Advertisement

Mobile; ಆ ಮಾಯೆಯ ಸೆಳೆತ ಅಪಾಯಕ್ಕೆ ನಾಂದಿ

12:05 AM Dec 07, 2023 | Team Udayavani |

ಯುವಕನೊಬ್ಬ ದುಬಾರಿ ಸ್ಮಾರ್ಟ್‌ ಫೋನನ್ನು ಆನ್‌ಲೈನ್‌ ಮೂಲಕ ಖರೀದಿಸಲು ಮುಂದಾಗಿದ್ದ. ನಿಗದಿತ ದಿನಕ್ಕೆ ಮೊಬೈಲ್‌ ಆ ಯುವಕನ ಮನೆಗೆ ಬಂದಿತ್ತು. ಡೆಲಿವರಿ ನೀಡಲು ಬಂದಿದ್ದು ಇನ್ನೊಬ್ಬ ಯುವಕ. ಇಬ್ಬರೂ ಜೀವನದ ಮುಂಜಾನೆ ಯಲ್ಲಿದ್ದವರು. ಫೋನ್‌ಗೆ ಆರ್ಡರ್‌ ಮಾಡಿದಾತ ನಲ್ಲಿ ಪಾವತಿಸಲು ಹಣ ಇರಲಿಲ್ಲ. ಆತ ಆನ್‌ಲೈನ್‌ನಲ್ಲಿ ಕಾದಿರಿಸುವ ಹೊತ್ತಿಗೆ ಹಣ ಪಾವತಿಸಿರಲಿಲ್ಲ. ಡೆಲಿವರಿ ಬಾಯ್‌ಗೆ ಕೊಡಲು ಈತನಲ್ಲಿ ಹಣ ಇರಲಿಲ್ಲ. ಹಾಗೆಂದು ಮನೆ ಬಾಗಿಲಿಗೆ ಬಂದಿರುವ ಆಕರ್ಷಕ ಮೊಬೈಲ್‌ ಅನ್ನು ವಾಪಸ್‌ ಕಳುಹಿಸಲೂ ಮನಸ್ಸು ಕೇಳಲಿಲ್ಲ. ಆತನ ವಿವೇಕವನ್ನು ಮೂರ್ಖತನ ನುಂಗಿ ಹಾಕಿತ್ತು. ಹಿಂದುಮುಂದು ನೋಡದೆ ಡೆಲಿವರಿ ಬಾಯ್‌ನನ್ನು ಚೂರಿಯಿಂದ ಇರಿದು ಕೊಂದು ಶವವನ್ನು ಏನು ಮಾಡಬೇಕು ಎಂದು ಅರಿಯದೆ ಮನೆಯಲ್ಲೇ ಇರಿಸಿಕೊಂಡ. ಕಾಲ ಮಿಂಚಿ ಹೋಗಿತ್ತು. ಆಗಬಾರದ್ದು ಘಟಿಸಿ ಹೋಗಿತ್ತು. ಎರಡೂ¾ರು ದಿನಗಳಲ್ಲಿ ಎಲ್ಲವೂ ಬಹಿರಂಗವಾಗಿ ಆರೋಪಿ ಜೈಲು ಪಾಲಾದ.

