Advertisement

ಮೊವಾಡಿ –ನಾಡ ಸೇತುವೆ: 2020ರ ಮೇ ಒಳಗೆ ಪೂರ್ಣ

11:01 PM Oct 21, 2019 | Sriram |

ಕುಂದಾಪುರ: ನಾಡದಿಂದ ತ್ರಾಸಿಗೆ ಸಂಪರ್ಕಿಸುವ ಮೊವಾಡಿ ಬಳಿ ಸೌಪರ್ಣಿಕಾ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷದ ಮೇಯೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ದಿಂದ ಮಂಜೂರಾದ 9.28 ಕೋ.ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ.

Advertisement

ತ್ರಾಸಿ ಹಾಗೂ ನಾಡ ಗ್ರಾಮಗಳನ್ನು ಬೆಸೆಯುವ ಸಂಪರ್ಕ ಸೇತುವೆಗೆ ಕಳೆದ ವರ್ಷ ಶಿಲಾನ್ಯಾಸ ನೆರವೇರಿಸಿದ್ದರೂ, ಕಾಮಗಾರಿ ಈ ವರ್ಷದ ಮಾರ್ಚ್‌ನಲ್ಲಿ ಆರಂಭಗೊಂಡಿತ್ತು. ಮಳೆ ಹಾಗೂ ಮರಳು ಸಮಸ್ಯೆಯಿಂದಾಗಿ ಕಾಮಗಾರಿಗೆ ಸ್ವಲ್ಪ ಮಟ್ಟಿಗೆ ತೊಡಕಾಗಿದ್ದರೂ, ಈಗ ಮತ್ತೆ ಕಾಮಗಾರಿ ಆರಂಭಗೊಂಡಿದೆ. 2020 ರ ಮೇಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ.

150 ಮೀಟರ್‌ ಉದ್ದ
ಸೌಪರ್ಣಿಕಾ ನದಿಗೆ ಅಡ್ಡಲಾಗಿ ನಿರ್ಮಿಸುವ‌ ಈ ಸೇತುವೆಯ ಉದ್ದ 150 ಮೀ. ಇರಲಿದ್ದು, 8.5 ಮೀ. ಅಗಲ, ಫುಟ್‌ಪಾತ್‌ ಸೇರಿದರೆ 10.5 ಮೀ. ಅಗಲವಿರಲಿದೆ. ಈ ಕಾಮಗಾರಿಗೆ ಕೋಣಿಯ ಸೈಂಟ್‌ ಆಂಥೋನಿ ಕನ್ಸಸ್ಟ್ರಕ್ಷನ್ಸ್‌ ಗುತ್ತಿಗೆದಾರರಾಗಿದ್ದಾರೆ. ಉಡುಪಿ, ಕಾರ್ಕಳ, ಈ ಮೊವಾಡಿ – ನಾಡ ಸೇತುವೆ, ಭಟ್ಕಳದಲ್ಲಿ ಒಟ್ಟು 9 ಸೇತುವೆಗಳಿಗೆ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ 42.57 ಕೋ.ರೂ. ಮಂಜೂರಾಗಿದ್ದು, ಈ ಎಲ್ಲ ಸೇತುವೆ ಕಾಮಗಾರಿ ಸೈಂಟ್‌ ಆಂಥೋನಿ ಕನ್‌ಸ್ಟ್ರಕ್ಷನ್ಸ್‌ಗೆ ನೀಡಲಾಗಿದೆ.

ರಸ್ತೆ ದುರಸ್ತಿಗೆ ಮನವಿ
ಈ ಸೇತುವೆ ಕಾಮಗಾರಿ ಮುಗಿದ ಬಳಿಕ ಇದನ್ನು ಸಂಪರ್ಕಿಸುವ ರಸ್ತೆಗಳು ಹದಗೆಟ್ಟು ಹೋಗಿದ್ದು, ಅದನ್ನು ಕೂಡ ದುರಸ್ತಿ ಮಾಡಿದರೆ ಅನುಕೂಲವಾಗಲಿದೆ. ಸುಮಾರು 300 ಕ್ಕೂ ಹೆಚ್ಚು ಮನೆಗಳ ಜನ ಈ ಸೇತುವೆಯನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಸಂಪರ್ಕ ರಸ್ತೆಯ ಡಾಮರೀಕರಣ ಆಗಲಿ ಎನ್ನುವುದು ಸ್ಥಳೀಯರ ಆಗ್ರಹ.

