ಮೊಬೈಲ್ ಫೋನ್‌ಗಳ ಬಗ್ಗೆ ಆಸಕ್ತಿಯಿರುವವರು ಸಾಮಾನ್ಯವಾಗಿ ಮೊಬೈಲ್ ಮಾರಾಟದ ಅಂಗಡಿಗಳ ಮೇಲೆ ವಿವೋ, ಒಪ್ಪೋ ಮೊಬೈಲ್‌ಗಳ ಜಾಹೀರಾತು ಫಲಕಗಳನ್ನು ಗಮನಿಸಿರಬಹುದು. ಎರಡೂ ಅಣ್ಣ ತಮ್ಮಂದಿರ ರೀತಿ ಕಾಣುತ್ತವೆ! ವಾಸ್ತವದಲ್ಲಿ ಇವೆರಡೂ ಅಣ್ಣ ತಮ್ಮಗಳೇ! ಅಂದರೆ, ವಿವೋ- ಒಪ್ಪೋ ಎರಡೂ ಚೀನಾದ ಬಿಬಿಕೆ ಎಲೆಕ್ಟ್ರಾನಿಕ್ಸ್‌ನ ಉತ್ಪನ್ನಗಳು. ಜೊತೆಗೆ ಪ್ರೀಮಿಯಂ ಫೋನ್ ವಿಭಾಗದಲ್ಲಿ ಹೆಸರು ಮಾಡಿರುವ ಒನ್ ಪ್ಲಸ್‌ನ ಮಾತೃಸಂಸ್ಥೆ ಕೂಡ ಬಿಬಿಕೆ.
ವಿವೋ ಕಂಪೆನಿ ಆನ್‌ಲೈನ್ ಮಾರಾಟಕ್ಕಿಂತ ಅಂಗಡಿಗಳ ಮಾರಾಟದಲ್ಲಿ ಹೆಸರು ಮಾಡಿದೆ. ಕೆಲವರಿಗೆ ತಾವು ಕೊಳ್ಳುವ ಮೊಬೈಲನ್ನು ಕಣ್ಣಾರೆ ನೋಡಿ, ಅದನ್ನು ಸ್ಪರ್ಶಿಸಿ ಕೊಳ್ಳುವುದೆಂದರೆ ಇಷ್ಟ. ಭಾರತೀಯರ ಈ ಮನೋಭಾವವನ್ನು ತಿಳಿದಿರುವ ವಿವೋ, ಒಪ್ಪೋ ಆಫ್ಲೈನ್ (ಅಂಗಡಿಗಳಲ್ಲಿ ಮಾರಾಟವಾಗುವ) ಮಾರಾಟಕ್ಕೆ ಒತ್ತು ನೀಡಿವೆ.
ವಿವೋ ಕಂಪೆನಿ, ಇದೀಗ ಭಾರತಕ್ಕೆ ತನ್ನ ಹೊಸ ಮಾಡೆಲ್ ವಿವೋ ವಿ11 ಪ್ರೊ ಅನ್ನು ಬಿಡುಗಡೆ ಮಾಡಿದೆ. ಇದರ ಹೆಗ್ಗಳಿಕೆಯೆಂದರೆ ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನಿಂಗ್. ಅಂದರೆ, ಮೊಬೈಲ್‌ನ ಪರದೆಯ ಮೇಲೆ ನೀವು ಮುಂಚೆಯೇ ದಾಖಲಿಸಿರುವ ಬೆರಳಚ್ಚು ಇಟ್ಟರೆ ಮೊಬೈಲ್ ತೆರೆದುಕೊಳ್ಳುತ್ತದೆ. ಇದು ಇದುವರೆಗೆ ಪರದೆ ಬಿಟ್ಟು ಮೊಬೈಲ್ ಕೆಳಗೆ ಅಥವಾ ಹಿಂಭಾಗ ಇರುತ್ತಿತ್ತು. ಹೊಸ ತಂತ್ರಜ್ಞಾನದಲ್ಲಿ ಪರದೆಯಲ್ಲೇ ಸೆನ್ಸರ್ (ಸಂವೇದಿ) ಇದ್ದು ನಿಮ್ಮ ಬೆರಳಚ್ಚು ಬಿದ್ದಾಕ್ಷಣ ಮೊಬೈಲ್ ಅನ್‌ಲಾಕ್ ಆಗುತ್ತದೆ.