Advertisement

ಇಲ್ಲೊಬ್ಬ ಯುವಕನ ಮೊಬೈಲ್‌ ಕೆಟ್ಟಿತ್ತು. ಹೊಸ ಮೊಬೈಲ್‌ ಕೊಡಿಸಲು ಮನೆಯಲ್ಲಿ ದುಂಬಾಲು ಬಿದ್ದಿದ್ದ. ಮನೆಯವರು ಅನುಕೂಲಸ್ಥರೇನೂ ಆಗಿರಲಿಲ್ಲ. ಒಂದೆರಡು ತಿಂಗಳು ಹೋಗಲಿ. ಮೊಬೈಲ್‌ ಕೊಡಿಸೋಣ ಎಂದರು. ಇಲ್ಲ, ಈಗಲೇ ಬೇಕು ಎಂದು ಯುವಕ ಹಠ ಹಿಡಿದ. ಮೊಮ್ಮಗನ ಹಠ ಕಂಡು ಅಜ್ಜನೂ ಸಂತೈಸಲು ಮುಂದಾದ. ಈ ಬಾರಿ ಉತ್ತಮ ಬೆಳೆ ಬಂದಿದೆ. ಫ‌ಸಲನ್ನು ಕೊಯ್ದು ಮಾರುಕಟ್ಟೆಗೆ ಹಾಕಿದ ಕೂಡಲೇ ನಿನಗೆ ಮೊಬೈಲ್‌ ಕೊಡಿಸುತ್ತೇನೆ ಎಂದು ಹಿರಿಜೀವ ಮೊಮ್ಮಗನಿಗೆ ಹೇಳಿತು. ಆದರೆ ಅಷ್ಟು ದಿನ ಕಾಯಲೂ ಯುವಕ ನಿಗೆ ತಾಳ್ಮೆ ಇರಲೇ ಇಲ್ಲ. ಜೀವನದಲ್ಲಿ ಇನ್ನು ಏನೂ ಇಲ್ಲ, ನಾನು ಬದುಕಿರುವುದೇ ವ್ಯರ್ಥ ಎಂದು ಆತನ ಹುಚ್ಚು ಮನಸ್ಸು ಹೇಳಲಾರಂಭಿಸಿತೋ ಏನೋ – ಅಂತೂ ಒಂದು ದಿನ ಆತ ಮನೆಯಲ್ಲೇ ನೇಣಿಗೆ ಶರಣಾದ!

ಇವೆರಡು ದೂರದಲ್ಲೆಲ್ಲೋ ನಡೆದ ಘಟನೆ ಗಳಲ್ಲ. ನಮ್ಮ ರಾಜ್ಯದಲ್ಲೇ ಆಗಿರುವಂಥದ್ದು. ಇನ್ನೂ ಬಾಳಿ ಬದುಕಬೇಕಾಗಿದ್ದ ಇಬ್ಬರು ಸಾವಿನ ಮನೆ ಸೇರಿದರು, ಮತ್ತೂಬ್ಬ ಜೈಲು ಪಾಲಾದ. ಈ ಮೂವರ ಮನೆಯವರು ಕಣ್ಣೀರಿನಲ್ಲೇ ಕೈತೊಳೆ ಯುವುದು ಅನಿವಾರ್ಯವಾಗಿದೆ. ಇಂಥ ಅನೇಕ ಘಟನೆಗಳು ಆಗಾಗ ಸುದ್ದಿಯಾಗುತ್ತಲೇ ಇವೆ, ಹಾಗೆಂದು ಇದಕ್ಕೆ ಹೊಣೆ ಮಾಡುವುದು ಯಾರನ್ನು?

ಮಾಯಾಜಾಲ
ಮೊಬೈಲ್‌ ಎಂಬುದು ಈಗಿನ ಯುವ ಜನಾಂಗ ವನ್ನು ಸೆಳೆಯುತ್ತಿರುವ ಒಂದು ಮಾಯಾಜಾಲ. ದುಬಾರಿ ಮೊಬೈಲ್‌ ಒಂದಿದ್ದರೆ ಸಾಕು – ಬದುಕು ಸಂತೋಷಮಯ ಎಂದು ಭಾವಿಸುವುದು ಈ ಯುವಸಮುದಾಯ ಮಾಡುವ ಮೊದಲ ತಪ್ಪು. ಮೊಬೈಲ್‌ ಗೀಳಿಗೆ ಬಿದ್ದವರು ಅದರಿಂದ ಸುಲಭವಾಗಿ ಹೊರ ಬರುವುದು ಸಾಧ್ಯವಾಗುತ್ತಿಲ್ಲ. ಹಾಗಾದರೆ ಈ ಗೀಳಿಗೆ ಬೀಳುವುದಾದರೂ ಹೇಗೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಅದಕ್ಕೆ ನಮ್ಮ ಸುತ್ತಲಿನ ವ್ಯವಸ್ಥೆ ಹಾಗೂ ಪರಿಸರ ಪ್ರಮುಖ ಕಾರಣವಾಗಿದ್ದರೂ ನಾವು ವಿವೇಕ ಮರೆತು ವರ್ತಿಸುವುದೇ ಪರಿಸ್ಥಿತಿ ಈ ಮಟ್ಟಕ್ಕಿಳಿಯಲು ಕಾರಣ.

