Advertisement

ಮೊಬೈಲ್‌ ಬಳಕೆ ಹೆಚ್ಚಾಗಿ ಪುಸ್ತಕ ಅಭಿರುಚಿ ಕಡಿಮೆ; ನವೀನ್‌ ರೈ

05:42 PM Nov 25, 2022 | Team Udayavani |

ಹುಣಸೂರು: ಮಕ್ಕಳಲ್ಲಿ ಮೊಬೈಲ್‌ ಹೆಚ್ಚಾಗಿ ಸಾಹಿತ್ಯದ ಅಭಿರುಚಿ, ಓದುವ ಹವ್ಯಾಸ ಕಡಿಮೆಯಾಗಿದ್ದು, ಮಕ್ಕಳಲ್ಲಿ ಸಾಹಿತ್ಯ ಚಟುವಟಿಕೆಗಳ ಮೂಲಕ ಪುಸ್ತಕ ಪ್ರೀತಿ ಬೆಳೆಸಲು ಸಾಹಿತ್ಯ ಪರಿಷತ್‌ ಮುಂದಾಗಬೇಕು ಎಂದು ಟ್ಯಾಲೆಂಟ್‌ ವಿದ್ಯಾ ಸಂಸ್ಥೆಯ ಮುಖ್ಯಸ್ಥ ನವೀನ್‌ ರೈ ಅಭಿಪ್ರಾಯಪಟ್ಟರು.

Advertisement

ಕುವೆಂಪು ಮಕ್ಕಳ ಸಾಹಿತ್ಯ ಪರಿಷತ್‌ವತಿಯಿಂದ ನಗರದ ಟ್ಯಾಲೆಂಟ್‌ ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಪರಿಷತ್‌ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಓದಿನಿಂದ ಮಾತ್ರ ಸಾಹಿತ್ಯಾಭಿರುಚಿ ಬೆಳೆಯಲಿದೆ ಎಂಬುದು ಸಾಹಿತಿಗಳ ಅಭಿಮತ ವಾಗಿರುವುದನ್ನು ಪರಿಗಣಿಸಿ ನಮ್ಮ ಶಾಲೆಯಲ್ಲಿ ಪ್ರತಿವರ್ಷ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ ಎಂದರು.

ಮುಂದಿನ ದಿನಗಳಲ್ಲಿ ಮಕ್ಕಳೇ ಸಾಹಿತ್ಯ ಚಟುವಟಿಕೆಗಳ ಪುಸ್ತಕವನ್ನು ಹೊರತರುವ ಪ್ರವೃತ್ತಿ ಬೆಳೆಸಲಾಗುವುದು. ಜೊತೆಗೆ ಶಿಕ್ಷಕರು ಕೂಡ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಬೇಕು. ಈ ನಿಟ್ಟಿನಲ್ಲಿ ಎಲ್ಲ ಶಾಲೆಗಳಲ್ಲೂ ಇಂತಹ ಪ್ರವೃತ್ತಿಯನ್ನು ಮಕ್ಕಳಲ್ಲಿ ಬೆಳೆಸುವಂತಾಗಬೇಕು ಎಂದು ತಿಳಿಸಿದರು.

ಕನ್ನಡದ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸಿ: ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆಗೋಪಾಲ್‌ ಮಾತನಾಡಿ, ಟ್ಯಾಲೆಂಟ್‌ ಸಂಸ್ಥೆಯು ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಶ್ಲಾಘನೀಯ, ಮಕ್ಕಳ ಕನ್ನಡ ಭಾಷೆ ವಿಶ್ವಮಟ್ಟದ ಸತ್ವಯುತ ಭಾಷೆಗಳ ಸಾಲಿನಲ್ಲಿ ಬೆಳಗುವ ಚಿರ ನೂತನ ಭಾಷೆ ನಮ್ಮೆಲ್ಲರ ಅಸ್ತಿತ್ವ ಕನ್ನಡದ ಅಸ್ತಿತ್ವದೊಂದಿಗೆ ಅವಿಭಾಜ್ಯವಾಗಿ ಬೆಸೆದುಕೊಂಡಿದೆ. ಕನ್ನಡದ ಅಸ್ಮಿತೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಾವೆಲ್ಲ ಕಂಕಣಬದ್ಧರಾಗಿ ದುಡಿಯಬೇಕಿದೆ ಎಂದರು.