ಹತ್ತಿರದ ಮಾರ್ಗ
ನಾಡ, ಹಡವು, ಮೊವಾಡಿಯ ಜನರಿಗೆ ತ್ರಾಸಿಗೆ ಬಂದು ಕುಂದಾಪುರಕ್ಕೆ ತೆರಳಲು ಈ ಸೇತುವೆಯಾದರೆ ಬಹಳಷ್ಟು ಅನುಕೂಲವಾಗಲಿದೆ. ಇದಲ್ಲದೆ ಮೊವಾಡಿಯ ನಿವಾಸಿಗಳಿಗೆ ತ್ರಾಸಿ ಅಥವಾ ಮುಳ್ಳಿಕಟ್ಟೆ ಪೇಟೆಗೆ ಬರಬೇಕಾದರೆ ಕನಿಷ್ಠ 3 ಕಿ.ಮೀ. ದೂರವಿದೆ. ಆದರೆ ಸೇತುವೆಯಾದರೆ ನಾಡ ಪೇಟೆಗಿರುವ ಅಂತರ ಕೇವಲ 1 ಕಿ.ಮೀ. ಮಾತ್ರ. ಮೊವಾಡಿಯಲ್ಲಿ ಕ್ರಿಶ್ಚಿಯನ್‌ ಸಮುದಾಯದವರು ಹೆಚ್ಚಿರುವುದರಿಂದ ಪಡುಕೋಣೆ ಇಗರ್ಜಿಗೆ ಹೋಗಲು ಕೂಡ ಇದು ಹತ್ತಿರದ ಮಾರ್ಗವಾಗಿದೆ.

Advertisement

ಬಹು ವರ್ಷದ ಬೇಡಿಕೆ
ಮೊವಾಡಿಯಿಂದ ನಾಡ, ಹಡವು, ಪಡುಕೋಣೆ ಭಾಗಕ್ಕೆ ತೆರಳುವ ಜನರ ಬಹು ಕಾಲದ ಬೇಡಿಕೆಯಾಗಿತ್ತು. ಈಗ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಇಷ್ಟೊತ್ತಿಗಾಗಲೇ ಕಾಮಗಾರಿ ಮುಗಿಯಬೇಕಿತ್ತು. ಈ ಭಾಗದ ಸಾವಿರಾರು ಮಂದಿಗೆ ಈ ಸೇತುವೆಯಾದರೆ ಅನುಕೂಲವಾಗಲಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿ, ಸಂಚಾರಕ್ಕೆ ಮುಕ್ತವಾಗಲಿ.
-ಅನಂತ್‌ ಮೊವಾಡಿ,
ಮಾಜಿ ಜಿ.ಪಂ.ಸದಸ್ಯ,ಸ್ಥಳೀಯರು

ಮುಂದಿನ ವರ್ಷ ಪೂರ್ಣ
ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಈ ಬಾರಿ ಮಳೆ ಪ್ರಮಾಣ ಹೆಚ್ಚಿದ್ದು, ನದಿಯಲ್ಲಿ ನೀರು ಕೂಡ ಹೆಚ್ಚಿದ್ದುದರಿಂದ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಆದರೆ ಮುಂದಿನ ವರ್ಷದ ಮೇಯೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಈಗಾಗಲೇ ಶೇ. 50 ಭಾಗದಷ್ಟು ಕಾಮಗಾರಿ ಆಗಿದೆ. 150 ಮೀ. ಉದ್ದದ ಸೇತುವೆ ಇದಾಗಿದ್ದು, ಒಟ್ಟು10.5 ಮೀ. ಅಗಲವಿರಲಿದೆ. ಎರಡೂ ಬದಿ ತಲಾ 70 ಮೀ. ವರೆಗೆ ರಸ್ತೆ ಡಾಮರೀಕರಣ ಮಾಡಿಕೊಡಲಾಗುವುದು. ಅಲ್ಲಿಂದ ಮುಂದಕ್ಕೆ ನಮ್ಮ ರಸ್ತೆ -ನಮ್ಮ ಗ್ರಾಮ ಯೋಜನೆಯಡಿ ರಸ್ತೆ ಡಾಮರೀಕರಣ ಮಾಡಬಹುದು.
-ಮಂಜುನಾಥ್‌,
ಎಕ್ಸಿಕ್ಯೂಟಿವ್‌ ಇಂಜಿನಿಯರ್‌,ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ

Advertisement

Udayavani is now on Telegram. Click here to join our channel and stay updated with the latest news.

Next