ಇದಲ್ಲದೇ ಮುಖವನ್ನೇ ಪಾಸ್‌ವರ್ಡ್ ಆಗಿಸಿಕೊಳ್ಳುವ ಫೇಸ್ ಅನ್‌ಲಾಕ್ ಸೌಲಭ್ಯ ಕೂಡ ಇದೆ. ಕಂಪೆನಿ ಹೇಳುವ ಪ್ರಕಾರ, ಇದರ ಇನ್‌ಫ್ರಾರೆಡ್ ಲೈಟ್ ಮೂಲಕ ಮಂದ ಬೆಳಕಿನಲ್ಲೂ ಮುಖವನ್ನು ಗುರುತುಹಿಡಿದು ಮೊಬೈಲ್ ತೆರೆಯುತ್ತದೆ. ವಿವೋ ವಿ11 ಪ್ರೊ ಮೊಬೈಲ್‌ನಲ್ಲಿ ಸ್ನಾಪ್‌ಡ್ರಾಗನ್ 660 ಎಂಟು ಕೋರ್‌ಗಳ ಪ್ರೊಸೆಸರ್ ಇದ್ದು, ಇದು ಮಧ್ಯಮ ದರ್ಜೆಯ ಪ್ರೊಸೆಸರ್‌ಗಳಲ್ಲಿ ವೇಗದ್ದಾಗಿದೆ. 6 ಜಿಬಿ ರ್ಯಾಮ್. 64 ಜಿಬಿ ಅಂತರ್ಗತ ಸ್ಟೋರೇಜ್ ಇದೆ. 6.41 ಇಂಚಿನ ಸುಪರ್ ಅಮೋಲೆಡ್ ಫುಲ್ ಎಚ್‌ಡಿ ಪ್ಲಸ್ (2340*1080 ಪಿಕ್ಸೆಲ್ಸ್) 403 ಪಿಪಿಐ, ಸ್ಕ್ರೀನ್ ಇದ್ದು, 19.5:9ರಷ್ಟು ಪರದೆಯ ಅನುಪಾತ ಇದೆ. ಅಂದರೆ ಈ ಮೊಬೈಲ್‌ನಲ್ಲಿ ಅಂಚುಗಳು (ಬೆಜೆಲ್) ಬಹಳ ಕಡಿಮೆ ಅಳತೆಯಲ್ಲಿವೆ. ಪರದೆಯ ಮೇಲೆ-ಕೆಳಗೆ, ಎಡ-ಬಲದಲ್ಲಿ ಸಣ್ಣ ಗೆರೆಯಷ್ಟೇ ಕಾಣುತ್ತದೆ. ದಪ್ಪ ದಪ್ಪ ಅಂಚುಗಳಿಲ್ಲ. ಶೇ. 91.27ರಷ್ಟು ಪರದೆ ಇದೆ. ಹೀಗಾಗಿ ಮೊಬೈಲ್ ಬಹಳ ಸುಂದರವಾಗಿ ಕಾಣುತ್ತದೆ. ಜೊತೆಗೆ ವಾಟರ್‌ಡ್ರಾಪ್ ನಾಚ್ ಡಿಸ್‌ಪ್ಲೇ ಕೂಡ ಇದೆ. ಮೊಬೈಲ್‌ನ ಮೇಲ್ಭಾಗದಲ್ಲಿ ಕ್ಯಾಮರಾ ಜಾಗದಲ್ಲಿ ಮಾತ್ರ, ನೀರಿನ ಹನಿ ಬಿದ್ದಂತೆ ಪರದೆ ಇರುತ್ತದೆ.
