ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಪರ ವಹಿಸಿ ಮಾತನಾಡಿದ್ದ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಕಾಂಗ್ರೆಸ್ ನಾಯಕ ಮತ್ತು ಮಾಜೀ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಇಂದು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ತಿರುವನಂತಪುರಂನಲ್ಲಿ ಸಮಾರಂಭ ಒಂದರಲ್ಲಿ ಮಾತನಾಡುತ್ತಾ ಚಿದು ಅವರು ಜನರಲ್ ರಾವತ್ ಅವರ ಮೇಲೆ ಹರಿಹಾಯ್ದರು. ‘ರಾಜಕಾರಣಿಗಳಿಗೆ ದೇಶವನ್ನು ಹೇಗೆ ನಡೆಸಬೇಕೆಂದು ನೀವು ಹೇಳುವ ಅಗತ್ಯವಿಲ್ಲ, ನೀವು, ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟನ್ನು ನೋಡಿಕೊಳ್ಳಿ’ ಎಂದು ಹೇಳಿದರು.
‘ನೀವು ಹೇಗೆ ಯುದ್ಧ ಮಾಡಬೇಕೆಂದು ನಾವು ಹೇಳಲಿಕ್ಕಾಗುವುದಿಲ್ಲವೋ, ಹಾಗೆಯೇ ನಾವು ಹೇಗೆ ರಾಜಕೀಯ ಮಾಡಬೇಕೆಂದು ನಿಮ್ಮಿಂದ ಕೇಳಿ ತಿಳಿದುಕೊಳ್ಳುವ ಅಗತ್ಯವಿಲ್ಲ, ಇದೊಂದು ‘ಶೇಮ್’’ ಎಂದು ಕೇಂದ್ರ ಸರಕಾರವನ್ನು ಸಮರ್ಥಿಸಿಕೊಂಡ ಸೇನಾ ಮುಖ್ಯಸ್ಥರ ನಡೆಯನ್ನು ಮಾಜೀ ಕೇಂದ್ರ ಸಚಿವರು ಟೀಕಿಸಿದರು.
‘ರಾಜಕಾರಣಿಗಳು ಏನು ಮಾಡುತ್ತಾರೋ ಅದನ್ನವರು ಮಾಡುತ್ತಾರೆ. ಅವರು ಏನು ಮಾಡಬೇಕೆಂದು ಹೇಳುವುದು ಸೇನೆಯ ಕೆಲಸವಲ್ಲ. ನೀವೊಂದು ಯುದ್ಧದಲ್ಲಿ ಹೋರಾಡುತ್ತಿದ್ದೀರೆಂದರೆ, ಅದನ್ನು ಹೇಗೆ ಹೋರಾಡಬೇಕೆಂದು ನಾವು ಹೇಳುವುದಿಲ್ಲ, ನೀವು ನಿಮ್ಮ ಯೋಜನೆಯಂತೆ ಹೋರಾಡುತ್ತೀರಿ ಮತ್ತು ದೇಶದ ರಾಜಕೀಯವನ್ನು ನಾವು ನಮಗೆ ಬೇಕಾದ ಹಾಗೆ ನಡೆಸುತ್ತೇವೆ’ ಎಂದು ಚಿದಂಬರಂ ಅವರು ಹೇಳಿದರು.
Related Articles
ಸಿಎಎ ಪ್ರತಿಭಟನೆಗಳು ದೇಶದ ಹಲವು ಕಡೆಗಳಲ್ಲಿ ಹಿಂಸಾರೂಪವನ್ನು ತಾಳಿರುವುದಕ್ಕೆ ಸಂಬಂಧಿಸಿದಂತೆ ಹೇಳಿಕೆಯೊಂದನ್ನು ನೀಡಿದ್ದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, ಪ್ರತಿಭಟನೆಯ ಹೆಸರಿನಲ್ಲಿ ಗಲಭೆ ನಡೆಸಿ ಸಾರ್ವಜನಿಕ ಸ್ವತ್ತುಗಳನ್ನು ಹಾನಿಗೊಳಿಸುವುದು ನಾಯಕತ್ವ ಎಣಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರು.