Advertisement
ಕುಂದಾಪುರ: ಪ್ರಾಣೋತ್ಕ್ರಮಣ ಸ್ಥಿತಿಗೆ ಒಯ್ಯುತ್ತಿದ್ದ ಮೊಬೈಲ್‌ನ ಬ್ಲೂವೇಲ್ ಗೇಮ್ ಭಾರತದಲ್ಲಿ ನಿಷೇಧವಾಗಿದ್ದರೂ ಅದೇ ಮಾದರಿಯಲ್ಲಿ ಅಪಾಯದ ಉಚ್ಛ್ರಾಯದ ಸ್ಥಿತಿಗೆ ಕೊಂಡೊಯ್ಯುವ ಇನ್ನಷ್ಟು ಗೇಮ್‌ಗಳಿವೆ. ಇವು ಮಕ್ಕಳ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿವೆ. ಅಂತಹ ಕೆಲವು ಘಟನೆಗಳು ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ನಡೆದಿದ್ದು, ಶಿಕ್ಷಕರು, ಪೋಷಕರು ಎಚ್ಚೆತ್ತುಕೊಳ್ಳಬೇಕಿದೆ. ಮಾದಕ ದ್ರವ್ಯ ವ್ಯಸನಕ್ಕಿಂತ ಅಧಿಕವಾಗಿ ಮೊಬೈಲ್ ಗೇಮ್ ಬಾಧಿಸುತ್ತಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ಗೇಮ್‌ಗಳ ಕುರಿತು ಮಕ್ಕಳು ‘ಅತಿಯಾಗಿ ಆಡತೊಡಗಿದ್ದರಿಂದ’ ಕೆಲವು ಶಿಕ್ಷಣ ಸಂಸ್ಥೆಗಳು ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಮನಶ್ಯಾಸ್ತ್ರಜ್ಞರನ್ನು ನೇಮಿಸಿಕೊಳ್ಳಲು ಮುಂದಾಗಿವೆ. ಮೊಬೈಲ್ ಗೇಮ್ ವ್ಯಸನಕ್ಕೆ ಒಳಗಾದ ಅನೇಕರು ಮನೋ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿರುವ ಬೆಚ್ಚಿ ಬೀಳಿಸುವ ಅಂಕಿಅಂಶಗಳಿವೆ.
Related Articles
Advertisement
ಗೆಳೆಯರೇ ಪ್ರೇರಣೆಕೆಲವು ಮಕ್ಕಳಿಗೆ ಈ ಗೇಮ್‌ಗಳ ವಿಚಾರ ತಿಳಿದಿಲ್ಲವಾದರೂ ತಿಳಿದಿರುವ ಮಕ್ಕಳೇ ಅವರಿಗೆ ಗುರುಗಳು! ಗೇಮ್ ಚಟ ಅಂಟಿದ ಬಳಿಕ ಮೊಬೈಲ್ ಹಿಡಿದುಕುಟ್ಟತೊಡಗಿದರೆ ಕೆಳಗಿಡುವುದೇ ಇಲ್ಲ. ಇದು ಮಕ್ಕಳ ಮಾನಸಿಕ ಆರೋಗ್ಯ ಮಾತ್ರ ಅಲ್ಲ, ಕಣ್ಣು, ಕಿವಿ, ಕೈ ಬೆರಳು, ಬೆನ್ನು ನೋವಿನಂತಹ ಸಮಸ್ಯೆಗಳು ಉಂಟಾಗಿ ದೈಹಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅನೇಕ ಗೇಮ್‌ಗಳು ಬ್ಲೂವೇಲ್‌ನಂತೆ ಸಾಯುವ ಹಂತದವರೆಗೆ ಕೊಂಡೊಯ್ಯದಿದ್ದರೂ ಮಾನಸಿಕವಾಗಿ ಕೊಲ್ಲುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿವೆ. COC ಗೇಮ್
ಈಗ ಹೆಚ್ಚಾಗಿ ಬಳಕೆಯಲ್ಲಿರುವುದು COC ಗೇಮ್. ಕ್ಲಾಶ್ ಆಫ್ ಕ್ಲಾನ್ಸ್ (COC) ಆನ್‌ಲೈನ್ ಮೂಲಕ ಗುಂಪಾಗಿ ಆಡುವ ಆಟ. ಬಳಗವನ್ನು ಸೃಷ್ಟಿಸುವುದು, ಯುದ್ಧ, ದಾಳಿ ಮಾಡುವುದು, ಕಟ್ಟಡ ರಚಿಸುವುದು, ಚಿನ್ನ ಸಂಪಾದಿಸುವುದು ಹೀಗೆ ಆಟ ಮುಂದುವರಿಯುತ್ತದೆ. ಸೇನೆ, ಶಸ್ತ್ರಾಸ್ತ್ರ ಮೊದಲಾದವು ಇದ್ದು, ಎದುರಾಳಿಯನ್ನು ಹೇಗಾದರೂ ಮಾಡಿ ಕೆಡವಬೇಕು. ಇದು ಮಕ್ಕಳಲ್ಲಿ ಆಕ್ರಮಣಕಾರಿ ಹಾಗೂ ದ್ವೇಷ ಮನೋಭಾವವನ್ನು ಹೆಚ್ಚು ಮಾಡುತ್ತದೆ. ತಡರಾತ್ರಿಯವರೆಗೂ ಮಕ್ಕಳು ನಿದ್ರಾವಿಹೀನರಾಗಿ ಆಡುತ್ತಿರುತ್ತಾರೆ. 