ಕೊಪ್ಪಳ: ಗ್ರಾಮೀಣ ಭಾಗದ ಮಹಿಳೆಯರಿಗೆ ಸರ್ಕಾರದ ಸಹಾಯಧನದಲ್ಲಿ ಮೊಬೈಲ್ ಕ್ಯಾಂಟೀನ್ ಆರಂಭಕ್ಕೆ ಅವಕಾಶ ಕಲ್ಪಿಸಿರುವುದು ಸಂತಸ ತರಿಸಿದೆ. ಇದು ಅವರ ಬದುಕಿಗೆ ತುಂಬ ಸಹಕಾರಿಯಾಗಲಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತ, ಜಿಪಂ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಸ್ವ-ಸಹಾಯ ಸಂಘದ ಮಹಿಳೆಯರಿಂದ ಆರಂಭಗೊಂಡ ಸಂಜೀವಿನಿ ಮೊಬೈಲ್ ಕ್ಯಾಂಟಿನ್‌ಗೆ ಜಿಲ್ಲಾಡಳಿತ ಕಚೇರಿ ಎದುರು ಚಾಲನೆ ನೀಡಿ ಅವರು ಮಾತನಾಡಿದರು.
ಡಿಸಿ ವಿಕಾಸ್ ಕಿಶೋರ್ ಸುರಳ್ಕರ್ ಮಾತನಾಡಿ, ಆರೋಗ್ಯ ಮತ್ತು ಶುಚಿತ್ವದ ಬಗ್ಗೆ ಹೆಚ್ಚು ಪ್ರಾಮುಖ್ಯತೆಕೊಟ್ಟು ಉತ್ತಮ ಗುಣಮಟ್ಟದ ಉಪಾಹಾರ ತಯಾರಿಸಲು ಸಲಹೆ ನೀಡಿದರು. ಜಿಪಂ ಸಿಇಒ ಫೌಜಿಯಾ ತರುನ್ನಮ್ ಮಾತನಾಡಿ, ಮಿಷನ್ 35 ಅಡಿಯಲ್ಲಿ ಪ್ರತಿ ತಾಲೂಕಿನಲ್ಲಿ 5 ವಿಭಿನ್ನ ಚಟುವಟಿಕೆಗಳನ್ನು ಅನುಷ್ಠಾನ ಮಾಡಲು ಯೋಜನೆ ರೂಪಿಸಲಾಗಿತ್ತು. ಅದರಂತೆ ಇಂದು ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಪಂನ ಸ್ವ-ಸಹಾಯ ಗುಂಪಿನ ಮಹಿಳೆಯರಿಂದ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲಾಗುತ್ತಿದೆ. ಜಿಲ್ಲೆಯಲ್ಲಿ ಬೇರೆ-ಬೇರೆ ಒಕ್ಕೂಟಗಳಿಂದ ಸಂಜೀವಿನಿ ಕೆಫೆ, ಹೈವೆ ಹಬ್, ಸ್ಯಾನಿಟರ್ ಪ್ಯಾಡ್ ಘಟಕ ಇತ್ಯಾದಿಗಳನ್ನು ಅನುಷ್ಠಾನ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಕೊಪ್ಪಳ ತಾಪಂ ಇಒ ಕೆ.ಎಂ ಮಲ್ಲಿಕಾರ್ಜುನ್ ಮಾತನಾಡಿದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ಹೇಮಂತ್ ಕುಮಾರ್, ಎಡಿಸಿ ಎಂ.ಪಿ. ಮಾರುತಿ, ಜಿ.ಪಂ. ಉಪ ಕಾರ್ಯದರ್ಶಿ ಶರಣಬಸವರಾಜ, ಯೋಜನಾ ನಿರ್ದೇಶಕ ಟಿ. ಕೃಷ್ಣಮೂರ್ತಿ, ತಾ.ಪಂ. ಸಹಾಯಕ ನಿರ್ದೇಶಕಿ ಕೆ. ಸೌಮ್ಯ, ಸಂಜೀವಿನಿ ಯೋಜನೆಯ ವ್ಯವಸ್ಥಾಪಕ ಸಂಗಮೇಶ ಪಾಟೀಲ್ ಸೇರಿದಂತೆ ಜಿಲ್ಲಾ ಮತ್ತು ತಾಪಂ ಸಿಬ್ಬಂದಿ, ಶ್ರೀನಿಧಿ ಸಂಜೀವಿನಿ ಗಾಪಂ ಮಟ್ಟದ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.