ಮಹಾನಗರ: ವಿಧಾನ ಪರಿಷತ್ ಚುನಾವಣೆ ಶುಕ್ರವಾರ ನಡೆಯಲಿದ್ದು, ಪಾಲಿಕೆ ಸಹಿತ ತಾಲೂಕು ವ್ಯಾಪ್ತಿಯ 40 ಮತದಾನ ಕೇಂದ್ರಗಳಲ್ಲಿ ಸರ್ವ ತಯಾರಿ ನಡೆಸಲಾಗಿದೆ.
ಮತದಾನ ಹಿನ್ನೆಲೆಯಲ್ಲಿ ಪೂರ್ವಭಾವಿ ಯಾಗಿ ಗುರುವಾರ ಮಸ್ಟರಿಂಗ್ ಕೇಂದ್ರ ಗಳಿಂದ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ-ಸಿಬಂದಿ, ಭದ್ರತಾ ಸಿಬಂದಿ ಸಹಿತ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವವರು ತಮಗೆ ನಿಯೋಜಿಸಿರುವ ಮತಗಟ್ಟೆಗಳಿಗೆ ಚುನಾವಣ ಆಯೋಗ ನಿಗದಿಪಡಿಸಿದ ವಾಹನಗಳಲ್ಲಿ ತೆರಳಿದರು.
ಮಸ್ಟರಿಂಗ್ ಕೇಂದ್ರಗಳಲ್ಲಿ ಮತಪೆಟ್ಟಿಗೆ, ಮತಪತ್ರ, ಚುನಾವಣೆ ಸಾಮಗ್ರಿಗಳನ್ನು ನೀಡಿ ಪೊಲೀಸ್ ಭದ್ರತೆಯೊಂದಿಗೆ ಕಳುಹಿಸಿ ಕೊಡಲಾಯಿತು. ಇದಲ್ಲದೆ ಭದ್ರತೆಗೆ ಪೊಲೀಸ್ ಸಿಬಂದಿ, ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಆಶಾ ಕಾರ್ಯಕರ್ತೆಯರು ಕೂಡ ಜತೆಗಿದ್ದರು.
ಮಂಗಳೂರು ತಾಲೂಕಿನಲ್ಲಿ 37 ಗ್ರಾಮ ಪಂಚಾಯತ್‌ಗಳಲ್ಲಿ ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ. ಜತೆಗೆ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ಪುರಸಭೆ, ಮೂಲ್ಕಿ ಪುರಸಭೆಗಳಲ್ಲಿ ಮತದಾನ ನಡೆಯಲಿದೆ. ಮತದಾನ ಸಾಂಗವಾಗಿ ನೆರವೇರಿಸುವ ಸಂಬಂಧ ಒಟ್ಟು 48 ಮತಗಟ್ಟೆ ಅಧಿಕಾರಿಗಳು, 48 ಇತರ ಅಧಿಕಾರಿಗಳು, 48 ಚುನಾವಣೆ ವೀಕ್ಷಕರು ಹಾಗೂ 48 ಡಿ ಗ್ರೂಫ್ ನೌಕರರನ್ನು ನಿಯೋಜಿಸಲಾಗಿದೆ.
ಮತದಾನ ಹಿನ್ನೆಲೆಯಲ್ಲಿ ಮಂಗ ಳೂರು ತಾಲೂಕು ವ್ಯಾಪ್ತಿಗೆ 12 ಮ್ಯಾಕ್ಸಿ ಕ್ಯಾಬ್, 8 ಜೀಪು ಹಾಗೂ 1 ಹೆಚ್ಚುವರಿ ವಾಹನ ಸೇರಿದಂತೆ 21 ವಾಹನಗಳನ್ನು ಬಳಸಲಾಗುತ್ತದೆ. ಚುನಾವಣೆ ಹಿನ್ನೆಲೆ ಯಲ್ಲಿ ಗರಿಷ್ಠ ಭದ್ರತೆ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ಪೊಲೀಸ್ ಸಿಬಂದಿ ನಿಯೋಜಿಸಲಾಗಿದೆ.