ವಿಳಂಬವಾಗಿದೆ. ವಡೆ ನಿಜಕ್ಕೂ ಕಳೆದುಹೋಗಿರುವುದು ಸಾಂಬಾರಿನಲ್ಲಲ್ಲ. ಸುದ್ದಿ ಎಂಬ ಸುನಾಮಿಯಲ್ಲಿ! ಇದು ನಾವು ಮಾಹಿತಿಯೆಂಬ ಭೂತವನ್ನು ಅಗತ್ಯ ಮೀರಿ ನಮ್ಮ ತಲೆ ಮೇಲೆ ಕೂರಿಸಿಕೊಂಡಿರುವುದರ ಪರಿಣಾಮದ ಒಂದು ಚಿತ್ರಣ ಮಾತ್ರ. ನಮ್ಮ ಇಂದಿನ ದಿನಮಾನಗಳಲ್ಲಿ ಇಂಥ ನಿದರ್ಶನಗಳಿಗೆ ಲೆಕ್ಕವಿಲ್ಲ. ಮಾಹಿತಿ ವಿನಿಮಯದ ಭರಾಟೆಯಲ್ಲಿ ನಮ್ಮ ಬಗ್ಗೆ ನಮಗೇ ನಿಗಾ ತಪ್ಪಿದೆ. ಬಸ್ಸನ್ನು
ಹತ್ತುವಾಗ ಅಥವಾ ಇಳಿಯುವಾಗ ಆದ್ಯತೆಯು ಸಂಭಾಷಣೆಗೇ ಪರಂತು ನಮ್ಮ ಜೋಪಾಸನೆಗಲ್ಲ!
Advertisement
ಮೊಬೈಲ್ ಎಂಬ ಅಂಗೈಯಗಲದ ಮಾಯಾ ಸಂದೂಕ ನಮ್ಮ ಆಯತಪ್ಪಿಸುತ್ತಿದೆ. ನಿಜವೇ, ತಪ್ಪಿಸುವುದು ಅದಲ್ಲ ಸ್ವತಃ ನಾವು. ವೃಥಾ ವಿಜ್ಞಾನವನ್ನು ಶಪಿಸುವುದು ಸಲ್ಲ. ಶಪಿಸಬೇಕಾದ್ದು ನಮ್ಮ ಬಳಕೆಯ ವೈಖರಿಯನ್ನು. ಯಾರೇ ವಿಜಾnನಿ ತಾನು ವಿನ್ಯಾಸಗೊಳಿಸಿದ ಉಪಕರಣವನ್ನು ತೋರಿಸಿ “ಇದಕ್ಕೆ ಜೋತು ಬೀಳಿ, ಇದು ಬಿಟ್ಟರೆ ನಿಮಗೆ ಗತಿಯಿಲ್ಲ” ಎಂದು ಹೇಳುವುದಿಲ್ಲ. ಯಂತ್ರಕ್ಕೆ ಅದರದೇ ಆದ ಇತಿಮಿತಿಗಳಿವೆ.
