Advertisement

ಪರಿಷತ್‌ ಚುನಾವಣೆ: ದ.ಕ. ಸ್ಥಳೀಯಾಡಳಿತ ಕ್ಷೇತ್ರ: 6,040 ಮತದಾರರು, 389 ಮತಗಟ್ಟೆಗಳು

12:31 AM Nov 26, 2021 | Team Udayavani |

ಮಂಗಳೂರು: ವಿಧಾನ ಪರಿಷತ್‌ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಚುನಾವಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದಲ್ಲಿ 3,535 ಹಾಗೂ ಉಡುಪಿ ಜಿಲ್ಲೆಯಲ್ಲಿ 2,505 ಸೇರಿ ಒಟ್ಟು 6,040 ಮತದಾರರಿದ್ದಾರೆ. 389 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ.

Advertisement

ದ.ಕ., ಉಡುಪಿ ಜಿಲ್ಲೆಯಲ್ಲಿ ಈ ಬಾರಿ ತಾಲೂಕು ಪಂಚಾಯತ್‌ ಜಿಲ್ಲಾ ಪಂಚಾಯತ್‌ ಹಾಗೂ ಕೆಲವು ಪುರಸಭೆ, ನಗರಸಭೆ ಮತ್ತು ಪಟ್ಟಣ ಪಂಚಾಯತ್‌ಗಳಿಗೆ ಚುನಾವಣೆ ನಡೆಯದಿರುವ ಹಿನ್ನೆಲೆಯಲ್ಲಿ ಸುಮಾರು 400ರಷ್ಟು ಮತಗಳು ಕಡಿಮೆಯಾಗಿವೆ.

ಮತದಾನ ವಂಚಿತರು:

ಅವಿಭಜಿತ ದ.ಕ. ಜಿಲ್ಲೆಯಲ್ಲಿ ಶಾಸಕ, ವಿಧಾನ ಪರಿಷತ್‌ ಸದಸ್ಯರು ಸಂಸದರ ಸಂಖ್ಯೆ ಒಟ್ಟು 20. ಆದರೆ ಪ್ರಸ್ತುತ ಚುನಾವಣ ಆಯೋಗದ ನಿಯಮದಂತೆ ಪರಿಷತ್‌ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಲಭಿಸಿರುವುದು 12 ಶಾಸಕರು ಹಾಗೂ ಓರ್ವ ಸಂಸದ ಸೇರಿ 13 ಮಂದಿಗೆ ಮಾತ್ರ. ಉಳಿದ ಏಳು ಮಂದಿ ಅವಕಾಶ ವಂಚಿದ್ದಾರೆ.

ವಿಧಾನಪರಿಷತ್‌ ಚುನಾವಣೆಯಲ್ಲಿ ಸಂಸದರು, ಶಾಸಕರಿಗೆ ಮತದಾನಕ್ಕೆ ಅವಕಾಶ ಇದೆ. ಆದರೆ ಅವರು ತಮ್ಮ ವ್ಯಾಪ್ತಿಯ ಯಾವುದೇ ಒಂದು ಸ್ಥಳೀಯಾಡಳಿತ ಸಂಸ್ಥೆಯನ್ನು ಪ್ರತಿನಿಧಿಸಬೇಕಾಗುತ್ತದೆ. ಈ ಬಾರಿ ತಾಲೂಕು ಹಾಗೂ ಜಿ.ಪಂ. ಅಧಿಕಾರಾವಧಿ ಮುಕ್ತಾಯಗೊಂಡಿದ್ದು, ಚುನಾವಣೆ ನಡೆದಿಲ್ಲ. ಗ್ರಾ.ಪಂ. ವ್ಯಾಪ್ತಿಯ ಮತಗಟ್ಟೆಯಲ್ಲಿ ಹೆಸರಿದ್ದರೆ ಮತದಾನಕ್ಕೆ ಅವಕಾಶವಿರುವುದಿಲ್ಲ.

