ನವದೆಹಲಿ: ದೇಶಾದ್ಯಂತ ಸಾಮೂಹಿಕವಾಗಿ ಬಡಿದು ಸಾಯಿಸುವ ದುಷ್ಕೃತ್ಯಗಳು (ಲಿಂಚಿಂಗ್) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತಿರುವ ಕೇಂದ್ರ ಸರ್ಕಾರವು ವಾಟ್ಸ್‌ಆ್ಯಪ್‌ಗೆ ಗುರುವಾರ ಮತ್ತೂಂದು ನೋಟಿಸ್ ನೀಡಿದೆ. ಸಂದೇಶಗಳನ್ನು “ಫಾರ್ವರ್ಡೆಡ್’ ಎಂದು ಸೂಚಿಸುವ ಫೀಚರ್ ಹೊರತು ಪಡಿಸಿ ಬೇರೇನು ಕ್ರಮ ಕೈಗೊಂಡಿದ್ದೀರಿ ಎಂದೂ ಪ್ರಶ್ನಿಸಿದೆ. ದುಷ್ಕೃತ್ಯಕ್ಕೆ ಪ್ರೇರಣೆ ನೀಡುತ್ತಿರುವ ವದಂತಿಗಳು ಹರಡಲು ವಾಟ್ಸ್‌ಆ್ಯಪ್ ವೇದಿಕೆಯಾಗಿದೆ. ಇಂತಹ ಸುಳ್ಳು ಸುದ್ದಿಗಳು ಹರಡುವುದನ್ನು ತಡೆಯಲು ಪರಿಹಾರ ಹುಡುಕಬೇಕು. “ಮೌನ ಪ್ರೇಕ್ಷಕ’ ಧೋರಣೆಯನ್ನು ಮುಂದುವರಿ ಸಿದರೆ ಕಾನೂನು ಕ್ರಮದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಸುಳ್ಳು ಸುದ್ದಿಗಳ ಪ್ರಸರಣವಾಗದಂತೆ ತಡೆಗಟ್ಟಲು ಪಾರದರ್ಶಕ ಹಾಗೂ ಪರಿಣಾಮಕಾರಿ ನಿಯಮಾವಳಿಗಳನ್ನು ರೂಪಿಸಲು ಆದ್ಯತೆ ನೀಡಬೇಕು ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಇದಕ್ಕೂ ಮುನ್ನ ಸುಳ್ಳು ಸಂದೇಶ ಹರಡುವುದನ್ನು ತಡೆಯಲು ಕ್ರಮ ವಹಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಫೇಸ್‌ಬುಕ್ ಮಾಲಿಕತ್ವದ ವಾಟ್ಸ್‌ಆ್ಯಪ್, ಇಂತಹ ಸಂದೇಶ ಕಳುಹಿಸುವವರ ಗುರುತು ಪತ್ತೆಗೆ ಹೊಸ ಫೀಚರ್ ಅಳವಡಿಸುವುದಾಗಿ ಘೋಷಿಸಿತ್ತು.
ಇದೇ ವೇಳೆ, ಸಾಮಾಜಿಕ ಮಾಧ್ಯಮದ ದುರ್ಬಳಕೆ ಕುರಿತು ರಾಜಕೀಯ ಪಕ್ಷಗಳೂ ಸೇರಿದಂತೆ ಸಂಬಂಧಿಸಿದವರ ಜೊತೆಗೆ ಮಾತುಕತೆ ನಡೆಸಲಾಗುತ್ತದೆ ಎಂದು ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ. ಚರ್ಚೆ ನಡೆಸಿ ಸಾಮಾಜಿಕ ಮಾಧ್ಯಮದ ದುರ್ಬಳಕೆ ತಡೆಗೆ ನೀತಿ ರೂಪಿಸಲಾಗುತ್ತದೆ ಎಂದಿದ್ದಾರೆ.
ಫಾರ್ವರ್ಡೆಡ್ ಸಂದೇಶದ ಫೀಚರ್ ಬಿಟ್ಟರೆ ಬೇರೇನು ಮಾಡಿದಿರಿ ಎಂದು ಪ್ರಶ್ನೆ
ಮೂಕ ಪ್ರೇಕ್ಷಕ ಧೋರಣೆ ಮುಂದುವರಿಸಿದರೆ ಕಠಿಣ ಕ್ರಮದ ಎಚ್ಚರಿಕೆ