Related Articles
Advertisement
ಅದಕ್ಕೂ ಹೆಚ್ಚಾಗಿ ಈ ವರ್ತನೆ ವೇದಿಕೆಯ ಮೇಲಿನ ಕಲಾವಿದರಿಗೆ ತಮ್ಮ ಕಲಾಪ್ರದರ್ಶನ ನೀಡಲು ಭಾರೀ ಅಡೆತಡೆಯೊಡ್ಡುತ್ತದೆ. ಆಗಮಿಸಿದವರು ನಾವು ಬಂದಿರುವುದು ಕಲಾಸ್ವಾದನೆಗೆ, ಚಿತ್ರೀಕರಣಕ್ಕಲ್ಲ. ಇತರರಿಗಾಗಿ ದೃಶ್ಯಾವಳಿ ಚಿತ್ರೀಕರಿಸಿಕೊಳ್ಳುವ ಭರದಲ್ಲಿ ನಾವೇ ಅವನ್ನು ವೀಕ್ಷಿಸಲಾಗದಂಥ ಸಂದಿಗ್ಧ ತಂದುಕೊಳ್ಳಬಾರದೆಂಬ ಪ್ರಜ್ಞೆ ತಳೆಯಬೇಕು. ಒಂದು ಸಂದರ್ಭ ನೆನಪಾಗುತ್ತಿದೆ. ನಾಟಕ ಮಂದಿರ ಪ್ರವೇಶಿಸುತ್ತಿದ್ದಂತೆ ಹಿರಿಯ ಪ್ರೇಕ್ಷಕರೊಬ್ಬರು ವ್ಯವಸ್ಥಾಪಕರನ್ನು ಪ್ರಶ್ನಿಸಿದ್ದರು; “”ಸಾರ್, ನೀವು ಪ್ರದರ್ಶನಕ್ಕೆ ಮೊದಲು ದಯವಿಟ್ಟು ನಿಮ್ಮ ಮೊಬೈಲು ಸ್ವಿಚ್ ಆಫ್ ಮಾಡಿ ಅನ್ನುತ್ತೀರಿ. ಪ್ರೇಕ್ಷಕರು ಹಾಗೆ ಹೇಳಿಸಿಕೊಳ್ಳದಿರುವಷ್ಟು ಬೆಳೆಯುವುದು ಯಾವಾಗ?!” ಮೊಬೈಲಿನಲ್ಲಿ ಸಣ್ಣ ಪುಟ್ಟ ಮಾಹಿತಿಗಳನ್ನೂ ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ಈ ಪರಿ ಅದರ ಅವಲಂಬನೆಯ ಪರಿಣಾಮವಾಗಿ ನಮ್ಮ ನೆನಪಿನ ಸಾಮರ್ಥ್ಯ ಸೊರಗುತ್ತಿದೆ.
‘ಅತಿ ಸರ್ವತ್ರ ವರ್ಜಯೇತ್’-ಅತಿಯಾಗಿ ಅಮೃತ ಸೇವಿಸಿದರೂ ಅದು ವಿಷವೇ. ಕಿವಿಗೆ ಅಡ್ಡವಾದ ತಂತು, ನೋಟ ಸೆರೆಹಿಡಿಯಲು ಬಳಸುವ ಮೊಬೈಲು ನಮ್ಮ ಸೃಜನಶೀಲತೆಯನ್ನೇ ಬಂದ್ ಮಾಡುತ್ತದೆ. ಮಾನವನ ಕಣ್ಣಿಗಿಂತ ಅನ್ಯ ಕೆಮರಾ ಮತ್ತೂಂದಿಲ್ಲ. ಅಂತೆಯೇ ಕಿವಿಗಿಂತಲೂ ಅಭಿಗ್ರಾಹಕ ಅನ್ಯವಿಲ್ಲ. ವಿಶ್ವಾರೋಗ್ಯ ಸಂಸ್ಥೆ ನಡೆಸಿರುವ ಸಂಶೋಧನೆಗಳು ಮೊಬೈಲಿನ ಬಳಕೆಗೆ ಕಡಿವಾಣ ಹಾಕದಿದ್ದರೆ ಅದು ಹೊರಸೂಸುವ ಮಾರಕ ವಿಕಿರಣಗಳು ಮಿದುಳಿನ ಕ್ಯಾನ್ಸರಿಗೂ ಆಸ್ಪದವಾಗಬಹುದಾಗಿ ವರದಿ ಮಾಡಿದೆ. ಯಾರೂ ಮೊಬೈಲು ಅಥವಾ ಅಂಥ ಅದ್ಭುತ ಆವಿಷ್ಕಾರಗಳನ್ನು ಬಳಸಬೇಡಿ ಎನ್ನುವುದಿಲ್ಲ. ಹೇಳಿ ಕೇಳಿ ವಿಜ್ಞಾನ ಮನುಷ್ಯನ ಬುದ್ಧಿಶಕ್ತಿಯ ಕೂಸು. ಆದರೆ ಅವುಗಳ ಬಳಕೆಗೆ ಲಗಾಮಿರಬೇಕಷ್ಟೆ. ಮೊಬೈಲಿಗೆ ಯಾವಾಗಲೂ ಕಿವಿಗೊಡುತ್ತಿರುವುದಲ್ಲ…ಅದರ ಕಿವಿಯನ್ನು ಹಿಂಡುವ ಎಚ್ಚರ ನಮ್ಮಲ್ಲಿರಬೇಕು. ದೃಢ ಸಂಕಲ್ಪದಿಂದ ಮೊಬೈಲಿನ ವ್ಯಾಮೋಹದಿಂದ ಹೊರಬರಬಹುದು. ಈ ಅಂಶಗಳನ್ನು ಪಾಲಿಸುವುದು ಕಷ್ಟಕರವೇನಲ್ಲ.
