ಮಂಗಳೂರು: ಇಲ್ಲಿನ ಅತ್ತಾವರದ ನಂದಿಗುಡ್ಡದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ದಂಧೆಯಲ್ಲಿ 7 ಮಂದಿಯನ್ನು ಪೊಲೀಸರು ಬಂಧಿಸುವ ಮೂಲಕ ಒಟ್ಟು ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಬಂಧಿತರು ಹೊಸಬೆಟ್ಟುವಿನ ಸಂದೀಪ್ (33), ಕೈಕಂಬದ ಸಿಪ್ರಿಯನ್ ಅಂದ್ರಾದೆ (40), ಉದ್ಯಾವರ ಮಂಜೇಶ್ವರದ ಮೊಹಮ್ಮದ್ ಶರೀಫ್ (46), ತಲಪಾಡಿಯ ರಹಮತ್ (48), ತಲಪಾಡಿಯಿಂದ ಸನಾ (24) ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಬುಧವಾರ ತಿಳಿಸಿದ್ದಾರೆ.
ಕಣ್ಣೂರು, ನರಿಂಗಾನದ ಉಮರ್ ಕುಂಞಿ (43) ಮತ್ತು ಬೆಂದೋರ್‌ವೆಲ್‌ನ ಮೊಹಮ್ಮದ್ ಹನೀಫ್ (46) ಎನ್ನುವವರನ್ನು ಅಪ್ರಾಪ್ತ ವಯಸ್ಕ ಬಾಲಕಿಯರು ಮತ್ತು ಮಹಿಳೆಯರನ್ನು ದಂಧೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಬಂಧಿಸಲಾಗಿದೆ.
ಎಸ್‌ಎಂಆರ್ ಲಿಯಾನ ಅಪಾರ್ಟ್‌ಮೆಂಟ್‌ನಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರು ಮತ್ತು ಮಹಿಳೆಯರನ್ನು ಬ್ಲಾಕ್‌ಮೇಲ್ ಮೂಲಕ ವೇಶ್ಯಾವಾಟಿಕೆಗೆ ನೂಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಬಂಧಿಸಲಾಗಿತ್ತು.
ಪ್ರಕರಣದ ಸಂತ್ರಸ್ತೆ ಅಪ್ರಾಪ್ತ ವಯಸ್ಕ ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಬಂಧನಗಳನ್ನು ಮಾಡಲಾಗಿದೆ. ಬಂಧಿತ 10 ಮಂದಿಯಲ್ಲಿ 7 ಮಂದಿ “ಸಂಘಟಿತ ವೇಶ್ಯಾವಾಟಿಕೆ ದಂಧೆ” ನಡೆಸುತ್ತಿದ್ದರು ಆದರೆ ಮೂವರು ಆರೋಪಿಗಳು ಅಪ್ರಾಪ್ತ ವಯಸ್ಕರನ್ನು ಲೈಂಗಿಕವಾಗಿ ಬಳಸಿಕೊಂಡ ಗ್ರಾಹಕರು ಎಂದು ಪೊಲೀಸರು ಹೇಳಿದ್ದಾರೆ.
ವಾಣಿಜ್ಯ ಮತ್ತು ವಸತಿ ಅಪಾರ್ಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ ದಂಧೆ ಎರಡೂವರೆ ತಿಂಗಳಿನಿಂದ ಯಾರ ಗಮನಕ್ಕೂ ಬಾರದೆ ನಡೆಯುತ್ತಿತ್ತು ಎಂದು ಶಶಿಕುಮಾರ್ ತಿಳಿಸಿದ್ದಾರೆ.
ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಪೊಲೀಸರನ್ನು ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.