರದ ಕಥೆ’ ಎಂದು ಹೇಳಿದರು.
ನಿರ್ದೇಶಕ ರಾಜಶರಣ್ ಮಾತನಾಡಿ, “ಹಿಂದೆ ‘ಎಮ್ಮೆತಮ್ಮ’ ಎಂಬ ಚಿತ್ರ ಮಾಡಿದ್ದೆ. ಇದು ನನ್ನ ಎರಡನೇ ಚಿತ್ರ. ರಾಜನರಸಿಂಹ 5 ವರ್ಷದ ಸ್ನೇಹಿತರು, ಅವರಿಗಾಗಿಯೇ ಒಂದು ಕಥೆ ಮಾಡಿದೆ. ಆ ಚಿತ್ರ ಆಗಲಿಲ್ಲ, ಇವರಿಗೆ 10 ಜನ ಹೀರೋಯಿನ್ ಇಟ್ಕೊಂಡು ಸಿನಿಮಾ ಮಾಡಲಾಗುತ್ತಾ ಎನ್ನುವ ಮಾತು ಬಂತು. ಯಾಕಾಗಲ್ಲ ಅಂತ ಚಾಲೆಂಜ್ ತಗೊಂಡು ಈ ಚಿತ್ರ ಮಾಡಿದ್ದೇನೆ. ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಮೊದಲ ಮಳೆ ಇದ್ದ ಹಾಗೆ. ನಾಯಕನ ಜೀವನದಲ್ಲೂ ಮೊದಲ ಮಳೆ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರದ ಹೈಲೈಟ್ಸ್’ ಎಂದರು.