1. ಕಡಿಮೆ ಮಾತು, ಹೆಚ್ಚು ಸಂವಹನ ಧ್ಯೇಯವಾಗಿರಲಿ.2.ಮೆಲುಧ್ವನಿಯ ಸಂಭಾಷಣೆ. ಅಕ್ಕ ಪಕ್ಕದವರ ನಡುವೆ ಕುಳಿತು ಏರು ಧ್ವನಿಯಲ್ಲಿ ಮಾತಾಡಿದರೆ ಅವರಿಗೆ ಪುಕ್ಕಟೆ ಮನರಂಜನೆಯಾದೀತಷ್ಟೆ! 3.ಅನಿವಾರ್ಯವಾದಾಗ ಮಾತ್ರ ಮಾತು. ಜಗಳ, ವಾದ ವಿವಾದ ಖಂಡಿತ ಸಲ್ಲದು.
4.ಮಾತು ಸಭ್ಯವೆ, ಸದಭಿರುಚಿಯದೆ ಎಂದು ಮತ್ತೆ ಮತ್ತೆ ಖಾತರಿಪಡಿಸಿಕೊಳ್ಳುವ ಅಗತ್ಯವಿದೆ. ಏಕೆಂದರೆ ಸಂಭಾಷಣೆಯ ಭರದಲ್ಲಿ ಉದ್ವೇಗ, ದ್ವೇಷ ,ಭಾವಾತಿರೇಕ ನುಸುಳಿ ಎಡವಟ್ಟಿಗೆ ಕಾರಣವಾಗಬಹುದು.
5. ನನ್ನಂತೆ ಪರರು, ಪರರಂತೆ ನಾನು ಎನ್ನುವ ಪರಸ್ಪರತೆಗೆ ಪ್ರತಿಷ್ಟೆ, ಅಹಮಿಕೆಯನ್ನು ನಿವಾರಿಸಬಲ್ಲ ಶಕ್ತಿಯಿದೆ.
6. ಮೊಬೈಲಿಗೆ ತಕ್ಕ ಮದ್ದು ಪುಸ್ತಕ. ಕೈಲೊಂದು ಪುಸ್ತಕವಿದ್ದರೆ ಗಮನ ಓದಿನತ್ತ ಹೋಗಿ ಮೊಬೈಲಿನ ಮೋಹ ತಗ್ಗುವುದು.
7.ಹಿತಮಿತವಾಗಿ ಮೊಬೈಲ್ ಬಳಸಿದರೆ ಮೊಬೈಲ್ ಜಾಮರ್ ಅಳವಡಿಕೆಯ ಪ್ರಶ್ನೆಯೇಬಾರದು. ನೆನಪಿರಲಿ, ನಿಮ್ಮಂತೆಯೇ ಇನ್ನೊಬ್ಬರಿಗೂ ಖಾಸಗಿತನ ಎನ್ನುವುದಿದೆ.
*ಬಿಂಡಿಗನವಿಲೆ ಭಗವಾನ್