ಮೊಬೈಲ್‌ ಶೂರ ನಮ್ಮ ಮಗ
ನನ್ನ ಮಗನಿಗೆ ಮೊಬೈಲ್‌ ಬಗ್ಗೆ ಎಲ್ಲವೂ ಗೊತ್ತಿದೆ. ಆತನಿನ್ನೂ ಪ್ರಾಥಮಿಕ ಶಾಲೆಯ ಹುಡುಗ. ಆದರೆ ಮೊಬೈಲ್‌ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾನೆ. ನಾನು ಏನು ಸಂಶಯ ಬಂದರೂ ಆತನಲ್ಲೇ ಕೇಳ್ಳೋದು. ಈಗಿನ ಮಕ್ಕಳು ಎಷ್ಟು ಬುದ್ಧಿವಂತರಿದ್ದಾರಲ್ವ? ಹೀಗೆ ಹೇಳುವ ಹೆತ್ತವರು ನಮ್ಮಲ್ಲಿ ಸಾಕಷ್ಟು ಮಂದಿಯಿದ್ದಾರೆ. ಪುಟ್ಟ ಮಕ್ಕಳು ಮೊಬೈಲ್‌ನಲ್ಲೇ ಕಾಲ ಕಳೆಯು ವುದು, ಅದರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವುದು ಒಂದು ಸಾಧನೆ ಎಂದು ಭಾವಿಸುವ ಹೆತ್ತವರಿಗೆ, ಮುಂದೆ ಇದು ಗೀಳಾಗಿ ನಮ್ಮ ಮಕ್ಕಳು ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ, ಅವರ ಬುದ್ಧಿವಂತಿಕೆಗಳೆಲ್ಲ ಮೊಬೈಲ್‌ನಲ್ಲಿ ಕರಗಿ ಹೋಗುತ್ತದೆ ಎಂಬ ಕಟುಸತ್ಯ ಸದ್ಯಕ್ಕೆ ಅರ್ಥವಾಗುವುದಿಲ್ಲ.

Advertisement

ಎಲ್ಲದಕ್ಕೂ ಮೊಬೈಲೇ ಆಧಾರ
ಈಗಿನ ಮಕ್ಕಳು ಶಾಲೆಯ ಅಸೈನ್‌ಮೆಂಟ್‌ ಮಾಡಬೇಕಾದರೆ ಹೆತ್ತವರ ಮೊಬೈಲ್‌ ಅವರಿಗೆ ಬೇಕೇ ಬೇಕು. ಸ್ವಂತ ಆಲೋಚನೆಯ ಆಯ್ಕೆಯನ್ನೇ ಮೂಲೆಗೆ ಸರಿಸುವ ಈ ಮಕ್ಕಳು ಅಸೈನ್‌ಮೆಂಟ್‌ನ ಮುಖಪುಟ ಇರಬಹುದು, ಮಾಹಿತಿ ಸಂಗ್ರಹ ಇರಬಹುದು.. ಹೀಗೆ ಎಲ್ಲದಕ್ಕೂ ಮೊಬೈಲ್‌ ಮೂಲಕ ಗೂಗಲ್‌ ಅನ್ನೇ ಆಶ್ರಯಿಸುತ್ತಾರೆ. ಹಾಗೆ ಮಾಡುವುದು ತಪ್ಪು ಎಂದು ಹೇಳಬೇಕಾದ ಹೆತ್ತವರು ಕೂಡ, ತಾವು ಉತ್ತರ ಹೇಳುವ ಸಮಸ್ಯೆ ತಪ್ಪುತ್ತದಲ್ಲ ಎಂದು ಸುಲಭವಾಗಿ ಮೊಬೈಲ್‌ ಕೊಟ್ಟು ಕೈತೊಳೆದು ಕೊಳ್ಳುತ್ತಾರೆ. ಹೆಚ್ಚೇಕೆ, ಟಿವಿಯನ್ನು ಕೂಡ ಮೊಬೈಲ್‌ ನಲ್ಲೇ ನೋಡುವ ಮಕ್ಕಳೂ ಹೆಚ್ಚಾಗು ತ್ತಿದ್ದಾರೆ. ಹಿರಿಯರು ಸೀರಿಯಲ್‌ ನೋಡುವ ಹೊತ್ತಿನಲ್ಲಿ ಮಕ್ಕಳು ಮೊಬೈಲ್‌ನಲ್ಲಿ ಕಾಟೂìನ್‌ ನೋಡುತ್ತಾರೆ. ಇದೆಲ್ಲವೂ ಪರೋಕ್ಷವಾಗಿ ನಾವು ನಮ್ಮವರನ್ನು ಮೊಬೈಲ್‌ ಗೀಳಿಗೆ ತಳ್ಳುವವಂತಾಗಿದೆ.