ಕು.ತನುಜಾ ಮಾತನಾಡಿ, ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆ ಉಳಿಸುವ ಜೊತೆಗೆ ವಿದ್ಯಾರ್ಥಿಗಳು ಪಠ್ಯದೊಂದಿಗೆ ಸಹ ಪಠ್ಯ ಚಟುವಟಿಕೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ಅತ್ಯವಶ್ಯ, ಜೊತೆಗೆ ಪರಿಸರ ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

Advertisement

ವಿವಿಧ ಗೋಷ್ಠಿ; ಗೋಷ್ಠಿಯಲ್ಲಿ ಮಕ್ಕಳು ಸ್ವರಚಿತ ಕವನ ವಾಚಿಸಿದರು. ಕಥಾಗೋಷ್ಠಿಯಲ್ಲಿ ಹತ್ತಾರು ಮಕ್ಕಳು ಭಾಗವಹಿಸಿ ತಮ್ಮೊಳಗಿನ ಪ್ರತಿಭೆ ಪ್ರದರ್ಶಿಸಿದರು.ವೈಭವದ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಮೈಸೂರು-ಮಂಗಳೂರು ಹೆದ್ದಾರಿಯಿಂದ ಡೊಳ್ಳುಕುಣಿತ, ವೀರಗಾಸೆ, ಪೂರ್ಣಕುಂಭದೊಂದಿಗೆ ಹೊರಟ ಸಾಹಿತ್ಯ ಮೆರವಣಿಗೆಗೆ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಚಾಲನೆ ನೀಡಿದರು.

ಮಳೆಯ ಸಿಂಚನದ ನಡುವೆಯೂ ಮೆರವಣಿಗೆಯಲ್ಲಿ ಮಕ್ಕಳು, ಕನ್ನಡ ಪ್ರೇಮಿಗಳು ಸಂತಸದಿಂದ ಹೆಜ್ಜೆ ಹಾಕಿದರು. ಸಮ್ಮೇಳನದಲ್ಲಿ ವಿಶೇಷವಾಗಿ ಗುರುಪುರದ ಅನೇಕ ಟಿಬೇಟಿಯನ್ನರು ಮಕ್ಕಳೊಂದಿಗೆ ಭಾಗವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಎಚ್‌.ಕೆ.ಮಹಾದೇವ್‌ ಮಾತನಾಡಿ, ಕನ್ನಡವೆಂದರೆ ಕೇವಲ ಭಾಷೆಯಷ್ಟೇ ಅಲ್ಲ ಅದು ಒಂದು ಪರಂಪರೆಯ ಜೀವಂತಿಕತೆಯ ಕುರುಹು. ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೇಮವನ್ನು ಉದ್ದೀಪನಗೊಳಿಸಿ ಭರವಸೆಯ ಭವಿಷ್ಯಕ್ಕೆ ಅವರನ್ನು ಸಜ್ಜುಗೊಳಿಸಬೇಕಾದ ಬದ್ಧತೆ ಹಾಗೂ ತುರ್ತು ನಮ್ಮ ಮುಂದಿದೆ ಎಂದರು.

ಕಾರ್ಯಕ್ರಮದಲ್ಲಿ ಟ್ಯಾಲೆಂಟ್‌ ವಿದ್ಯಾಸಂಸ್ಥೆಯ ಅಧ್ಯಕ್ಷ ನಾರಾಯಣ್‌ ರೈ, ನಿರ್ದೇಶಕ ಆರ್‌.ಎನ್‌. ಮಂಜುನಾಥ್‌, ಪ್ರಾಚಾರ್ಯ ಮಂಜುನಾಥ್‌, ಕರವೇ ಅಧ್ಯಕ್ಷ ಪುರುಷೋತ್ತಮ್‌, ರೋಟರಿ ಅಧ್ಯಕ್ಷ ಪಾಂಡುಕುಮಾರ್‌, ಕೆ.ಎಸ್‌.ರೇಣುಕಾಪ್ರಸಾದ್‌, ಡಾ.ಮಾದುಪ್ರಸಾದ್‌, ಎಸ್‌.ಜಯರಾಮ್‌, ಜೆ.ಮಹಾದೇವ್‌ಕಲ್ಕುಣಿಕೆ, ಕೃ.ಪಾ.ಮಂಜುನಾಥ್‌, ಸಾಯಿನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next