50 ಕೋಟಿಗಿಂತ ಅಧಿಕ ಮಂದಿ ಇದನ್ನು ಡೌನ್‌ಲೋಡ್ ಮಾಡಿದ್ದಾರೆ. ಶಟ್ ಕ್ಲಿನಿಕ್: ಬೆಂಗಳೂರಿನಲ್ಲಿ ಈಗ ಅತಿಯಾಗಿ ತಂತ್ರಜ್ಞಾನ ಬಳಸುವವರ ಚಿಕಿತ್ಸೆಗಾಗಿ ಶಟ್ (ಸರ್ವಿಸ್ ಫಾರ್ ಹೆಲ್ದೀ ಯೂಸ್ ಆಫ್ ಟೆಕ್ನಾಲಜಿ ) ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಸಾಫ್ಟ್ವೇರ್ ಕಂಪೆನಿಗಳ ಉದ್ಯೋಗಿಗಳು ಒತ್ತಡ ನಿವಾರಣೆಗೆ ಇಲ್ಲಿ ಮಾನಸಿಕ ತಪಾಸಣೆಗೆ ಒಳಗಾಗುತ್ತಿದ್ದಾರೆ. ಮೊಬೈಲ್‌ಗೆ ಇಂಟರ್ನೆಟ್ ಹಾಕಿಸಬೇಡಿ: ಡಾ| ಭಂಡಾರಿ
ಕೈಯಲ್ಲಿರುವ ಶಕ್ತಿಶಾಲಿ ಆಯುಧದಂತಿರುವ ಮೊಬೈಲ್ ನಮ್ಮ ಸಂಸ್ಕೃತಿಯ ಮೇಲೆ ದಾಳಿ ಮಾಡುತ್ತಿದೆ. ಮಕ್ಕಳಷ್ಟೇ ಅಲ್ಲ, ಅಪ್ಪ ಅಮ್ಮಂದಿರು, ಮನೆಮಂದಿಯೆಲ್ಲ ಹಾಳಾಗುತ್ತಿದ್ದಾರೆ. ಮಕ್ಕಳಿಗೆ ಮೊಬೈಲ್‌ನಲ್ಲಿ ವಯೋಮಾನದ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿಗಳು ತುಂಬಿ ತುಳುಕಿ ಅಪಕ್ವವಾದ ಮನಸ್ಸಿಗೆ ಮಾರಕವಾದ ವಿಷಯಗಳು ತುಂಬುತ್ತಿವೆ. ಕುತೂಹಲಕಾರಿ ಮನಸ್ಸು ಪ್ರಯೋಗ ಮಾಡಲು ಪ್ರಯತ್ನಿಸುತ್ತದೆ. ಸೋಶಿಯಲ್ ಮೀಡಿಯಾ ಬಳಕೆಯ ಪರಿಣಾಮ ಊಹೆಗೂ ನಿಲುಕದಾಗಿದೆ. ಹಾಗಾಗಿ ಮೊಬೈಲ್ ಬಳಕೆ ಕಡಿಮೆ ಮಾಡಿ. ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕಿ. ಸಾಮಾಜಿಕ ಜಾಲತಾಣಗಳಿಂದ ದೂರವಿರಲು ಯತ್ನಿಸಿ.
– ಡಾ| ಪಿ.ವಿ. ಭಂಡಾರಿ, ಮನೋವೈದ್ಯರು, ಉಡುಪಿ ಅತಿಯಾದರೆ ಅಮೃತವೂ ವಿಷ
ಮೊಬೈಲ್ ಅಗತ್ಯವಿದ್ದಷ್ಟೇ ಬಳಸಿ. ಪಠ್ಯಪೂರಕ ಚಟುವಟಿಕೆಗೆ, ಮಾಹಿತಿ ಸಂಗ್ರಹಕ್ಕೆ, ಅನಿವಾರ್ಯಕ್ಕಾಗಿ ಮಾತ್ರ ಮಕ್ಕಳು ಮೊಬೈಲ್ ಬಳಸುವಂತೆ ಪೋಷಕರು ನೋಡಿಕೊಳ್ಳಬೇಕು. ಮಕ್ಕಳ ಮೊಬೈಲ್ ಬಳಕೆಯ ಮೇಲೆ ಆಗಾಗ ಕಣ್ಣಾಡಿಸುತ್ತಿರಬೇಕು. ಮಕ್ಕಳಿಗೆ ಸುಲಭದಲ್ಲಿ ಉಪಯೋಗಕ್ಕೆ ದೊರೆಯದಂತೆ ಮೊಬೈಲ್‌ಗೆ ಲಾಕ್ ಹಾಕಿಡಿ ಎಂದು ಪೋಷಕರ ಸಭೆಯಲ್ಲಿ ಹೇಳಲಾಗಿದೆ. ಪ್ರತಿ ಮನೆಗೆ ವೈಯಕ್ತಿಕ ಪತ್ರ ಕೂಡ ಬರೆಯಲಾಗಿದೆ.
– ಕೃಷ್ಣ ಅಡಿಗ, ಮುಖ್ಯೋಪಾಧ್ಯಾಯರು, ವೆಂಕಟರಮಣ ಆಂಗ್ಲಮಾಧ್ಯಮ ಪ್ರೌಢಶಾಲೆ, ಕುಂದಾಪುರ — ಲಕ್ಷ್ಮೀ ಮಚ್ಚಿನ