ಎಚ್.ಡಿ.ಕೋಟೆ: ತಾಲೂಕಿನ ಗಡಿಭಾಗದ ಆದಿವಾಸಿಗರು ಸೇರಿದಂತೆ ತಾಲೂಕಿನ ಜನರ ಸಮಸ್ಯೆ ಪರಿಹಾರ ಮತ್ತು ಅರ್ಹ ಜನತೆಗೆ ಸರ್ಕಾರಿ ಸವಲತ್ತು ದೊರಕಿಸುವುದು, ಆರೋಗ್ಯ ಮತ್ತು ಶುಚಿತ್ವಕ್ಕೆ ಆದ್ಯತ್ಯ ನೀಡುವ ಸಲುವಾಗಿ ಶಾಸಕ ಅನಿಲ್ ಚಿಕ್ಕಮಾದು ಗಡಿಭಾಗದ ಎನ್.ಬೇಗೂರು ಗ್ರಾಪಂ ವ್ಯಾಪ್ತಿಯಲ್ಲಿ 3 ದಿನಗಳ ಗ್ರಾಮ ವಾಸ್ತವ್ಯ ಆರಂಭಿಸಿದ್ದಾರೆ.
ತಾಲೂಕಿನ ಭೀಮನಕೊಲ್ಲಿ ದೇವಸ್ಥಾನ ದಿಂದ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಬಳಿಕ ಬೈಕ್‌ನಲ್ಲಿ ಎನ್.ಬೇಗೂರು ಸೇರಿದಂತೆ ಗ್ರಾಪಂ ವ್ಯಾಪ್ತಿಗೆ ಒಳಪಡುವ ಜಾಗನಕೋಟೆ, ಕಾಳೇನಹಳ್ಳಿ, ಚರಟೆಹುಂಡಿ, ಸೋಮ ದೇವರಹುಂಡಿ, ಬೋರೆದೇವರಮಂಟಿ, ಮೊರ್ಬಾಂದ್ ಗ್ರಾಮಗಳ ವ್ಯಾಪ್ತಿಯಲ್ಲಿ ಗ್ರಾಮ ಸ್ವರಾಜ್ ವಿಶೇಷ ಅಭಿಯಾನ ನಡೆಸಿದರು.
ಹಾಡಿಗಳ ಜೀವನದ ನೈಜತೆ ಅವಲೋಕಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ಹಲವು ಕಾಮಗಾರಿಗಳನ್ನು ವಿಳಂಬ ಮಾಡದೇ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯ ಬಹುಸಂಖ್ಯೆಯಲ್ಲಿದ್ದು, ಒಟ್ಟಾರೆ ತಾಲೂಕಿನಲ್ಲಿ ಬಡಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಡಿಗಳ ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದು, ಮೂಲಭೂತ ಸೌಕರ್ಯ ಗಳಿಂದ ವಂಚಿತರಾಗಿದ್ದಾರೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿದೀಪ, ಅಂಗನವಾಡಿ ಕೇಂದ್ರಗಳು, ಶೌಚಾಲಯ, ಗ್ರಾಮದ ಶುಚಿತ್ವ, ಶಾಲೆ ಮತ್ತಿತರ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.
ಬುಧವಾರ ರಾತ್ರಿ ಭೀಮನಕೊಳ್ಳಿ ತೋಟಗಾರಿಕೆ ಇಲಾಖೆಯ ಸಂಸ್ಕರಣ ತರಬೇತಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿ ರಾತ್ರಿ ಕಳೆದರು. ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರು ಅದ್ಧೂರಿ ಸ್ವಾಗತದೊಂದಿಗೆ ಬರಮಾಡಿಕೊಂಡರು. 2ನೇ ದಿನವಾದ ಗುರುವಾರ ಮುಂಜಾನೆಯಿಂದ ಬೀರಂಬಳ್ಳಿ, ಬೀರಂಬಳ್ಳಿ ಹಾಡಿ, ಜಕ್ಕಳ್ಳಿ ಕಾಲೋನಿ, ಗಂಡತ್ತೂರು, ಬ್ರಹ್ಮಗಿರಿ, ಬ್ರಹ್ಮಗಿರಿಹಾಡಿ, ಬುಂಡನಮಾಳ ಹಾಡಿ, ಕನಕನಹಳ್ಳಿ, ಮನ್ನಳ್ಳಿಹಾಡಿ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ ಶಾಸಕರು, 1.50 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಮೊದಲ ದಿನದ ಭೇಟಿ ವೇಳೆ ಜಿಪಂ ಅಧ್ಯಕ್ಷ ಪರಿಮಳಾ,, ತಾಪಂ ಅಧ್ಯಕ್ಷೆ ಮಂಜುಳಾ, ಎನ್.ಬೇಗೂರು ಗ್ರಾಪಂ ಅಧ್ಯಕ್ಷ ಚಂದ್ರೇಗೌಡ, ಜಿಪಂ ಸದಸ್ಯ ವೆಂಕಟಸ್ವಾಮಿ, ಕಾಳಸ್ವಾಮಿ, ವೇಣು, ಚಿಕ್ಕವೀರನಾಯ್ಕ, ಪುರಸಭಾ ಸದಸ್ಯ ಪ್ರೇಮ್ ಸಾಗರ್, ಮದುಕುಮಾರ್, ವಿನೋದ್, ಗಣೇಶ ಚಾರಿ, ಪ್ರಭಾಕರ್, ನರಸಿಂಹ ಮೂರ್ತಿ, ಚೆಲ್ಲಪ್ಪ, ಪ್ರೇಮ್, ತಹಶೀಲ್ದಾರ್ ಆರ್.ಮಂಜುನಾಥ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಗೋಪಾಲಕೃಷ್ಣಮೂರ್ತಿ, ಸಿಡಿಪಿಒ ಆಶಾ, ಗಿರಿಜನ ಅಭಿವೃದ್ಧಿ ಅಧಿಕಾರಿ ಚಂದ್ರಪ್ಪ ಇತರರಿದ್ದರು.