ವಿಜಯಪುರ: ಪದೇ ಪದೇ ನನ್ನ ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ನಮ್ಮದೇ ಪಕ್ಷದ ಶಾಸಕರಾದ ಎಂ.ಬಿ. ಪಾಟೀಲ್ ತಾವಿನ್ನೂ ಜಲಸಂಪನ್ಮೂಲ ಖಾತೆ ಸಚಿವರೆಂಬ ಭ್ರಮೆಯಲ್ಲಿದ್ದಾರೆ. ಅವರಿಗೆ ನಿಜಕ್ಕೂ ಬಿಜೆಪಿ ಸರ್ಕಾರದಲ್ಲಿ ಪ್ರಭಾವ ಬೀರುವ ಶಕ್ತಿ ಇದ್ದರೆ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಮಾಡಿಸಿ ಕೊಡಲಿ ಎಂದು ಇಂಡಿ ಕ್ಷೇತ್ರದ ಶಾಸಕ ಯಶವಂತ್ರಾಯಗೌಡ ಪಾಟೀಲ ಸವಾಲು ಹಾಕಿದ್ದಾರೆ.
ಶನಿವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಎಂ.ಬಿ.ಪಾಟೀಲ ಅವರ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ಅವರು, ಮುಖ್ಯಮಂತ್ರಿ ಕಛೇರಿಯಿಂದ ನನ್ನ ಇಂಡಿ ಕ್ಷೇತ್ರದ ಕೆರೆ ತುಂಬುವ ಯೋಜನೆಗೆ ಅನುಮತಿ, ಅನುದಾನ ಸಿಗುವ ಮಾಹಿತಿ ಪಡೆದು, ಸಭೆಗೆ ಮೊದಲೇ ಮನವಿ ಸಲ್ಲಿಸಿದ್ದಾರೆ. ಅನುದಾನ ಘೋಷಣೆ ಬಳಿಕ ತಮ್ಮಿಂದಲೇ ನಾನು ಪ್ರತಿನಿಧಿಸುವ ಇಂಡಿ ತಾಲೂಕಿನ ಕೆರೆ ತುಂಬುವ ಯೋಜನೆಗೆ ಅನುದಾನ ಸಿಕ್ಕಿದೆ ಎಂಬಂತೆ ಮಾಧ್ಯಮಗಳ ಮೂಲಕ ಬಿಂಬಿಸುತ್ತಿದ್ದಾರೆ. ಇವರ ಹೇಳಿಕೆ ರಾಜಕೀಯ ಸಣ್ಣತನದ ಪ್ರತೀಕ ಎಂದು ಕಿಡಿಕಾರಿದರು.
ಇದನ್ನೂ ಓದಿ:ಕೃಷಿ ವಲಯವೇ ರಾಜ್ಯದ ಮೊದಲ ಆದ್ಯತೆ: ಸಿಎಂ ಯಡಿಯೂರಪ್ಪ
ಬಿಜೆಪಿ ವಕ್ತಾರರಂತೆ ವರ್ತಿಸುತ್ತಿರುವ ಬಬಲೇಶ್ವರ ಶಾಸಕರು ಸ್ವಪಕ್ಷೀಯ ಕಾಂಗ್ರೆಸ್ ಶಾಸಕರು. ನಾವೆಲ್ಲ ವಿಪಕ್ಷದಲ್ಲಿದ್ದೇವೆ ಎಂಬುದನ್ನು ಮರೆತು, ತಾವಿನ್ನೂ ಸಚಿವರಿದ್ದೇವೆ ಎಂಬಂತೆ ವರ್ತಿಸುತ್ತಿದ್ದಾರೆ. ಇವರ ವರ್ತನೆ ವಿರುದ್ಧ ಪಕ್ಷದ ನಾಯಕರಿಗೆ ದೂರು ನೀಡಿದ್ದಾಗಿ ಹೇಳಿದರು.
ಇವರಿಗೆ ನಿಜಕ್ಕೂ ಶಕ್ತಿ ಇದ್ದರೆ ರೇವಣಸಿದ್ಧೇಶರ ಏತ ನೀರಾವರಿ ಯೋಜನೆಗೆ ಅನುದಾನ ತಂದು ತೋರಿಸಲಿ. ಆಗ ನಾನೇ ಹೆದ್ದಾರಿ ಪಕ್ಕದಲ್ಲಿ ಅವರ ಪ್ರತಿಮೆ ಸ್ಥಾಪಿಸುತ್ತೇನೆ. ಇಲ್ಲವೇ ತಮ್ಮದೇ ಕ್ಷೇತ್ರದಲ್ಲಿ ನನ್ನಂತೆ ಸಹಕಾರಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ತೋರಿಸಲಿ. ಅವರಂತೆ ನಾನು ಬಬಲೇಶ್ವರ ಕ್ಷೇತ್ರದಲ್ಲಿ ಕೈಹಾಕಿದರೆ ಏನಾದೀತು ಎಂಬುದನ್ನು ಅರಿತು ವರ್ತಿಸಬೇಕು ಎಂದು ಕಿವಿ ಮಾತು ಹೇಳಿದರು.
ನನ್ನ ತಾಳ್ಮೆ ಹಾಗೂ ಸಹನೆಯನ್ನು ಪರೀಕ್ಷಿಸುವ ಕೆಲಸವನ್ನು ಮುಂದುವರೆಸಿದರೆ ನಾನೂ ನನ್ನ ವರಸೆ ತೋರಿಸಲು ಸಿದ್ಧ ಎಂದೂ ಹೇಳಿದರು.