ಪುಟ್ಟ ಮಗುವಿನ ಊಟಕ್ಕೂ ಮೊಬೈಲ್‌ ಸಂಗಾತಿ
ಮೊಬೈಲ್‌ ಕೈಯಲ್ಲಿ ಕೊಟ್ಟುಬಿಟ್ಟರೆ ಸಾಕು – ಮಗು ತಕರಾರು ಮಾಡದೆ ಕೊಟ್ಟದ್ದನ್ನೆಲ್ಲ ತಿನ್ನುತ್ತದೆ. ಹಾಗೆ ಮಗುವಿಗೆ ಊಟ ಮಾಡಿಸಲು ನನಗೆ ದೊಡ್ಡ ಕಷ್ಟ ವೇನಿಲ್ಲ. ಜತೆಗೆ ಆಚೀಚೆ ಕೆಲಸ ಮಾಡುವಾಗಲೂ ಮೊಬೈಲ್‌ ಅನ್ನು ಮಗುವಿನ ಕೈಯಲ್ಲಿ ಕೊಟ್ಟರೆ ಸಾಕು. ಅದರಲ್ಲಿ ಆಟವಾಡುತ್ತಾ ಇರುತ್ತದೆ ಎಂದು ಹೇಳು ವವರಿಗೂ ನಮ್ಮಲ್ಲಿ ಕೊರತೆಯಿಲ್ಲ. ಮೊಬೈಲ್‌ ಹೊರ ಸೂಸುವ ವಿಕಿರಣವು ಪುಟ್ಟ ಮಕ್ಕಳಿಗೆ ತುಂಬಾ ಅಪಾಯಕಾರಿ ಎಂದು ನಮ್ಮ ವೈದ್ಯಲೋಕ ಎಷ್ಟು ಹೇಳಿಕೊಂಡರೂ ಅದರ ಬಗ್ಗೆ ಗಮನ ಹರಿಸುವವರು ತೀರಾ ಕಡಿಮೆ. ಅದೆಲ್ಲ ಹೇಳಲು ಮಾತ್ರ, ಪಾಲಿಸಲು ಕಷ್ಟ ಎನ್ನುವ ಮಾತು ನಮ್ಮ ನಡುವಿನ “ಬುದ್ಧಿವಂತ’ ಹೆತ್ತವರಿಂದ ಕೇಳಿ ಬರುತ್ತದೆ. ಹೀಗೆ ಬೆಳೆಯುವಾಗಲೇ ಮೊಬೈಲ್‌ ಚಟ ಅಂಟಿಸಿಕೊಳ್ಳುವ ಮಕ್ಕಳು ಮುಂದಿನ ದಿನಗಳಲ್ಲಿ ಯಾವ ರೀತಿ ಬದಲಾಗು ತ್ತಾರೆ ಎಂಬುದನ್ನು ಸದ್ಯಕ್ಕಂತು ಊಹಿಸಲೇ ಕಷ್ಟ.

