ಬೆಂಗಳೂರು: ಕೋವಿಡ್-19 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮುಂದೆ ಎದುರಾಗಬಹುದಾದ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಬಿಡಿಎ ಅಧ್ಯಕ್ಷರೂ ಆಗಿರುವ ಯಲಹಂಕ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ತಮ್ಮ ಕ್ಷೇತ್ರದ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಯಲಹಂಕದ ಮಿನಿ ವಿಧಾನಸೌಧದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲೆಡೆ ಸೋಂಕಿನ ಆತಂಕ ಸೃಷ್ಟಿಯಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಮೊದಲ ಮತ್ತು ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ್ದರ ಪರಿಣಾಮ ಸಾವು ನೋವಿನ ಪ್ರಮಾಣ ತಗ್ಗಿತ್ತು. ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವ ಕುಟುಂಬಗಳ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಈ ಬಾರಿ ಎಂತಹದ್ದೇ ಸಂಕಷ್ಟ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಈಗಿನಿಂದಲೇ ಎಲ್ಲಾ ಅಗತ್ಯ ಪೂರ್ವ ಸಿದ್ಧತಾ ಕ್ರಮಗಳನ್ನು ರೂಪಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೋವಿಡ್-19 ಸಂಕಟ ಇನ್ನೂ ಅಂತ್ಯಗೊಂಡಿಲ್ಲ. ಜನರು ಈ ಬಗ್ಗೆ ಅತ್ಯಂತ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಪಾರ್ಟಿಗಳನ್ನು ಮಾಡುವುದು, ಅಗತ್ಯಕ್ಕಿಂತ ಹೆಚ್ಚು ಜನರು ಸಭೆ ಸಮಾರಂಭಗಳಲ್ಲಿ ಭಾಗಿಯಾಗುವುದು ಸೇರಿದಂತೆ ಅನಗತ್ಯವಾಗಿ ಗುಂಪುಗುಂಪಾಗಿ ಸೇರುವುದರಿಂದ ಆರೋಗ್ಯದ ಮೇಲೆ ಗಂಭೀರ ಪ್ರಮಾಣದ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ಜನರು ತಾವೇ ಸ್ವಯಂ ನಿಯಂತ್ರಣ ಹಾಕಿಕೊಂಡು ಅನಗತ್ಯ ಓಡಾಟವನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಕ್ಷೇತ್ರದಾದ್ಯಂತ ಕೋವಿಡ್ ಲಸಿಕಾಕರಣ ನಡೆಯುತ್ತಿದ್ದು, ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಮತ್ತು ಇತರರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸಬೇಕು ಎಂದು ಕರೆ ನೀಡಿದರು.
ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಮುಂದೆ ಎದುರಾಗಬಹುದಾದ ಯಾವುದೇ ಆರೋಗ್ಯ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಅಗತ್ಯ ಕ್ರಮಗಳನ್ನು ಈಗಿನಿಂದಲೇ ಸಜ್ಜುಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.