ಇದರಲ್ಲಿ ಎರಡು ನ್ಯಾನೋ ಸಿಮ್ ಹಾಕಿಕೊಂಡು ಅದರ ಜೊತೆಗೆ 256 ಜಿಬಿ ಸಾಮರ್ಥ್ಯದವರೆಗೂ ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳಬಹುದು. 12 ಮೆಗಾಪಿಕ್ಸಲ್ +5 ಮೆಗಾಪಿಕ್ಸಲ್ ಡುಯಲ್ ಲೆನ್ಸ್ ಹಿಂಭಾಗದ ಕ್ಯಾಮರಾ ಹಾಗೂ 25 ಮೆಗಾಪಿಕ್ಸಲ್ ಮುಂದಿನ ಕ್ಯಾಮರಾ ಇದೆ. ಮುಂಭಾಗದ ಕ್ಯಾಮರಾ ಡುಯೆಲ್ ಲೆನ್ಸ್ ಅಲ್ಲ.
ವಿವೋ ವಿ11 ಪ್ರೊ, 3400 ಮಿಲಿ ಆ್ಯಂಪ್ ಅವರ್ (ಎಂಎಎಚ್) ಬ್ಯಾಟರಿ ಹೊಂದಿದೆ. ವಿಶೇಷವೆಂದರೆ ಡುಯೆಲ್ ಇಂಜಿನ್ ವೇಗದ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿದ್ದು, ಇದರ ಮೂಲಕ ಬ್ಯಾಟರಿ ಬಹಳ ಬೇಗ ಚಾರ್ಜ್ ಆಗುತ್ತದೆಂದು ಕಂಪೆನಿ ಹೇಳುತ್ತದೆ. ಮೊಬೈಲ್ ಚಾರ್ಜಿಂಗ್ ಪೋರ್r ಮಾತ್ರ ಮಾಮೂಲಿ ಮೈಕ್ರೋ ಯುಎಸ್‌ಬಿ ಆಗಿದೆ. ಇದು ಲೇಟೆಸ್ಟ್ ಆಂಡ್ರಾಯ್ಡ ಓರಿಯೋ ಆಧಾರಿತ ವಿವೋದ ದವರದ್ದೇ ಆದ ಫನ್‌ಟಚ್ 4.5 ಆಪರೇಟಿಂಗ್ ಸಿಸ್ಟಮ್ ಹೊಂದಿದೆ. ಅಂದರೆ, ಫ್ಯೂರ್ ಅಂಡ್ರಾಯ್ಡ ಕಾರ್ಯಾಚರಣೆ ಬದಲು ವಿವೋದವರು ಕೆಲವು ವೈಶಿಷ್ಟéಗಳನ್ನು ಸೇರಿಸಿರುತ್ತಾರೆ.
ವಿವೋ ವಿ11 ಪ್ರೊ. ಭಾರತದಲ್ಲಿ ಅಮೆಜಾನ್, ಫ್ಲಿಪ್‌ಕಾರ್ಟ್ ಹಾಗೂ ಮೊಬೈಲ್ ಅಂಗಡಿಗಳಲ್ಲಿಯೂ ದೊರೆಯುತ್ತಿದೆ. ದರ 25,990 ರೂ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಆರಂಭಿಕ ಕೊಡುಗೆಯಾಗಿ, ಎಚ್‌ಡಿಎಫ್ಸಿ ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಕೊಂಡರೆ 2 ಸಾವಿರ ರೂ. ಕ್ಯಾಶ್‌ಬ್ಯಾಕ್ ದೊರಕುತ್ತದೆ.
-ಕೆ.ಎಸ್. ಬನಶಂಕರ ಆರಾಧ್ಯ