Advertisement

ಅಹಿಂದ ಸರಕಾರದ ಬಲ ಕುಗ್ಗಿಸಿದ ಹಿಂದ ಶಾಸಕರು ಈಗ ಬಿಜೆಪಿ ಹಿಂದೆ

02:05 AM Jul 25, 2019 | Sriram |

ಬೆಂಗಳೂರು: “ಕೋಮುವಾದಿ’ ಎಂಬ ಟ್ಯಾಗ್‌ ನೀಡಿ ಬಿಜೆಪಿಯನ್ನು ಅಧಿಕಾರ ದಿಂದ ದೂರವಿಡಲು ಜಾತ್ಯತೀತ, ಅಹಿಂದ ವರ್ಗದ ಹಿತ ರಕ್ಷಕರೆಂದು ಗುರುತಿಸಿಕೊಳ್ಳುವ ಕಾಂಗ್ರೆಸ್‌, ಜೆಡಿಎಸ್‌ ಒಟ್ಟಾಗಿ ರಚಿಸಿದ ಮೈತ್ರಿ ಸರಕಾರಕ್ಕೆ “ಹಿಂದ’ ಶಾಸಕರೇ ಕೈಕೊಟ್ಟು ಪತನಕ್ಕೆ ಕಾರಣವಾಗಿದ್ದಾರೆ.

Advertisement

ರಾಜ್ಯದಲ್ಲಿ ಬಿಜೆಪಿ ಸರಕಾರ ರಚಿಸಿಯೇ ತೀರಬೇಕೆಂದು ಹಠಕ್ಕೆ ಬಿದ್ದಂತಿದ್ದ ಬಿಜೆಪಿ ವರಿಷ್ಠರು, “ಹಿಂದ’ ಶಾಸಕರನ್ನೇ ಬಳಸಿ ಕೊಂಡು ಮೈತ್ರಿ ಸರಕಾರಕ್ಕೆ ಖೆಡ್ಡಾ ತೋಡುವ ಕಾರ್ಯವನ್ನು ಸದ್ದಿಲ್ಲದೆ ಮುಗಿಸಿದಂತಿದೆ. ಆ ಮೂಲಕ ಮೈತ್ರಿ ಪಕ್ಷಗಳ ಮತಬುಟ್ಟಿಗೆ ನೇರವಾಗಿ ಕೈ ಹಾಕಿ ಸೆಳೆಯುವ ಪ್ರಯತ್ನದಲ್ಲಿ ಆರಂಭಿಕ ಯಶಸ್ಸು ಸಿಕ್ಕಂತಾಗಿದೆ.

ಆಡಳಿತ ಪಕ್ಷದ ಶಾಸಕರನ್ನು ಸೆಳೆದು ಸಂಖ್ಯಾಬಲ ಕುಗ್ಗಿಸುವ ಬಿಜೆಪಿ ಪ್ರಯತ್ನ ಫ‌ಲ ನೀಡಿದ್ದು, ಪಕ್ಷಕ್ಕೆ ಲಾಭವಾಗುವಂತೆ ಕಾಣುತ್ತಿದೆ. ಆದರೆ ಈ ಪ್ರಯತ್ನದ ಲಾಭವನ್ನು ಈ ಹಿಂದೆ ಅಂದರೆ ಲೊಕಸಭಾ ಚುನಾವಣೆಯಲ್ಲೇ ಬಿಜೆಪಿ ಪಡೆದಂತಿದೆ. ಸದ್ಯ ರಾಜೀನಾಮೆ ನೀಡಿರುವ ಶಾಸಕರು ಪ್ರತಿನಿಧಿಸುವ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಗಳಿಸಿರುವುದು ಕಂಡು ಬಂದಿದ್ದು, ಒಂದೇ ಪ್ರಯತ್ನದಲ್ಲಿ ಬಿಜೆಪಿ ಎರಡು ಯಶಸ್ಸು ಸಾಧಿಸಿದಂತಿದೆ.

ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ನೆಲೆ, ಸಂಘಟನ ಬಲವಿದ್ದರೂ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಳೆ ಮೈಸೂರು ಭಾಗದ ಒಕ್ಕಲಿಗರ ವಿಶ್ವಾಸವನ್ನು ನಿರೀಕ್ಷಿತ ಪ್ರಮಾಣದಲ್ಲಿ ಗಳಿಸಲು ಸಾಧ್ಯವಾಗಲಿಲ್ಲ. ಆ ಕಾರಣಕ್ಕೆ ಹಳೆ ಮೈಸೂರು ಪ್ರದೇಶ ಕಾಂಗ್ರೆಸ್‌, ಜೆಡಿಎಸ್‌ನ ಭದ್ರಕೋಟೆ ಎನಿಸಿದೆ. ಈ ಭಾಗದಲ್ಲಿ ಪ್ರಭಾವಿ ಎನಿಸಿರುವ ಒಕ್ಕಲಿಗ, ಹಿಂದುಳಿದ, ಪರಿಶಿಷ್ಟ ಜಾತಿ, ಪಂಗಡದ ಮತದಾರರನ್ನು ಸೆಳೆಯುವುದು ನಿರ್ಣಾಯಕವೆನಿಸಿತ್ತು. ಈಗ ಈ ಭಾಗದ ಶಾಸಕರನ್ನೇ ಸೆಳೆಯುವ ಬಿಜೆಪಿ ಪ್ರಯತ್ನ ಕೈಗೂಡಿದಂತಿದೆ.

‘ಹಿಂದ’ ಶಾಸಕರು
ಹಿಂದುಳಿದ ವರ್ಗ: ಎಚ್.ವಿಶ್ವನಾಥ್‌, ಎಂ.ಟಿ.ಬಿ.ನಾಗರಾಜ್‌ , ಬೈರತಿ ಬಸವರಾಜು (ಕುರುಬ), ಮುನಿರತ್ನ (ನಾಯ್ಡು), ಆನಂದ್‌ ಸಿಂಗ್‌ (ರಾಜಪುತ್‌) ಪರಿಶಿಷ್ಟ ಪಂಗಡ: ರಮೇಶ್‌ ಜಾರಕಿಹೊಳಿ, ಪ್ರತಾಪಗೌಡ ಪಾಟೀಲ್. ಒಕ್ಕಲಿಗ: ಎಸ್‌.ಟಿ.ಸೋಮಶೇಖರ್‌, ನಾರಾಯಣಗೌಡ, ಕೆ.ಗೋಪಾಲಯ್ಯ, ಡಾ.ಕೆ.ಸುಧಾಕರ್‌. ಪಕ್ಷೇತರ ಶಾಸಕರು: ಆರ್‌.ಶಂಕರ್‌ (ಕುರುಬ), ಎಚ್.ನಾಗೇಶ್‌ (ಪರಿಶಿಷ್ಟ ಜಾತಿ) ಅನಾರೋಗ್ಯದ ಕಾರಣ ಸದನದಿಂದ ದೂರ ಉಳಿದ ಕಾಂಗ್ರೆಸ್‌ ಶಾಸಕ ಶ್ರೀಮಂತ ಪಾಟೀಲ್ (ಮರಾಠ)

Advertisement

ವಿಶ್ವನಾಥ್‌ ನೆರವು
ಸದ್ಯ ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ರಾಜೀನಾಮೆ ನೀಡಿದವರ ಪೈಕಿ ಉತ್ತಮ ವರ್ಚಸ್ಸು ಉಳಿಸಿಕೊಂಡ ವಿರಳರ ಪೈಕಿ ಎಚ್‌. ವಿಶ್ವನಾಥ್‌ ಒಬ್ಬರು. ಅವರಂಥವರು ಪಕ್ಷ ಸೇರಿ ದರೆ ಯಾವುದೇ ಅಪಸ್ವರ ಕೂಡ ಕೇಳಿ ಬರುವುದಿಲ್ಲ. ಮುಂಬಯಿಯಲ್ಲಿರುವ ಅತೃಪ್ತ ರಲ್ಲಿ ಒಗ್ಗಟ್ಟು ಕಾಯ್ದುಕೊಳ್ಳವಲ್ಲಿ ಅವರ ಪಾತ್ರ ಮಹತ್ವದ್ದು. ಕಾನೂನು ಇತಿಮಿತಿಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡಿ ಭಿನ್ನ ದಾರಿ ಹಿಡಿಯ ದಂತೆ ತಡೆದು ಒಮ್ಮತ ದಿಂದ ಅತೃಪ್ತರೆಲ್ಲ ಒಟ್ಟಿಗೆ ಇರುವಂತೆ ಮನವರಿಕೆ ಮಾಡುವ ಕಾರ್ಯ ವನ್ನೂ ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.

-ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next