ಏನು ಮಾಡಬಹುದು?
ನಮ್ಮ ಮಕ್ಕಳನ್ನು ಮೊಬೈಲ್‌ ಆಕರ್ಷಣೆಯಿಂದ ದೂರ ಇರಿಸಲು ನಾವು ಮುಂದಾಗಬೇಕೇ ಹೊರತು ಆ ಜವಾಬ್ದಾರಿಯನ್ನು ಮಕ್ಕಳಿಗೆ ಹೊರಿಸುವುದಲ್ಲ. ಮಕ್ಕಳಿಗೆ ಸುಲಭವಾಗಿ ಮೊಬೈಲ್‌ ಸಿಗದಂತೆ ಮಾಡು ವುದು, ಯಾವುದೇ ಕಾರಣಕ್ಕೂ ಮಕ್ಕಳಿಗೆ ಮೊಬೈಲ್‌ ಪಾಸ್‌ವರ್ಡ್‌ ತಿಳಿಸದೆ ಇರುವುದು, ಅತೀ ಅಗತ್ಯವಿದ್ದರೆ ಹೆತ್ತವರೇ ಪಾಸ್‌ವರ್ಡ್‌ ಹಾಕಿ ಕೊಡುವುದು, ಮನೆಯಲ್ಲಿ ತುರ್ತು ಬಳಕೆಗಾಗಿ ಸ್ಮಾರ್ಟ್‌ ಫೋನ್‌ ಬದಲಿಗೆ ಹಳೆಯ ಕೀಬೋರ್ಡ್‌ ಮೊಬೈಲ್‌ ಇರಿಸು ವುದು ಇತ್ಯಾದಿಗಳೆಲ್ಲ ತೋರಿಕೆಗೆ ಸಾಮಾನ್ಯ ಸಂಗತಿ ಯಾಗಿ ಕಾಣಬಹುದು. ಆದರೆ ಒಮ್ಮೆ ಹೀಗೆ ಮಾಡಿ ನೋಡಿದಾಗಲೇ ಇದರ ಮಹತ್ವ ನಮಗೆ ತಿಳಿಯುತ್ತದೆ. ನಮ್ಮ ಮಕ್ಕಳು ಮೊಬೈಲ್‌ಗೆ ಎಷ್ಟು ದಾಸರಾಗಿದ್ದಾರೆ ಎಂಬುದು ಕೂಡ ಆಗ ನಮಗೆ ಸ್ಪಷ್ಟವಾಗುತ್ತದೆ. ಮಕ್ಕಳು ಮೊಬೈಲ್‌ ಬಳಸುವಾಗ ನಾವು ಎಷ್ಟು ಜಾಗರೂಕರಾಗಿದ್ದರೂ ಸಾಕಾಗುವುದಿಲ್ಲ. ಅತಿಯಾದ ಮೊಬೈಲ್‌ ಚಾಳಿಯು ನಮ್ಮ ಬುದ್ಧಿವಂತ ಮಕ್ಕಳನ್ನು ದಡ್ಡರಾಗಿಸುತ್ತದೆ. ಅತಿಯಾದರೆ ಅಮೃತವೂ ವಿಷ ಎಂಬ ಹಳೆ ಮಾತಿನಂತೆ ಮೊಬೈಲ್‌ ಬಳಕೆ ಮಿತಿ ಮೀರಿದರೆ ನಮ್ಮ ಮಕ್ಕಳನ್ನು ನಾವೇ ಸಮಸ್ಯೆಗೆ ದೂಡಿದಂತೆ. ಆದ್ದರಿಂದ ಮಕ್ಕಳು ನಮ್ಮ ನಿಯಂತ್ರಣ ದಲ್ಲಿ ಇರುವಷ್ಟು ಕಾಲ ಅವರ ಮೊಬೈಲ್‌ ಬಳಕೆಯ ಮೇಲೂ ನಾವು ನಿಯಂತ್ರಣ ಹೇರುವುದು ತುಂಬಾ ಅಗತ್ಯ.

ಪುತ್ತಿಗೆ ಪದ್ಮನಾಭ ರೈ

Advertisement

Udayavani is now on Telegram. Click here to join our channel and stay updated with the latest news.

Next