Advertisement

ನಾಳೆ ಅಪ್ಪಳಿಸಲಿದೆ “ಮೋಚಾ”- ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಧಾರಾಕಾರ ಮಳೆ ಮುನ್ಸೂಚನೆ

08:50 PM May 12, 2023 | Team Udayavani |

ಕೋಲ್ಕತ್ತಾ/ಢಾಕಾ: ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ “ಮೋಚಾ’ ಚಂಡಮಾರುತವು “ಅತ್ಯಂತ ತೀವ್ರತರವಾದ’ ಚಂಡಮಾರುತವಾಗಿ ಬದಲಾಗಲಿದ್ದು, ಈ ಅಬ್ಬರವನ್ನು ಎದುರಿಸಲು ಪಶ್ಚಿಮ ಬಂಗಾಳ, ಬಾಂಗ್ಲಾ ಮತ್ತು ಮ್ಯಾನ್ಮಾರ್‌ಗಳು ಸಜ್ಜಾಗಿವೆ.

Advertisement

ಭಾನುವಾರ(ಮೇ 14) ಮೋಚಾ ಸೈಕ್ಲೋನ್‌ ಬಾಂಗ್ಲಾದೇಶ-ಮ್ಯಾನ್ಮಾರ್‌ ಗಡಿ ಭಾಗದಲ್ಲಿ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಪ್ರಭಾವವೆಂಬಂತೆ, ಪಶ್ಚಿಮ ಬಂಗಾಳ, ಒಡಿಶಾ, ಬಾಂಗ್ಲಾ-ಮ್ಯಾನ್ಮಾರ್‌ನ ಹಲವು ಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆರಂಭವಾಗಿದೆ. ಭಾನುವಾರದವರೆಗೆ ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಅಪ್ಪಳಿಸುವುದೆಲ್ಲಿ?
ಒಂದು ಅಂದಾಜಿನ ಪ್ರಕಾರ, ಬಾಂಗ್ಲಾದ ಕೋಕ್ಸ್‌ ಬಜಾರ್‌ ಮತ್ತು ಮ್ಯಾನ್ಮಾರ್‌ನ ಬಂದರು ನಗರಿ ಸಿತೆÌ ಸಮೀಪದ ಕೊÂàಕ್‌ಪ್ಯುನಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಗಂಟೆಗೆ 175 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದೆ. ಕೋಕ್ಸ್‌ ಬಜಾರ್‌ ಎನ್ನುವುದು ಜಗತ್ತಿನ ಅತಿದೊಡ್ಡ ನಿರ್ವಸಿತರ ಶಿಬಿರವಾಗಿದ್ದು, ಇಲ್ಲಿ ಮ್ಯಾನ್ಮಾರ್‌ನಿಂದ ವಲಸೆ ಬಂದ ಸುಮಾರು 9 ಲಕ್ಷ ರೊಹಿಂಗ್ಯಾ ಮುಸ್ಲಿಮರು ವಾಸಿಸುತ್ತಿದ್ದಾರೆ.

ಸಾವಿರಾರು ಮಂದಿಯ ಸ್ಥಳಾಂತರ:
ಶುಕ್ರವಾರವೇ ಬಾಂಗ್ಲಾ ಸರ್ಕಾರ ಸುಮಾರು 5 ಲಕ್ಷ ಜನರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭಿಸಿದೆ. 576 ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಇದು ಪ್ರಸಕ್ತ ವರ್ಷ ಹಿಂದೂ ಮಹಾಸಾಗರದಲ್ಲಿ ಕಂಡುಬರುತ್ತಿರುವ ಮೊದಲ ಚಂಡಮಾರುತ. ಇದು ಬಹಳ ಅಪಾಯಕಾರಿ ಸೈಕ್ಲೋನ್‌ ಆಗಿದ್ದು, ಸಾವಿರಾರು ಮಂದಿ ಮೀನುಗಾರರು ಮತ್ತು ಕರಾವಳಿಯ ಜನರಿಗೆ ಹಾನಿ ಉಂಟುಮಾಡುವ ಭೀತಿಯಿದೆ. 2008ರ ಮೇ ತಿಂಗಳಲ್ಲಿ ಅಪ್ಪಳಿಸಿದ್ದ ನರ್ಗಿಸ್‌ ಚಂಡಮಾರುತವು 1.38 ಲಕ್ಷ ಮಂದಿಯನ್ನು ಬಲಿತೆಗೆದುಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಂಡಮಾರುತದ ಎಫೆಕ್ಟ್ ಎಂಬಂತೆ ದಿಢೀರ್‌ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸುವ ಸಾಧ್ಯತೆಯೂ ಇದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಬಂಗಾಳದಲ್ಲಿ ಕಟ್ಟೆಚ್ಚರ
ಚಂಡಮಾರುತವು ಭಾರೀ ಪ್ರಮಾಣದಲ್ಲಿ ಹಾನಿ ಮಾಡುವ ಸಾಧ್ಯತೆ ಇರುವ ಕಾರಣ, ಪಶ್ಚಿಮ ಬಂಗಾಳ ಸರ್ಕಾರವು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕರಾವಳಿ ಪ್ರದೇಶದಲ್ಲಿರುವ ಮತ್ತು ತಗ್ಗುಪ್ರದೇಶದಲ್ಲಿರುವ ಸಾವಿರಾರು ಮಂದಿಯನ್ನು ಈಗಾಗಲೇ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಜತೆಗೆ, ಅಲ್ಲಿಗೆ ಪರಿಹಾರ ಸಾಮಗ್ರಿಗಳನ್ನೂ ತಲುಪಿಸಲಾಗಿದೆ. ಮೂರು ದಿನಗಳ ಕಾಲ ಸಮುದ್ರದ ಬಳಿ ತೆರಳದಂತೆ ಮೀನುಗಾರರು ಮತ್ತು ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ. ರಾಜ್ಯದ ದಿಘಾಗೆ ಶುಕ್ರವಾರವೇ ಎನ್‌ಡಿಆರ್‌ಎಫ್ ತಂಡ ಆಗಮಿಸಿದೆ.

Advertisement

ಭಾರತದಲ್ಲಿ ಹೈಅಲರ್ಟ್‌
ಮೋಚಾ ಚಂಡಮಾರುತವು ಬಾಂಗ್ಲಾ-ಮ್ಯಾನ್ಮಾರ್‌ ಗಡಿಯಲ್ಲಿ ಅಪ್ಪಳಿಸುತ್ತಿದೆಯಾದರೂ ಭಾರತದ ಈಶಾನ್ಯ ಭಾಗದಲ್ಲಿ ಇದರ ಪ್ರಭಾವ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪ್‌ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ತ್ರಿಪುರ, ಮಿಜೋರಾಂ, ನಾಗಾಲ್ಯಾಂಡ್‌, ಮಣಿಪುರ, ದಕ್ಷಿಣ ಅಸ್ಸಾಂನಲ್ಲಿ ಭಾನುವಾರದವರೆಗೂ ಭಾರೀ ಮಳೆಯಾಗಲಿದೆ. ಜತೆಗೆ, ಕೇರಳ, ಒಡಿಶಾ ಮತ್ತು ಕರ್ನಾಟಕದಲ್ಲಿ ಗುಡುಗು-ಸಿಡಿಲಿನಿಂದ ಕೂಡಿದ ಮಳೆಯಾಗಲಿದೆ ಎಂದೂ ಇಲಾಖೆ ಮುನ್ನೆಚ್ಚರಿಕೆ ನೀಡಿದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next