ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ಹಲವು ಶಾಸಕರು ರಾಜೀನಾಮೆ ನೀಡಿದ ಬಳಿಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಇದೀಗ ವಿಧಾನಸಭಾ ಅಧಿವೇಶನದಲ್ಲಿ ನಡೆಯುವ ವಿಶ್ವಾಸಮತ ಯಾಚನೆ ಮೇಲೆಯೇ ಎಲ್ಲರ ಚಿತ್ತ ನೆಟ್ಟಿದೆ.
ಸೋಮವಾರ ಬೆಳಗ್ಗೆ ಖಾಸಗಿ ಹೋಟೆಲ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದೆ. ಸದ್ಯ ನಾವು ಇರುವ ಶಾಸಕರು ಒಗ್ಗಟ್ಟಾಗಿರೋಣ, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ಸಿದ್ದರಾಮಯ್ಯ ಧೈರ್ಯ ತುಂಬಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಸಿಎಲ್ ಪಿ ಸಭೆಯ ನಂತರ ಕಾಂಗ್ರೆಸ್ ಶಾಸಕರು ವಿಧಾನಸೌಧಕ್ಕೆ ತೆರಳಿದ್ದಾರೆ. ಬಿಜೆಪಿಯ ಬಸವರಾಜ್ ಬೊಮ್ಮಾಯಿ ಸೇರಿದಂತೆ ಕೆಲವು ಶಾಸಕರು ಸ್ಪೀಕರ್ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ ಮುಂಬೈನಲ್ಲಿರುವ ಅತೃಪ್ತ ಶಾಸಕರನ್ನು ಭೇಟಿಯಾಗಿ ಮನವೊಲಿಸಲು ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡರು ಸಿದ್ದತೆ ನಡೆಸುತ್ತಿದ್ದಾರೆ. ಆದರೆ ತಮಗೆ ಕಾಂಗ್ರೆಸ್ ಹಿರಿಯ ಮುಖಂಡರಿಂದ ಬೆದರಿಕೆ ಇದ್ದು, ನಾವು ಕಾಂಗ್ರೆಸ್ ನಾಯಕರ ಜೊತೆ ಮಾತನಾಡಲು ಬಯಸುವುದಿಲ್ಲ. ನಮಗೆ ರಕ್ಷಣೆ ಕೊಡಬೇಕೆಂದು ಕೋರಿ ಮುಂಬೈ ಪೊಲೀಸರಿಗೆ ಪತ್ರ ಬರೆದಿರುವ ಬೆಳವಣಿಗೆ ನಡೆದಿದೆ.
ಈ ಹಿನ್ನೆಲೆಯಲ್ಲಿ ಮುಂಬೈ ತೆರಳಿ ಅತೃಪ್ತ ಶಾಸಕರ ಮನವೊಲಿಸಬೇಕೆಂಬ ನಿರ್ಧಾರದಿಂದ ಕಾಂಗ್ರೆಸ್, ಜೆಡಿಎಸ್ ನಾಯಕರು ಹಿಂದೆ ಸರಿದಿದ್ದಾರೆಂದು ಮಾಧ್ಯಮದ ವರದಿ ವಿವರಿಸಿದೆ.