Advertisement

ಉಡುಪಿ ಜಿಲ್ಲೆಯಲ್ಲಿ ಅಭ್ಯರ್ಥಿ, ಹಾಲಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕಾಪು ಶಾಸಕ ಲಾಲಾಜಿ ಮೆಂಡನ್‌, ದ.ಕ.ದಲ್ಲಿ ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಮತ್ತು ಪ್ರತಾಪ್‌ಸಿಂಹ ನಾಯಕ್‌ ಹಾಗೂ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಅವರೂ ಈ ಬಾರಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತದಾನ ಅವಕಾಶ ವಂಚಿತರು. ಮತದಾನದ ಅವಕಾಶದ ಬಗ್ಗೆ ಚುನಾವಣಾ ಆಯೋಗವನ್ನು ಸಂಪರ್ಕಿಸಲಾಗಿದ್ದು ಅವರ ನಿರ್ದೇಶನವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕೋಟ ಬಳಿ 62 ಲಕ್ಷ ರೂ. ಮೌಲ್ಯದ ಆಸ್ತಿ:

ಅಫಿದವಿತ್‌ ಪ್ರಕಾರ ಬಿಜೆಪಿ ಅಭ್ಯರ್ಥಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ 26.86 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 36 ಲಕ್ಷ ರೂ. ಮೌಲ್ಯದ ಸ್ವರ್ಯಾಜಿತ ಸ್ಥಿರಾಸ್ತಿ ಹೊಂದಿದ್ದಾರೆ.ಅವರ ಪತ್ನಿ 7.41 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 1.37 ಕೋಟಿ ರೂ. ಮೌಲ್ಯದ ಸ್ವರ್ಯಾಜಿತ ಆಸ್ತಿ ಹೊಂದಿದ್ದಾರೆ. ಕೋಟ ಅವರಿಗೆ ಯಾವುದೇ ಸಾಲ ಇಲ್ಲ. ಪತ್ನಿ ಹೆಸರಲ್ಲಿ 40 ಲಕ್ಷ ರೂ. ಗೃಹ ಸಾಲವಿದೆ.

ಮಂಜುನಾಥ ಭಂಡಾರಿ ಬಳಿ 40 ಕೋ. ರೂ. ಆಸ್ತಿ:

ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ ಭಂಡಾರಿ ಸಲ್ಲಿಸಿರುವ ಅಫಿದಾವತ್‌ ಪ್ರಕಾರ 4.91 ಕೋಟಿ ರೂ. ಮೌಲ್ಯದ ಚರಾಸ್ತಿ, 33.83 ಕೋಟಿ ರೂ. ಮೌಲ್ಯದ ಸ್ವಯಾರ್ಜಿತ ಸ್ಥಿರಾಸ್ತಿ ಹಾಗೂ 2.03 ಕೋಟಿ ರೂ. ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. 12.13 ಕೋಟಿ ರೂ. ಸಾಲ ಇದೆ. ಪತ್ನಿ ಹೆಸರಿನಲ್ಲಿ ಚರಾಸ್ತಿ ಹಾಗೂ ಸ್ಥಿರಾಸ್ತಿ ಸೇರಿ ಸುಮಾರು 7.30 ಕೋಟಿ ರೂ.ಮೌಲ್ಯದ ಆಸ್ತಿ ಇದೆ.

ಇಂದು ಸ್ಪಷ್ಟ ಚಿತ್ರಣ :

ದಕ್ಷಿಣ ಕನ್ನಡ ಸ್ಥಳೀಯಾಡಳಿತ ಚುನಾವಣ ಕ್ಷೇತ್ರದಲ್ಲಿ ನಾಮಪತ್ರ ಹಿಂದೆಗೆದುಕೊಳ್ಳಲು ನ. 26 ಕೊನೆಯ ದಿನಾಂಕವಾಗಿದ್ದು ಚುನಾವಣ ಕಣದ ಸ್ಪಷ್ಟ ಚಿತ್ರಣ ಲಭಿಸಲಿದೆ.

2 ಸ್ಥಾನಗಳಿಗೆ 4 ಪಕ್ಷೇತರರು ಸೇರಿದಂತೆ ಒಟ್ಟು 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ನಾಮಪತ್ರ ಪರಿಶೀಲನೆ ವೇಳೆ ಓರ್ವ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next