ಮೈಸೂರು: ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು ಅನಾರೋಗ್ಯ ಕಾರಣದಿಂದ ಚುನಾವಣಾ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದಾರೆ.
ನನ್ನ ಮೇಲೆ ಹಲ್ಲೆಯಾದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿದೆ. ಮೊದಲಿನಂತೆ ನಾನು ಮಾನಸಿಕ ಹಾಗೂ ದೈಹಿಕವಾಗಿಯೂ ಶಕ್ತಿಯುತವಾಗಿಲ್ಲ. ಹಾಗಾಗಿ ನನಗೆ ಟಿಕೆಟ್ ಬೇಡ. ಆದರೆ ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದು ಎಐಸಿಸಿಗೆ ಬರೆದ ಪತ್ರದಲ್ಲಿ ಸೇಠ್ ಉಲ್ಲೇಖಿಸಿದ್ದಾರೆ.
ಅನಾರೋಗ್ಯದ ಕಾರಣ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನನಗೆ ಈ ಬಾರಿ ಟಿಕೆಟ್ ಬೇಡ. ನಾನು ಇನ್ಮುಂದೆ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚಂದ್ರಯಾನ-3 ರ ಪ್ರಮುಖ ಕ್ರಯೋಜನಿಕ್ ಇಂಜಿನ್ ಪರೀಕ್ಷೆ ಸಫಲ : ಇಸ್ರೋ
ಕಳೆದ ಡಿಸೆಂಬರ್ ನಲ್ಲಿ ತನ್ವೀರ್ ಸೇಠ್ ಅವರು ಈ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಆದರೆ ಇದೀಗ ಪತ್ರ ಬಹಿರಂಗವಾಗಿದೆ. ನಿವೃತ್ತಿ ವಿಚಾರ ಬಯಲಾಗುತ್ತಿದ್ದಂತೆ ನೂರಾರು ಅಭಿಮಾನಿಗಳು ಶಾಸಕರ ನಿವಾಸದೆದುರು ಜಮಾಯಿಸಿದ್ದಾರೆ.
2019ರ ನವೆಂಬರ್ 17ರ ರಾತ್ರಿ ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.