Advertisement

ಸಾವಿನ ಮನೆಯಲ್ಲಿ ರಾಜಕೀಯ ಸಲ್ಲದು

07:39 PM Jul 16, 2021 | Team Udayavani |

ಮಹಾಲಿಂಗಪುರ: ಕೆಲವೊಂದು ಸ್ವಯಂ ಘೋಷಿತ ಮುಖಂಡರು, ನಾಯಕರು ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಅವರ ಈ ನೀತಿಯನ್ನು ಕಟುವಾಗಿ ಖಂಡಿಸುತ್ತೇನೆ ಎಂದು ಶಾಸಕ ಸಿದ್ದು ಸವದಿ ಹೇಳಿದರು.

Advertisement

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಪಟ್ಟಣದ ನೇಕಾರ ಮಲ್ಲಪ್ಪ ಯಡಪ್ಪನವರ ಮನೆಗೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನೇಕಾರರ ಸಹಾಯಕ್ಕೆ ಸರ್ಕಾರ ಹಾಗೂ ಶಾಸಕರು ಬರುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ನಿಮಗೆ ಮಾನ ಮರ್ಯಾದೆ ಇದೆಯೇ? ಸುಳ್ಳು ಹೇಳುವುದಕ್ಕೂ ಮಿತಿ ಬೇಡವೇ. ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರಾಂಪುರದ ನೇಕಾರ ಮನೆಗೆ ಹೋಗಿ ರೂ.10 ಸಾವಿರ ನೀಡಿರುವೆ. ಸರ್ಕಾರದಿಂದ ಸಹಾಯದ ಭರವಸೆ ನೀಡಿ ಬಂದಿದ್ದೇನೆ. ಶಾಸಕರು ಅಲ್ಲಿ ಹೋಗಿಲ್ಲ ಅಂತಾ ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪಕ್ಷಭೇದ ಮರೆತು ಎಲ್ಲರೂ ಬಡ ನೇಕಾರರ ನೆರವಿಗೆ ನಿಲ್ಲಬೇಕು. ಅದನ್ನು ಬಿಟ್ಟು ಸಾವಿನಲ್ಲೂ ರಾಜಕಾರಣ ಮಾಡಿ ಬರುವಂತಹ ಸೌಲಭ್ಯ ತಪ್ಪಿಸುವ ಕುತಂತ್ರ ಸ್ವಯಂ ಘೋಷಿತ ನೇಕಾರ ಮುಖಂಡ ಮತ್ತು ಕೆಲ ಕಾಂಗ್ರೆಸ್‌ ಮುಖಂಡರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಉಮಾಶ್ರೀಗೆ ತಿರುಗೇಟು: ಕಾಂಗ್ರೆಸ್‌ ಸರ್ಕಾರ ಇದ್ದಾಗ ಪ್ರಭಾವಿ ಸಚಿವೆಯಾಗಿದ್ದೀರಿ. ನೀವೇನು ಮಾಡಿದಿರಿ ಮೇಡಂ?, ನೇಕಾರರಿಗೆ ಯೋಜನೆಗಳೇನಾದರೂ ಇದ್ದರೆ ಅವು ಬಿಜೆಪಿ ಸರ್ಕಾರದ ಯೋಜನೆಗಳು. ನೇಕಾರ ಸಾಲಮನ್ನಾ, ಬಡ್ಡಿ ಮನ್ನಾ, ನೇಕಾರ ಸಮ್ಮಾನ ಯೋಜನೆ, ಸಂಧ್ಯಾ ಸುರಕ್ಷೆ ಯೋಜನೆಯಡಿ ರೂ.1000 ಕೊಟ್ಟಿದ್ದೇವೆ. ಕೆಎಚ್‌ಡಿಸಿ ಗೆ ನಿರಂತರ ನೂಲು ಪೂರೈಕೆ, ಮಜೂರಿ ಹೆಚ್ಚಳ, ವಿದ್ಯುತ್‌ ರಿಯಾಯತಿ, ರೂ.1 ಲಕ್ಷ ಸಬ್ಸಿಡಿಯಲ್ಲಿ ರಿಯಾಯತಿ ದರದಲ್ಲಿ ಪಾವರಲೂಮ್‌ ನೀಡುವ ಯೋಜನೆ ನಮ್ಮ ಸರ್ಕಾರದಿಂದ ನನ್ನ ಕಾಲದಲ್ಲಿ ಆಗಿದೆ. ಎಲ್ಲಿಂದಲೂ ಬಂದ ನಿಮ್ಮ ಮೇಲೆ ಭರವಸೆ ಇಟ್ಟು ನಿಮ್ಮನ್ನು ಮಂತ್ರಿ ಮಾಡಿದರಲ್ಲಾ ನೀವೇನು ಮಾಡಿದಿರಿ. ನಿವೇನೂ ಮಾಡಿಲ್ಲ ಅಂತಲೇ ನಿಮ್ಮನ್ನು ತಿರಸ್ಕಾರ ಮಾಡಿ ಕಳಸ್ಯಾರ. ಅದನ್ನು ಮೊದಲು ಅರಿಯಿರಿ ಎಂದು ತಿರುಗೇಟು ನೀಡಿದರು.

ರಾಜ್ಯ ನೇಕಾರ ಮುಖಂಡ ಮನೋಹರ ಶಿರೋಳ ಮಾತನಾಡಿ, ಸ್ವಯಂ ಘೋಷಿತ ನೇಕಾರ ನಾಯಕರು ಸರ್ಕಾರ ಮತ್ತು ಶಾಸಕರ ಮೇಲೆ ಅಪಾದನೆ ಮಾಡುತ್ತಿರುವುದು ಖಂಡನೀಯ. ನೇಕಾರರ ಬಗ್ಗೆ ಕಾಳಜಿ ಇದ್ದರೆ ಮೊದಲು ನಿಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಿ. ಆಗ ಜ್ಞಾನೋದಯವಾಗುತ್ತದೆ ಎಂದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಅಕ್ಕಿವಾಟ, ಪುರಸಭೆ ಮಾಜಿ ಅಧ್ಯಕ್ಷ ಜಿ.ಎಸ್‌. ಗೊಂಬಿ, ಸದಸ್ಯ ಶೇಖರ ಅಂಗಡಿ, ನೇಕಾರ ಯುವ ಮುಖಂಡರಾದ ಪ್ರಕಾಶ ಮರೆಗುದ್ದಿ, ಶ್ರೀಕಾಂತ ಜಗದಾಳ, ಚನ್ನಪ್ಪ ಹುಣಶ್ಯಾಳ ಸೇರಿದಂತೆ ಹಲವರು ಇದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next